ಖಾಕಿಗೆ ಸಿಗ್ತಿಲ್ಲ ಚಿಕಿತ್ಸೆ

|ಕೀರ್ತಿನಾರಾಯಣ ಸಿ.

ಬೆಂಗಳೂರು: ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗುವ ಪೊಲೀಸರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಸೇವೆ ಒದಗಿಸದೆ ಅತ್ಯಂತ ಕೀಳಾಗಿ ಕಾಣುತ್ತಿರುವ ಆರೋಪಗಳಿವೆ. ಈ ಮಧ್ಯೆ ರಾಜ್ಯ ಸರ್ಕಾರ ಹಣ ಪಾವತಿಸಿಲ್ಲ ಎಂದು ಹೇಳಿ ಜೀವನ್ಮರಣ ಸ್ಥಿತಿಯಲ್ಲಿರುವ ಮುಖ್ಯಪೇದೆಗೆ ಚಿಕಿತ್ಸೆ ಕೊಡದೆ ಹೊರಕಳುಹಿಸಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

ವಿಜಯಪುರದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ (ಡಿಎಆರ್) ಕರ್ತವ್ಯ ನಿರ್ವಹಿಸುತ್ತಿರುವ 40 ವರ್ಷದ ಮುಖ್ಯಪೇದೆಗೆ (ಕುಟುಂಬದ ಮನವಿ ಮೇರೆಗೆ ಹೆಸರು ಬರೆದಿಲ್ಲ) ಕುಡಿತದಿಂದಾಗಿ ಲಿವರ್ ಸಮಸ್ಯೆ ಕಾಣಿಸಿಕೊಂಡು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಡೋಸ್ಕೊಪಿ ಇನ್ನಿತರ ಪರೀಕ್ಷೆ ನಡೆಸಿದ ವೈದ್ಯರು ಲಿವರ್ ಸಮಸ್ಯೆ ಜತೆಗೆ ಎರಡೂ ಕಿಡ್ನಿಗಳು ಹೋಗಿವೆ ಎಂದು ಹೇಳಿದ್ದರು.

ಸರ್ಕಾರ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರಿಂದ ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ಕೊಡಲು ಆಗುವುದಿಲ್ಲ. ವೈಯಕ್ತಿಕವಾಗಿ ನೀವೇ ಹಣ ಪಾವತಿಸುತ್ತೀರಿ ಎಂದಾದರೆ ದಾಖಲಿಸಿಕೊಂಡು ಕೂಡಲೇ ಚಿಕಿತ್ಸೆ ಆರಂಭಿಸುತ್ತೇವೆ ಎಂದು ಸೂಚಿಸಿದ್ದಾರೆ. ದಿಕ್ಕು ತೋಚದಂತಾದ ಕುಟುಂಬ ಸದಸ್ಯರು ಅಷ್ಟು ಹಣ ಪಾವತಿಸಲು ಶಕ್ತರಿಲ್ಲದ ಕಾರಣ ವಾಪಸ್ ಊರಿಗೆ ಕರೆದೊಯ್ದಿದ್ದರು.

ಬಳಿಕ ಪರಿಚಿತರ ಸಲಹೆ ಮೇರೆಗೆ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರು ತಪಾಸಣೆ ನಡೆಸಿದಾಗ ಕಿಡ್ನಿ ಸಮಸ್ಯೆ ಕಂಡುಬಂದಿಲ್ಲ. ಲಿವರ್ ಸಮಸ್ಯೆ ಇದ್ದು, ಕಸಿ ಮಾಡುತ್ತೇವೆ. ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಕಸಿಗೆ 25 ಲಕ್ಷ ರೂ. ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಮುಖ್ಯಪೇದೆಯನ್ನು ಮನೆಗೆ ಕರೆತಂದಿರುವ ಕುಟುಂಬ ಸದಸ್ಯರು ಹಣ ಹೊಂದಿಸಲು ಮುಂದಾಗಿದ್ದಾರೆ.

