ಎಕೆ-47 ಬಳಸುವುದಕ್ಕೆ ತರಬೇತಿ ಕೊಡೋರ್ಯಾರು?

ಪೊಲೀಸ್ ಅಕಾಡೆಮಿಯಲ್ಲಿ ಬೋಧಕರೇ ಇಲ್ಲ | ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಶೇ.40 ಸಿಬ್ಬಂದಿ ಕೊರತೆ

ಬೆಂಗಳೂರು: ಇಲಾಖೆಗೆ ಹೊಸದಾಗಿ ಸೇರುವ ಪೊಲೀಸರಿಗೆ ವೃತ್ತಿಪರ ಕೌಶಲ, ಹೊಸ ಸವಾಲು ಎದುರಿಸುವ ತರಬೇತಿ ನೀಡಿ ಖಾಕಿ ಪಡೆಯ ವೇಗ ಹೆಚ್ಚಿಸಲು ಪೊಲೀಸ್ ಅಕಾಡೆಮಿಯಲ್ಲಿ ಬೋಧಕರೇ ಇಲ್ಲ.

ರಾಜ್ಯದಲ್ಲಿ 13 ಪೊಲೀಸ್ ಅಕಾಡೆಮಿ/ಶಾಲೆಗಳಿವೆ. ತರಬೇತಿ, ರಿಫ್ರೆಷರ್ ಕೋರ್ಸ್​ಗಳು, ಅಲ್ಪಾವಧಿ ಕೋರ್ಸ್, ಸೇವಾ ತರಬೇತಿ ಇತ್ಯಾದಿ ಒದಗಿಸಲಾಗುತ್ತಿದೆ. ಆದರಿಲ್ಲಿ ಬೋಧಕರು, ಶಸ್ತ್ರಾಸ್ತ್ರಗಳ ಕೊರತೆ ಕಾಡುತ್ತಿದೆ ಎಂದು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ (ಸಿಎಜಿ)ಯಲ್ಲಿ ಉಲ್ಲೇಖಿಸಲಾಗಿದೆ.

ತರಬೇತಿ ವೇಳೆ 0.303 ರೈಫಲ್, 7.62 ಎಸ್​ಎಲ್​ಆರ್​ಗಳಿಂದ ಕನಿಷ್ಠ 15 ಸುತ್ತು ಫೈರಿಂಗ್ ಮಾಡಬೇಕು. ಹುಬ್ಬಳ್ಳಿ, ಧಾರವಾಡ, ಮೈಸೂರು, ಹಾಸನ, ಕಡೂರು, ಐಮಂಗಲ, ಥಣಿಸಂದ್ರ ಕೇಂದ್ರಗಳಿಗೆ ಸರ್ಕಾರ ಶಸ್ತ್ರಾಸ್ತ್ರಗಳನ್ನೇ ಪೂರೈಕೆ ಮಾಡಿಲ್ಲ. ಮೈಸೂರಿನ ಅಕಾಡೆಮಿಯಲ್ಲಿ 12 ಬೋರ್ ಪಂಪ್ ಆಕ್ಷನ್ ಬಿಟ್ಟರೆ ಮತ್ಯಾವುದೇ ಶಸ್ತ್ರಾಸ್ತ್ರ ಇಲ್ಲ. ಕವಾಯತು/ನಿರ್ಗಮನ ಪರೇಡ್​ಗೆ ಅಗತ್ಯವಿದ್ದ ರೈಫಲ್​ಗಳು ಇಲ್ಲ. ಅದಕ್ಕಾಗಿ ಜಿಲ್ಲಾ ಪೊಲೀಸ್, ಕೆಎಸ್​ಆರ್​ಪಿಯಿಂದ ತಾತ್ಕಾಲಿಕವಾಗಿ ಶಸ್ತ್ರಾಸ್ತ್ರ ಪಡೆದು ತರಬೇತಿ ನೀಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಎಕೆ-47 ತರಬೇತಿ ಕೊಟ್ಟಿಲ್ಲ: 2015-16ರ ಅವಧಿಯಲ್ಲಿ ಮೈಸೂರು ಅಕಾಡೆಮಿಯಲ್ಲಿ ಪಿಎಸ್​ಐಗಳಿಗೆ ಎಕೆ-47 ಬಳಸುವ ಕುರಿತು ತರಬೇತಿ ನೀಡಬೇಕು. ಬೋಧಕರಿಲ್ಲದ ಕಾರಣಕ್ಕೆ ಕೇವಲ 7.62 ಎಂಎಂ ಎಸ್​ಎಲ್​ಆರ್, 0.303, 9 ಎಂಎಂ ಪಿಸ್ತೂಲ್ ಫೈರಿಂಗ್ ತರಬೇತಿ ನೀಡಲಾಗುತ್ತಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆ ಕುರಿತು ತರಬೇತಿಯನ್ನೇ ನೀಡುತ್ತಿಲ್ಲ.

