ಪೊಳಲಿ ಶ್ರೀ ರಾಜರಾಜೇಶ್ವರಿಗೆ ಸಾಂಸ್ಕೃತಿಕ ಸಿಂಚನ

ಗುರುಪುರ/ ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀದೇವಿಗೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದ ಸಿಂಚನ ನಡೆಯುತ್ತಿದೆ.
ದೇವಸ್ಥಾನದ ಎದುರಿನ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. ಮಂಗಳವಾರ ಬೆಳಗ್ಗೆ ಉಮಾನಾಥ ಸಂಪಿಗೆ ಹಾಗೂ ಬಳಗದವರಿಂದ ನಾದಸ್ವರ ವಾದನ ನಡೆಯಿತು. ಬಳಿಕ ತೆಂಕುಳಿಪಾಡಿ ಶ್ರೀ ದುರ್ಗಾ ಭಜನಾ ಮಂಡಳಿಯವರಿಂದ ಭಜನೆ, ನಾರಳ ಶ್ರೀ ಸೀತಾರಾಮ ಭಜನಾ ಮಂಡಳಿಯಿಂದ ಕುಣಿತ ಭಜನೆ ಹಾಗೂ ಗುರುಪುರ ಮಧುಸೂದನ ಭಟ್ ಮತ್ತು ಬಳಗದವರಿಂದ ಭಜನೆ ನಡೆಯಿತು.

ಚೆಂಡಿನ ಗದ್ದೆಯ ಶ್ರೀ ರಾಜರಾಜೇಶ್ವರಿ ವೇದಿಕೆಯಲ್ಲಿ ಬೆಳಗ್ಗೆ ಮಂಗಳೂರಿನ ಶೀಲಾ ದಿವಾಕರ್‌ರಿಂದ ಸುಗಮ ಸಂಗೀತ, ತೋನ್ಸೆ ಪುಷ್ಕಳ್ ಕುಮಾರ ಹರಿಕಥೆ ಕಾರ್ಯಕ್ರಮ ಭಕ್ತ ಸಮುದಾಯದ ಸಂಗೀತ ಆಸಕ್ತಿಗೆ ಪೂರಕವಾಗಿತ್ತು. ಮಧ್ಯಾಹ್ನ ಕಿನ್ನಿಗೋಳಿ ಸ್ವರಾಂಜಲಿ ತಂಡದವರಿಂದ ಭಕ್ತಿ ಸಂಗೀತ, ರಾಯಚೂರು ಶೇಷಗಿರಿ ರಾವ್ ಅವರಿಂದ ದಾಸರ ಪದಗಳ ಕಾರ್ಯಕ್ರಮ ಜರುಗಿತು.

ಬೆಳಗ್ಗೆ ನವೀಕೃತ ದೇಗುಲವನ್ನು ಶಿಲ್ಪಿಗಳು ಹಸ್ತಾಂತರಿಸಿದ್ದು ಈ ಸಂದರ್ಭ ದೇವಸ್ಥಾನ ಆನುವಂಶಿಕ ಮೊಕ್ತೇಸರ ಉಳಿಪಾಡಿಗುತ್ತು ತಾರನಾಥ ಆಳ್ವ ಮತ್ತು ಚೇರ ಸೂರ್ಯನಾರಾಯಣ ರಾವ್ ಹಾಗೂ ಆನುವಂಶಿಕ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ರಾಜೇಶ ನಾಕ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ, ದೇವಸ್ಥಾನದ ಪವಿತ್ರಪಾಣಿ ಮಾಧವ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ನಾಗರಾಜ ಶೆಟ್ಟಿ, ದೇವಸ್ಥಾನದ ಸಿಇಒ ಪ್ರವೀಣ್ ಮತ್ತು ವಿವಿಧ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಭಕ್ತವೃಂದ ಉಪಸ್ಥಿತರಿದ್ದರು.

