ಚಿಕ್ಕಮಗಳೂರು: ಸಂಸದೆ ಶೋಭಾ ಕರಂದ್ಲಾಜೆ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಪ್ರತಿಭಟನಾ ನಿರತ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಖಲಿಸಿರುವ ಪ್ರಕರಣ ವಾಪಸ್ ಪಡೆಯಲು ಜಿಲ್ಲಾ ಕಾಂಗ್ರೆಸ್ ಪೊಲೀಸರಿಗೆ ವಾರದ ಗಡುವು ನೀಡಿದೆ.
ಈರುಳ್ಳಿ, ಅಡುಗೆ ಅನಿಲ ಹಾಗೂ ಪೆಟ್ರೋಲ್ ದರ ಏರಿಕೆ ಖಂಡಿಸಿ ಜಿಪಂ ಎದುರು ಜ.6ರಂದು ಪಕ್ಷದ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಸಂಸದೆಗೆ ಮನವಿ ಕೊಡಲು ಮುಂದಾದಾಗ ಮನವಿ ಸ್ವೀಕರಿಸದೆ ಹಾಗೆ ತೆರಳಿದ್ದರು. ಹೀಗಿದ್ದರೂ ಅವರ ವಿರುದ್ಧ ಹಲ್ಲೆಗೆ ಮುಂದಾದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇಂದು ವಾರದೊಳಗೆ ಪ್ರಕರಣ ಹಿಂಪಡೆಯದಿದ್ದರೆ ಪ್ರತಿ ತಾಲೂಕು ಕೇಂದ್ರದಲ್ಲಿ ಪೊಲೀಸರ ವಿರುದ್ಧ ಹಾಗೂ ಕನ್ನಡ ವಿರೋಧಿ ನಿಲುವು ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶೃಂಗೇರಿಯಲ್ಲಿ ಜ.10 ಮತ್ತು 11ರಂದು ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧಿಕಾರಿಗಳ ಮೂಲಕ ಸಚಿವರು ಕೈಗೊಂಡ ತೀರ್ಮಾನ ಕನ್ನಡ ಭಾಷೆ ಮತ್ತು ನಾಡಿಗೆ ಮಾಡಿದ ಅಪಮಾನ, ದ್ರೋಹ, ಸರ್ವಾಧಿಕಾರಿ ಧೋರಣೆ ಎಂದು ದೂರಿದರು.
ಪೊಲೀಸರು ಸಮ್ಮೇಳನ ನಡೆಸದಂತೆ ನೋಟಿಸ್ ನೀಡಿರುವ ಕ್ರಮ ಸರಿಯಲ್ಲ. ಕೆಲವರು ಟಯರ್ ಸುಡುವ, ಪೆಟ್ರೋಲ್ ಬಾಂಬ್ ಬಳಸುವ ಸಂಭವವಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಹಾಗಾದರೆ ಅವರನ್ನು ಏಕೆ ಬಂಧಿಸಿಲ್ಲ. ಸಮ್ಮೇಳನದ ವಿರುದ್ಧದ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡು ಕರೆದೊಯ್ಯುತ್ತಿದ್ದ ಬಸ್ ತಡೆದವರನ್ನು ಬಂಧಿಸದೆ ಅವರನ್ನು ರಕ್ಷಿಸುತ್ತಿದೆ. ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.