ನಕ್ಸಲ್ ನಿಗ್ರಹ ಪಡೆಗಿಲ್ಲ ವಿಶೇಷ ತರಬೇತಿ

ರಾಜ್ಯದಲ್ಲಿ 14 ನಕ್ಸಲ್ ನಿಗ್ರಹ ಪಡೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿನ ಸಿಬ್ಬಂದಿಗೆ ಬಂಡಾಯ, ಜಂಗಲ್ ಯುದ್ಧ ಸೇರಿ ನಾನಾ ತರಬೇತಿ ನೀಡಬೇಕು. ಯಾವುದೇ ಕ್ಯಾಂಪ್​ಗಳಲ್ಲಿ ಶೇ.50ಕ್ಕಿಂತ ಹೆಚ್ಚು ಸಿಬ್ಬಂದಿಗೆ ತರಬೇತಿ ನೀಡಿಲ್ಲ. ತಿರುಮಣಿ ಕ್ಯಾಂಪ್​ನಲ್ಲಿ ಪೊಲೀಸರಿಗೆ ತರಬೇತಿ ನೀಡಿಲ್ಲ.

ಉಗ್ರರು, ನಕ್ಸಲ್ ಎದುರಿಸಲು ಬಲಬೇಕು

ಭಯೋತ್ಪಾದನೆ, ನಕ್ಸಲ್ ಚಟುವಟಿಕೆ, ಸಂಘಟಿತ ಅಪರಾಧ ಮತ್ತು ಭೂಗತ ಚಟುವಟಿಕೆಗಳು ನಡೆದಾಗ ತಕ್ಷಣ ಹೋರಾಟ ನಡೆಸಲು ವಿಶೇಷ ಶಸ್ತ್ರಾಸ್ತ್ರ ಮತ್ತು ಕಾರ್ಯತಂತ್ರ ಪಡೆ (ಎಸ್​ಡಬ್ಲ್ಯುಎಟಿ)ಯನ್ನು ಎಲ್ಲ ಪೊಲೀಸ್ ಘಟಕಗಳಲ್ಲಿ ರಚಿಸಿದ್ದು, ಕೇವಲ 21 ಸಿಬ್ಬಂದಿ ವಿಶೇಷ ತರಬೇತಿ ಪಡೆದಿದ್ದಾರೆ. ಯಾರೊಬ್ಬರೂ ಎಕೆ- 47 ಬಳಕೆಯ ತರಬೇತಿ ಪಡೆದಿಲ್ಲ.

ಎಫ್​ಎಸ್ಸೆಲ್​ಗಿಲ್ಲ ತಜ್ಞರು, ಧೂಳು ಹಿಡಿದ ಕೇಸ್​ಗಳು

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಸಂಗ್ರಹಿಸುವ ಮಾದರಿ ವಿಶ್ಲೇಷಿಸಿ ಪೊಲೀಸರ ತನಿಖೆಗೆ ತಾಂತ್ರಿಕ ಮತ್ತು ವೈಜ್ಞಾನಿಕ ನೆರವು ನೀಡುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್​ಎಸ್​ಎಲ್) ತಜ್ಞರ ಕೊರತೆ ಕಾಡುತ್ತಿದೆ. ಸಾವಿರಾರು ಪ್ರಕರಣಗಳು ಬಾಕಿ ಇದ್ದು, ತನಿಖೆಗೆ ಅಡ್ಡಿ ಉಂಟಾಗಿ ಅಪರಾಧಿಗಳು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನ ಮಡಿವಾಳದಲ್ಲಿನ ಎಫ್​ಎಸ್​ಎಲ್