ಅನ್ನದಾಸೋಹ: ಅನ್ನಛತ್ರದಲ್ಲಿ ಮಧ್ಯಾಹ್ನ ಸಾವಿರಾರು ಮಂದಿ ಬಾಳೆ ಎಲೆ ಊಟ ಹಾಗೂ ಬಫೆ ಪದ್ಧತಿಯಲ್ಲಿ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಅನ್ನಪ್ರಸಾದ ಸ್ವೀಕರಿಸಿದರು. ಅನ್ನದಾಸೋಹ ಪ್ರತಿದಿನ ರಾತ್ರಿವರೆಗೂ ಮುಂದುವರಿಯುತ್ತದೆ. ನಿರಂತರ ಫಲಾಹಾರ ಹಾಗೂ ಪಾನೀಯ ಸೇವೆ ನಡೆಯುತ್ತಿದೆ. ಭಕ್ತರ ನೂಕುನುಗ್ಗಲು ತಪ್ಪಿಸಲು ನೂರಾರು ಸ್ವಯಂಸೇವಕರು ನಿರಂತರ ಕಾರ್ಯಪ್ರವೃತ್ತರಾಗಿದ್ದಾರೆ.

ಮುದ ನೀಡಿದ ಆಳ್ವಾಸ್ ವೈಭವ: ಸೋಮವಾರ ರಾತ್ರಿ 7ರಿಂದ 11ರವರೆಗೆ ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ 350 ವಿದ್ಯಾರ್ಥಿಗಳ ತಂಡ ಪ್ರದರ್ಶಿಸಿದ ಸಾಂಸ್ಕೃತಿಕ ವೈಭವ ಪೊಳಲಿಯಲ್ಲಿ ನೆರೆದಿದ್ದ ಭಕ್ತವೃಂದವನ್ನು ತದೇಕಚಿತ್ತದಿಂದ ವೇದಿಕೆಯತ್ತ ದೃಷ್ಟಿ ಹರಿಸುವಂತೆ ಮಾಡಿತು. ಇದರಲ್ಲಿ ದೇಶ- ವಿದೇಶದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಲ್ಲಕಂಬ ಮತ್ತು ಹಗ್ಗದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ವಿವಿಧ ಭಂಗಿಯ ಕಸರತ್ತುಗಳು ಪ್ರತಿಯೊಬ್ಬರ ಅಚ್ಚರಿ ಮತ್ತು ರೋಮಾಂಚನ ಕ್ಷಣಕ್ಕೆ ಸಾಕ್ಷಿಯಾಗಿತ್ತು. ತಂಡ ನಡೆಸಿಕೊಟ್ಟ ಡೊಳ್ಳುಕುಣಿತ, ನಾಟ್ಯ ವೈಭವ ಅದ್ಭುತವಾಗಿತ್ತು.

ಕೈಕಂಬದಲ್ಲಿ ಭಕ್ತರನ್ನು ಸ್ವಾಗತಿಸುತ್ತಿದೆ ಕಲಶ: ಪೊಳಲಿ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದಂಗವಾಗಿ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ಕಿ.ಮೀ. ಉದ್ದಕ್ಕೆ ವಿಶೇಷ ಧಾರ್ಮಿಕ ಆಕರಗಳೊಂದಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಜಂಕ್ಷನ್‌ನಲ್ಲಿ ನಾಲ್ಕೈದು ದಿನಗಳ ಹಿಂದೆ ಸ್ಥಾಪಿಸಲಾದ ಭವ್ಯ ಸ್ವಾಗತ ದ್ವಾರದ ಎದುರಿನ ಸಣ್ಣ ಸರ್ಕಲ್ ಮೇಲೆ ಕೈಕಂಬದ ಭಕ್ತರು ಸೋಮವಾರ ಬೃಹತ್ ಕಲಶ ಸ್ಥಾಪಿಸಿದ್ದು, ಹೆದ್ದಾರಿ ಪ್ರಯಾಣಿಕರ ಗಮನ ಸೆಳೆಯುತ್ತಿದೆ.

