ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಲಂಚ ಕೇಳಿದ ಸಿಬ್ಬಂದಿ

 ಹಿಂದು ಸಂರಕ್ಷಣಾ ಸಮಿತಿಯ ಕೆ.ಆರ್.ಶೆಟ್ಟಿ ಆರೋಪ

 ಮಂಗಳೂರು: ಮಾಹಿತಿ ಹಕ್ಕಿನಲ್ಲಿ ಉತ್ತರ ನೀಡಲು ನಗರ ಪೊಲೀಸ್ ಆಯುಕ್ತರ ಕಚೇರಿ ಟಪಾಲು ಸಿಬ್ಬಂದಿ ನವೀನ್‌ದೀಪ್ ಎಂಬುವರು ಹಣಕ್ಕೆ ಬೇಡಿಕೆ ಇಟ್ಟಿರುವುದು ರಹಸ್ಯ ಕಾರ್ಯಾಚರಣೆ ವೇಳೆ ಬಯಲಾಗಿದೆ ಎಂದು ಹಿಂದು ಸಂರಕ್ಷಣಾ ಸಮಿತಿ ಮುಖಂಡ ಕೆ.ಆರ್.ಶೆಟ್ಟಿ ಆರೋಪಿಸಿದ್ದಾರೆ.

ರೌಡಿಶೀಟರ್ ವಿವರ ಸಂಬಂಧಿಸಿ ಮಾಹಿತಿಗೆ ಅರ್ಜಿ ಸಲ್ಲಿಸಿದಾಗ, ‘ಈ ಮಾಹಿತಿ ಇಲ್ಲಿ ಸಿಗುವುದಿಲ್ಲ. ನ್ಯಾಯಾಲಯದಿಂದ ಬರಬೇಕು’ ಎಂದಿದ್ದ ನವೀನ್ ಬಳಿಕ ಮಾತನಾಡಲು ಸಮೀಪದ ಮಾಲ್‌ಗೆ ಕರೆದಿದ್ದ. ಆತ ತಿಳಿಸಿದಲ್ಲಿಗೆ ರಹಸ್ಯ ಕ್ಯಾಮರಾದೊಂದಿಗೆ ತೆರಳಿ ನವೀನ್ ಆಡಿದ ಎಲ್ಲ ಮಾತುಗಳನ್ನು ಕೆ.ಆರ್.ಶೆಟ್ಟಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

‘ಮೂವರ ಮೇಲೆ ದಾಖಲಾಗಿರುವ ಪ್ರಕರಣಗಳ ಮಾಹಿತಿ ನೀಡಲು ನನ್ನ ಲೆವೆಲ್‌ಗೆ ತಲಾ ಎರಡೂವರೆ ಸಾವಿರ ರೂ., ಡಿಸಿಪಿ ಲೆವೆಲ್ ಆದರೆ 8 ಸಾವಿರ ರೂ. ಆಗುತ್ತದೆ. ಕೆಲಸ ಆದಷ್ಟು ಬೇಗ ಮಾಡಿಕೊಡುತ್ತೇನೆ. ರೌಡಿಶೀಟರ್ ಹಣೆಪಟ್ಟಿಯನ್ನು ತೆಗೆಸಿಕೊಡಲು ವ್ಯವಸ್ಥೆ ಇದ್ದು, ಬೇಕಾದರೆ ಆ ಕೆಲಸವನ್ನೂ ಮಾಡಿಕೊಡಲಾಗುವುದು’ ಎಂದು ನವೀನ್ ತಿಳಿಸಿದ್ದಾನೆ. ಮಾತುಕತೆ ವೇಳೆ ನವೀನ್ ಇನ್ನೊಬ್ಬರಿಗೆ ಕರೆ ಮಾಡಿ, ಇಷ್ಟು ಮೊತ್ತ ಹೇಳುತ್ತಿದ್ದಾರೆ. ಒಪ್ಪಿಕೊಳ್ಳಬಹುದಾ ಎಂದೆಲ್ಲ ವಿಚಾರಿಸುತ್ತಿದ್ದ ಎಂದು ಕೆ.ಆರ್.ಶೆಟ್ಟಿ ದೂರಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಈ ಬಗ್ಗೆ ಪೊಲೀಸ್ ಆಯುಕ್ತರ ಕಚೇರಿ ಸಹಾಯಕ ಆಡಳಿತಾಧಿಕಾರಿ ಅವರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಪ್ರಾಥಮಿಕ ವರದಿ ಬಂದ ತಕ್ಷಣ ನವೀನ್‌ದೀಪ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪ್ರತ್ಯೇಕ ಅಧಿಕಾರಿ ನೇಮಿಸಿ ತನಿಖೆ ನಡೆಸಲಾಗುವುದು. ಇದರ ಹಿಂದೆ ಯಾರಾದರೂ ಇದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು.
|ಟಿ.ಆರ್.ಸುರೇಶ್, ಮಂಗಳೂರು ನಗರ ಪೊಲೀಸ್ ಆಯುಕ್ತರು