ವಿಭಾಗದ ಜತೆಗೆ ಮೈಸೂರು, ಮಂಗಳೂರು, ದಾವಣಗೆರೆ, ಕಲುಬುರಗಿ ಮತ್ತು ಬೆಳಗಾವಿಯಲ್ಲಿ ತೆರೆಯಲಾಗಿದೆ. ಬಯಾಲಜಿ, ಟಾಕ್ಸಿಕಾಲಜಿ, ಫೋಟೋಗ್ರಫಿ, ಕೆಮಿಸ್ಟ್ರಿ, ಫಿಸಿಕ್ಸ್, ಫೂರ್ ಆಮ್್ಸರ್ ಡಾಕ್ಯು ಮೆಂಟ್ಸ್, ಡಿಎನ್​ಎ, ಫೊರೆನ್ಸಿಕ್ಸ್ ಸೈಕಾಲಜಿ ಮತ್ತು ಸೈಬರ್ ಫೊರೆನ್ಸಿಕ್ಸ್ ವಿಭಾಗಗಳು ಪೊಲೀಸ್ ತನಿಖೆಗೆ ನೆರವಾಗಿವೆ.

ರಾಜ್ಯ ಸರ್ಕಾರ 2001ರಲ್ಲಿ ಪದವೃಂದ ಮತ್ತು ನೇಮಕಾತಿ (ಸಿ/ಆರ್) ಪ್ರಕಾರ 148 ತಾಂತ್ರಿಕ, 135 ಗುಮಾಸ್ತ ಹುದ್ದೆಗಳನ್ನು ಮಂಜೂರು ಮಾಡಿತ್ತು. ಮತ್ತೆ 2015ರಲ್ಲಿ ಹೆಚ್ಚುವರಿಯಾಗಿ 284 ತಾಂತ್ರಿಕ ಮತ್ತು 25 ಗುಮಾಸ್ತರ ಹುದ್ದೆ ಮಂಜೂರು ಮಾಡಿ 2017ರ ಆಗಸ್ಟ್ ನಲ್ಲಿ ಅನುಮೋದನೆ ನೀಡಿ ವಿಳಂಬ ನೀತಿ ಅನುಸರಿಸಿದೆ. ಇದರಿಂದ ಶೇ.40 ಸಿಬ್ಬಂದಿ ಕೊರತೆ ಇದೆ.

ಪ್ರಕರಣಗಳ ಸಂಖ್ಯೆ ಗಣನೀಯ ಹೆಚ್ಚಳ: ಮತ್ತೊಂದೆಡೆ ದಿನೇ ದಿನೇ ಬರುವ ಪ್ರಕರಣಗಳ ಗಣನೀಯವಾಗಿ ಹೆಚ್ಚಾಗಿ ಡಿಎನ್​ಎ ವಿಭಾಗದಲ್ಲಿ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ.

2016ರಲ್ಲಿ 21,052 ಪ್ರಕರಣಗಳು ಎಫ್​ಎಸ್​ಎಲ್ ವಿಭಾಗಕ್ಕೆ ಬಂದಿದ್ದು, ಇದರಲ್ಲಿ 2017 ಮೇ ಅಂತ್ಯಕ್ಕೆ 3,946 ಬಾಕಿ ಉಳಿದಿವೆ. ಈ ಪೈಕಿ 1,052 ಪ್ರಕರಣಗಳು 2016ನೇ ಸಾಲಿಗೆ ಸೇರಿದ್ದು, 334 ಪ್ರಕರಣಗಳು ಒಂದು ವರ್ಷಕ್ಕಿಂತ ಹೆಚ್ಚುಕಾಲ ಹಾಗೂ 99 ಪ್ರಕರಣಗಳು ಮೂರು ವರ್ಷಗಳಿಂದ ಬಾಕಿ ಉಳಿದಿವೆ ಎಂದು ಸಿಎಜಿ ಅಧಿಕಾರಿಗಳಿಗೆ ಎಫ್​ಎಸ್​ಎಲ್ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಫಿಂಗರ್​ಪ್ರಿಂಟ್  ಸ್ಕ್ಯಾನರ್ ಮೂಲೆಗೆ