ಸರ್ಕಾರದ ಜತೆ ಒಪ್ಪಂದ ಮಾಡಿ ಕೊಂಡಿರುವ ಯಾವ ಆಸ್ಪತ್ರೆಯೂ ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸರಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ನಿರಾಕರಿಸುವಂತಿಲ್ಲ. ಇಷ್ಟವಿಲ್ಲದಿದ್ದರೆ ಒಪ್ಪಂದ ರದ್ದುಪಡಿಸಿಕೊಳ್ಳಬಹುದು. ಯಾವುದೇ ಆಸ್ಪತ್ರೆ ಚಿಕಿತ್ಸೆ ಕೊಡಲು ನಿರಾಕರಿಸಿದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ.

| ಡಾ.ಎಸ್. ಪರಶಿವಮೂರ್ತಿ, ಎಡಿಜಿಪಿ (ಆಡಳಿತ)

ಪೊಲೀಸರ ಸಲಹೆ

  • ಆರೋಗ್ಯ ಭಾಗ್ಯದಡಿ ಚಿಕಿತ್ಸೆಗೆ ಹೋದರೆ ಉದಾಸೀನವಾಗಿ ನೋಡಿ ಸೂಕ್ತ ಚಿಕಿತ್ಸೆ ಕೊಡಲ್ಲ. ಚಿಕಿತ್ಸೆ ಕೊಡಲು ವಿಳಂಬ ಮಾಡಲಾಗುತ್ತದೆ. ದೂರು ಕೊಡಲು ಪ್ರತ್ಯೇಕ ಸಹಾಯವಾಣಿ ಕೇಂದ್ರ ತೆರೆಯಬೇಕು.
  • ಈ ಯೋಜನೆಯಡಿ ಚಿಕಿತ್ಸೆ ಪಡೆದು ಬಿಡುಗಡೆಯಾಗುವ ಪ್ರತಿ ರೋಗಿ/ಕುಟುಂಬ ಸದಸ್ಯರಿಂದ ಕನ್ನಡದಲ್ಲಿ ಪ್ರತಿಕ್ರಿಯೆ (ಫೀಡ್​ಬ್ಯಾಕ್) ಪಡೆಯುವುದನ್ನು ಕಡ್ಡಾಯಗೊಳಿಸಿ, ಅದನ್ನು ಇಲಾಖೆಯೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.

ತಿಂಗಳಿಗೆ 4.5 ಕೋಟಿ ರೂ. ಬಿಲ್

ಆರೋಗ್ಯ ಭಾಗ್ಯ ಟ್ರಸ್ಟ್ ಅಧಿಕಾರಿಗಳ ಮಾಹಿತಿ ಪ್ರಕಾರ ಇಲಾಖೆಯಲ್ಲಿ ಪ್ರತಿ ತಿಂಗಳು 1800 ಸಿಬ್ಬಂದಿ ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4.5 ಕೋಟಿ ರೂ. ಆಸ್ಪತ್ರೆ ಬಿಲ್ ಪಾವತಿಸಲಾಗುತ್ತಿದೆ.

ವೇತನದಲ್ಲಿ ಮಾಸಿಕ 200 ರೂಪಾಯಿ ಕಡಿತ

ಕಾನ್​ಸ್ಟೆಬಲ್, ಹೆಡ್ ಕಾನ್​ಸ್ಟೆಬಲ್, ಎಎಸ್​ಐ, ಎಸ್​ಐ, ಇನ್​ಸ್ಪೆಕ್ಟರ್ ಹಾಗೂ ಎಸಿಪಿ/ಡಿವೈಎಸ್ಪಿವರೆಗೆ ಉಚಿತವಾಗಿ ಚಿಕಿತ್ಸೆ ನೀಡಲು ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಫಲಾನುಭವಿಗಳಾಗಲು ಪ್ರತಿ ಸಿಬ್ಬಂದಿಯಿಂದ ಮಾಸಿಕ 200 ರೂ. ವೇತನದಲ್ಲಿ ಕಡಿತಗೊಳಿಸಲಾಗುತ್ತಿದೆ. ಆದರೆ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಸಿಗದಿರುವುದು ಪೊಲೀಸರಲ್ಲಿ ಆಕ್ರೋಶ ವ್ಯಕ್ತವಾಗಿದೆ.