ಪೊಲೀಸ್ ಬಲೆಗೆ ಖತರ್ನಾಕ್ ಮನೆಗಳ್ಳ

ಹುಬ್ಬಳ್ಳಿ: ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸಿರುವ ಉಪನಗರ ಠಾಣೆ ಪೊಲೀಸರು 3.61 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ನರೇಗಲ್ ಮೂಲದ ಹನುಮಂತ ಅಲಿಯಾಸ್ ಹನುಮ್ಯಾ ಸುಂಕಪ್ಪ ದುರಗಿಮುರಗಿ (21) ಬಂಧಿತ ಆರೋಪಿ. ಸದ್ಯ ಬೆಂಗಳೂರಿನ ಮಾಗಡಿ ರೋಡ್ ಗೊಲ್ಲರ ಹಟ್ಟಿಯಲ್ಲಿ ವಾಸವಿದ್ದ. ಆತನಿಂದ 12 ತೊಲೆ ಬಂಗಾರದ ಆಭರಣಗಳು, 175 ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಕೀಲಿ ಮುರಿದು ಚಿನ್ನಾಭರಣ, ನಗದು ಕದ್ದು ಪರಾರಿಯಾಗುತ್ತಿದ್ದ. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ, ಧಾರವಾಡದ ವಿದ್ಯಾಗಿರಿ, ನವನಗರ ಹಾಗೂ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಡಿಸಿಪಿಗಳಾದ ರವೀಂದ್ರ ಗಡಾದಿ, ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಉಪನಗರ ಠಾಣೆ ಇನ್ಸ್​ಪೆಕ್ಟರ್ ಜಾಕ್ಸನ್ ಡಿಸೋಜಾ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಪಿಎಸ್​ಐ ಬಿ.ಕೆ. ಹೂಗಾರ, ಸಿಬ್ಬಂದಿ ಕೆ.ಎನ್. ನೆಲಗುಡ್ಡ, ಬಿ.ಎಫ್. ಸುಣಗಾರ, ಎಸ್.ಎಚ್. ಕಲ್ಲಾಪುರ, ಎಸ್.ಎಸ್. ಪಾಂಡೆ, ಎಂ.ಬಿ. ದನಿಗೊಂಡ, ಎಂ.ವೈ. ಯಕ್ಕಡಿ, ಬಿ.ಎಂ. ಹೆದ್ದೇರಿ, ವಿ.ಎಸ್. ಸುರವೆ, ಆರ್.ಎಸ್. ಗುಂಜಳ, ಎಸ್.ಎಸ್. ಚವ್ಹಾಣ, ಸಂಗೀತಾ ಗೌಳಿ, ಜಕ್ಕಮ್ಮ ಗಾಣಗೇರ ತಂಡದಲ್ಲಿದ್ದರು.

ಬಂಧಿತ ಹನುಮಂತ ಇನ್ನೂ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಮೂಡಿದೆ. ಅದನ್ನು ಪತ್ತೆ ಮಾಡಲು ಡಿಸಿಪಿ ರವೀಂದ್ರ ಗಡಾದಿ ಹಾಗೂ ಬಿ.ಎಸ್. ನೇಮಗೌಡ ನೇತೃತ್ವದ ತಂಡ ರಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಏಕಾಂಗಿಯಾಗಿ ಹೊಂಚು ಹಾಕುತ್ತಿದ್ದ: ಹನುಮಂತ ಹಗಲು ಹೊತ್ತಲ್ಲಿ ವಿವಿಧ ಬಡಾವಣೆಗಳಿಗೆ ತೆರಳಿ ಕೀಲಿ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ. ರಾತ್ರಿ ಏಕಾಂಗಿಯಾಗಿ ತೆರಳಿ ಕೀಲಿ ಮುರಿದು ದೋಚುತ್ತಿದ್ದ. ಈತ ಬೆಳಗಾವಿ, ಖಾನಾಪುರ, ಕುಮಟಾ, ಹೊನ್ನಾವರ, ದಾವಣಗೆರೆ, ಹಾವೇರಿ ಮತ್ತಿತರ ಕಡೆ ಕಳ್ಳತನ ಮಾಡಿರುವ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.