ಜಗತ್ತಿನ ಮೊದಲ ಉಷ್ಣವಲಯ ಹಿಮಕರಡಿ ಇನುಕಾ ಇನ್ನಿಲ್ಲ !

ಸಿಂಗಾಪುರ: ಜಗತ್ತಿನಲ್ಲೇ ಉಷ್ಣವಲಯದಲ್ಲಿ ಜನಿಸಿದ ಮೊದಲ ಹಿಮಕರಡಿ ಇನುಕಾ ಸಿಂಗಾಪುರದಲ್ಲಿ ಬುಧವಾರ ಮೃತಪಟ್ಟಿದೆ. ಸಿಂಗಾಪುರ ಝೂನಲ್ಲಿದ್ದ 27 ವರ್ಷದ ಇನುಕಾ ಕೆಲ ವರ್ಷಗಳಿಂದ ಸಂಧಿವಾತ, ಹಲ್ಲಿನ ಸಮಸ್ಯೆ, ಕಿವಿ ಸೋಂಕುಗಳು ಮತ್ತು ದುರ್ಬಲ ಅಂಗಗಳಿಂದ ಬಳಲುತ್ತಿತ್ತು. ನಡೆದಾಡಲೂ ಕಷ್ಟಪಡುತ್ತಿತ್ತು.

ಅನಾರೋಗ್ಯಕ್ಕೀಡಾಗಿದ್ದ ಹಿಮಕರಡಿಗೆ ಝೂ ಸಿಬ್ಬಂದಿ ಅನಸ್ತೇಶಿಯಾ ಕೊಡುತ್ತಿದ್ದರು. ಅದು ಎದ್ದು ಓಡಾಡಲೂ ಆಗದ ಸ್ಥಿತಿ ತಲುಪಿದ ನಂತರ ಅದಕ್ಕೆ ಎಚ್ಚರವಾಗದಂತೆ ಸದಾ ಅನಸ್ತೇಶಿಯಾ ಕೊಟ್ಟೇ ಇಡುತ್ತಿದ್ದರು.

ಶೀತವಲಯದ ಪ್ರಾಣಿಯಾದ ಹಿಮಕರಡಿ ಇನುಕಾ ಉಷ್ಣವಲಯದ ಪ್ರದೇಶ ಸಿಂಗಾಪುರನಲ್ಲಿ ಉತ್ತಮವಾಗಿಯೇ ಬೆಳೆಯುತ್ತಿತ್ತು. ಒಮ್ಮೆ ಮಾತ್ರ ಅದರ ತುಪ್ಪಳದಲ್ಲಿ ಪಾಚಿಕಟ್ಟಿಕೊಂಡು ಹಸಿರು ಬಣ್ಣಕ್ಕೆ ತಿರುಗಿತ್ತು. ಇದನ್ನು ನೋಡಿದ ಝೂ ಅಧಿಕಾರಿಗಳು ಆತಂಕಗೊಂಡಿದ್ದರು. ಆ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಉಷ್ಣವಲಯದ ಹವಾಮಾನ ಹಿಮಕರಡಿಗೆ ಹೇಗೆ ಸೂಕ್ತವಾಗಿದೆ ಎಂಬುದನ್ನೂ ಕಂಡುಕೊಂಡಿದ್ದಲ್ಲದೆ, ಇನುಕಾ ಮೈ ಹಸಿರುಗಟ್ಟಿಕೊಂಡಿದ್ದರಿಂದ ಏನೂ ಸಮಸ್ಯೆಯಿಲ್ಲ ಎಂಬುದನ್ನೂ ತಿಳಿಸಿದ್ದರು.ನಂತರ ಇನುಕಾ ಸಿಂಗಾಪುರ ಝೂ ದ ಅತಿದೊಡ್ಡ ಆಕರ್ಷಣೆಯಾಗಿ ಪ್ರವಾಸಿಗರನ್ನು ಸೆಳೆಯುತ್ತಿತ್ತು. ಈ ಕರಡಿ ಸಾಮಾನ್ಯವಾಗಿ ಧ್ರುವ ಪ್ರದೇಶಗಳ ಅರಣ್ಯದ ಹಿಮಕರಡಿಗಿಂತ ಹತ್ತು ವರ್ಷ ಹೆಚ್ಚಿಗೇ ಬದುಕಿದೆ.

Leave a Reply

Your email address will not be published. Required fields are marked *