ಆರೋಪಿಗಳ ಬೆರಳ್ಳಚ್ಚನ್ನು ಇಂಕ್​ನಲ್ಲಿ ಬಿಳಿ ಕಾಗದದ ಮೇಲೆ ಪಡೆಯಲಾಗುತ್ತಿತ್ತು. ಇದು ತನಿಖಾ ಹಂತದಲ್ಲಿ ಹೊಂದಾಣಿಕೆಯಾಗದೆ ತೊಂದರೆ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು 5.17 ಕೋಟಿ ರೂ. ವೆಚ್ಚದಲ್ಲಿ ಫಿಂಗರ್​ಪ್ರಿಂಟ್ ಸ್ಕಾ್ಯನರ್, ವೆಬ್​ಕ್ಯಾಮರಾ, ಸ್ಕಾ್ಯನ್ ಸಾಫ್ಟ್​ವೇರ್, ಲೇಸರ್ ಪ್ರಿಂಟರ್ ಒಳಗೊಂಡ 226 ಸಿಸ್ಟಮ್ಳನ್ನು ಖರೀದಿಸಿ ಎಲ್ಲ ಜಿಲ್ಲಾ ಫಿಂಗರ್​ಪ್ರಿಂಟ್ ಬ್ಯೂರೋಗೆ ಸರ್ಕಾರ ವಿತರಿಸಿತ್ತು. ಆದರೆ, ತಂತ್ರಾಂಶ/ಸರ್ವರ್ ಉನ್ನತೀಕರಣ, ಸ್ಕಾ್ಯನರ್ ಬದಲಾಯಿಸಲು ಟೆಂಡರ್ ಕರೆಯಬೇಕಿತ್ತು. ಇಲ್ಲಿಯವರೆಗೂ ಕರೆದಿಲ್ಲ. ಮೀಸಲಿಟ್ಟ 10 ಕೋಟಿ ರೂ. ಹಾಗೇ ಉಳಿದಿದೆ. ಇತ್ತ ವಿತರಿಸಲಾಗಿದ್ದ ಫಿಂಗರ್​ಪ್ರಿಂಟ್ ಸ್ಕಾ್ಯನರ್ ಸಹ ರಿಪೇರಿಯಾಗಿವೆ. ಎಂದಿನಂತೆ ಠಾಣೆಗಳಲ್ಲಿ ದೈಹಿಕವಾಗಿ ಬೆರಳ್ಳಚ್ಚು ಸಂಗ್ರಹಿಸಲಾಗುತ್ತಿದೆ.


ರಜೆ ಕೊಡದೆ ಕಿರುಕುಳ, ಡಿವೈಎಸ್​ಪಿ ಕಣ್ಣೀರಿನ ಪತ್ರ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಲಧಿಕಾರಿಗಳ ಕಿರುಕುಳ, ತಾರತಮ್ಯ ನೀತಿ, ಮಾನಸಿಕ ಹಿಂಸೆ ಆರೋಪ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಕೇವಲ 1 ದಿನದ ರಜೆಗಾಗಿ ಮೇಲಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಡಿವೈಎಸ್​ಪಿಯೊಬ್ಬರು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜುಗೆ ಪತ್ರ ಬರೆದು ನೋವು ಹಂಚಿಕೊಂಡರೂ ಸ್ಪಂದನೆ ಸಿಗದೆ ಪತ್ರವನ್ನು ಮಾಧ್ಯಮಕ್ಕೆ ಬಹಿರಂಗಪಡಿಸಿದ್ದು, ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದೆ. ಪತ್ರದಲ್ಲಿ ಡಿವೈಎಸ್​ಪಿ ಹೆಸರು ಉಲ್ಲೇಖಿಸಿಲ್ಲ.

ರಾಜ್ಯ ತಂಡವನ್ನು ಪ್ರತಿನಿಧಿಸಲು ಅವಕಾಶ ಪಡೆದ 12 ವರ್ಷದ ಮಗಳನ್ನು ಟ್ರೖೆನಿಂಗ್ ಕ್ಯಾಂಪ್​ಗೆ ಅನಿವಾರ್ಯವಾಗಿ ಬಿಟ್ಟು ಬರಬೇಕಿತ್ತು. ಅದಕ್ಕಾಗಿ 9 ದಿನಗಳ ಮೊದಲೇ ಮೇಲಧಿಕಾರಿಗೆ ರಜೆ ಚೀಟಿ ನೀಡಿದ್ದರೂ ರಜೆ ಕೊಡದೆ ಮಾನಸಿಕ ಕಿರುಕುಳ ನೀಡಿದರು. ಅನಿವಾರ್ಯವಾಗಿ ಮಗಳನ್ನು ಕರೆದುಕೊಂಡು ಹೋಗಿದ್ದಕ್ಕೆ ಕರ್ತವ್ಯ ನಿಷ್ಕಾಳಜಿತನ, ಉದ್ಧಟತನ ಎಂದು ಪರಿಗಣಿಸಿ ನೋಟಿಸ್ ನೀಡಲಾಗಿದೆ. ಅಂದೇ ಇನ್ನೊಬ್ಬ ಸಹೋದ್ಯೋಗಿ ರಜೆ ಚೀಟಿ ಕೊಡದೆ ಮೇಲಧಿಕಾರಿಗೆ ಗಮನಕ್ಕೆ ತರದೆ ವೈಯಕ್ತಿಕ ಕೆಲಸಕ್ಕೆ ರಜೆ ಪಡೆದರೆ ಅಂತಹವರಿಗೆ ಪ್ರಶಂಸೆ ಸಿಗುತ್ತದೆ. 23 ದಿನಗಳ ತರಬೇತಿ ಅವಧಿಯಲ್ಲಿ ಕೇವಲ ಒಂದು ದಿನ ಹೊರ ಹೋಗಿದ್ದೆ. ಅನುಮತಿ ಇಲ್ಲದೆ 3-4 ದಿನ ಹೊರಗೆ ಹೋಗಿರುವವರನ್ನು ಪ್ರಶ್ನೆ ಮಾಡಿಲ್ಲ. ನನಗೆ ಮಾತ್ರ ತಾರತಮ್ಯ ಮಾಡಲಾಗುತ್ತಿದೆ ಎಂದು ನೋವು ಹಂಚಿಕೊಂಡಿದ್ದಾರೆ.

ಕನ್ನಡ ಪತ್ರಕ್ಕೆ ಬೆಲೆ ಇಲ್ವಾ?

ಡಿಜಿಪಿಗೆ ಕನ್ನಡ ಪತ್ರಗಳನ್ನು ಓದಲು ಬರುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಬರುವ ಪತ್ರಗಳನ್ನು ಪರಿಗಣಿಸದೆ ದೂರ ತಳ್ಳುತ್ತಾರೆ ಎಂದು ಕಚೇರಿ ಸಿಬ್ಬಂದಿ ಹೇಳುತ್ತಾರೆ. ಇದು ಸತ್ಯವಾ ಎಂದು ಪತ್ರದಲ್ಲಿ ಡಿವೈಎಸ್​ಪಿ ಪ್ರಶ್ನಿಸಿದ್ದಾರೆ.

ಎಂ.ಕೆ.ಗಣಪತಿ, ಹಂಡಿಬಾಗ್ ಉಲ್ಲೇಖ

ಡಿಜಿಪಿಗೆ ಬರೆದಿರುವ ಪತ್ರದಲ್ಲಿ ಡಿವೈಎಸ್​ಪಿ ಎಂ.ಕೆ.ಗಣಪತಿ ನಿಗೂಢ ಸಾವು ಮತ್ತು ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ, ಸಿಐಡಿಯ ಡಿಟೆಕ್ಟಿವ್ ಇನ್​ಸ್ಪೆಕ್ಟರ್ ಗಿರೀಶ್ ಸಾವಿನ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಹಿರಿಯ ಅಧಿಕಾರಿಗಳನ್ನು ಓಲೈಸಲು ಡಿಜಿಪಿ ಕಚೇರಿಯಿಂದ 2016 ಜೂ.24ರಂದು ಗಣಪತಿಗೆ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಬೆಂಗಳೂರು ಕಮಿಷನರ್​ಗೆ ಪತ್ರ ರವಾನಿಸಲಾಗಿತ್ತು. ಈ ವಿಷಯ ತಿಳಿದ ಗಣಪತಿ ಮಾಧ್ಯಮದ ಮುಂದೆ ನೋವು ಹೇಳಿಕೊಂಡು ಸಾವನ್ನಪ್ಪಿದರು. ಇಲಾಖೆ ಯಲ್ಲಿನ ಕಿರುಕುಳದಿಂದಾಗಿಯೇ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಿಬ್ಬರು ಸತ್ತ ಮೇಲೆ ಕ್ಲೀನ್​ಚಿಟ್ ಕೊಡಲಾಗಿದೆ ಎಂದು ಡಿವೈಎಸ್​ಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.