ಕೈಯಲ್ಲಿ ಎತ್ತಿ ಹಿಡಿಯಲಾದ ತಾವರೆ ಮೇಲಿನ ಈ ಕಲಶದ ಮೇಲೆ ಬೃಹತ್ ತೆಂಗಿನಕಾಯಿ ಆಕೃತಿ ರೂಪಿಸಲಾಗಿದೆ. ಇದರ ಸುತ್ತ ಮೇಲ್ಗಡೆ ಬಲೆಯಂತೆ ಕೇಸರಿ ಪತಾಕೆ ಹೆಣೆಯಲಾಗಿದೆ. ಕಲಶಕ್ಕೆ ವಿರುದ್ಧ ದಿಕ್ಕಿನಲ್ಲಿ ಭವ್ಯ ಸ್ವಾಗತ ದ್ವಾರ ಹಾಗೂ ರಸ್ತೆಯ ವಿಭಾಜಕ, ಇಕ್ಕೆಲಗಳಲ್ಲಿ ಪೊಳಲಿ ದೇವಿಗೆ ಬಂದ ಹರಕೆ ಜರತಾರಿ ಸೀರೆಗಳನ್ನು ಗೊಂಡೆ ಹೂವಿನಂತೆ ಸುಂದರವಾಗಿ ಅಲಂಕರಿಸಲಾಗಿದೆ. ಜೊತೆಗೆ ರಸ್ತೆಯ ಎರಡೂ ಬದಿಯಲ್ಲಿ ಪೊಳಲಿ ಬ್ರಹ್ಮಕಲಶೋತ್ಸವಕ್ಕೆ ಸ್ವಾಗತ ಬಯಸಲಾದ ಜಾಹೀರಾತುಗಳ ಸಾಲು ಕಂಗೊಳಿಸುತ್ತಿದೆ. ಬ್ರಹ್ಮಕಲಶೋತ್ಸವ ನಿಮಿತ್ತ ಗುರುಪುರ ಕೈಕಂಬ ಅದ್ಭುತವಾಗಿ ಅಲಂಕರಿಸಲ್ಪಟ್ಟಿದ್ದು, ಎಲ್ಲಿ ನೋಡಿದರಲ್ಲಿ ಕೇಸರಿ ಧ್ವಜಗಳು ರಾರಾಜಿಸುತ್ತಿವೆ.

ಪಟ್ಟೆ ಸೀರೆಗಳ ದ್ವಾರ: ಬಿ.ಸಿ.ರೋಡ್ ಕೈಕಂಬ ದ್ವಾರದ ಬಳಿ, ಮೊಡಂಕಾಪು, ಮತ್ತಿತರ ಸ್ಥಳಗಳಲ್ಲಿ ಪೊಳಲಿ ಅಮ್ಮನವರಿಗೆ ಸಮರ್ಪಿತ ಪಟ್ಟೆ ಸೀರೆಗಳಿಂದ ಅಲಂಕೃತ ದ್ವಾರ ಗಮನ ಸೆಳೆಯುತ್ತಿತ್ತು. ವಿವಿಧ ಸಂಘಗಳು, ಹಿಂದು ಸಂಘಟನೆಗಳು, ಭಜನಾ ಮಂಡಳಿಗಳು ಹಾಕಿದ ಸ್ವಾಗತ ದ್ವಾರಗಳು, ಕೇಸರಿ ಬಂಟಿಂಗ್ಸ್‌ಗಳು ಆಕರ್ಷಣೆ ಹೆಚ್ಚಿಸಿದೆ.

600ಕ್ಕೂ ಅಧಿಕ ವಾಹನಗಳಲ್ಲಿ ಹಸಿರುವಾಣಿ ಸಮರ್ಪಣೆ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾಪನೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಆರಂಭಗೊಂಡಿದ್ದು, ಮಂಗಳವಾರ ಸಾಯಂಕಾಲ ಬಂಟ್ವಾಳ ತಾಲೂಕಿನ ಎಲ್ಲ ಗ್ರಾಮಗಳಿಂದ ಸುಮಾರು 600ಕ್ಕೂ ಅಧಿಕ ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆ ಬಂಟ್ವಾಳ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಸಮೀಪದ ಮೈದಾನದಿಂದ ಪೊಳಲಿವರೆಗೆ ನಡೆಯಿತು.

ಬಂಟ್ವಾಳ ಮೈದಾನದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಸ್ತೆಯ ಇಕ್ಕೆಲಗಳಲ್ಲೂ ಸಿಂಗಾರ, ಚಪ್ಪರದೊಂದಿಗೆ ಬಿ.ಸಿ.ರೋಡಿನಿಂದ ಪೊಳಲಿಯವರೆಗೆ ಮೆರವಣಿಗೆ ಆಕರ್ಷಕವಾಗಿ ಮೂಡಿಬಂತು.

ಮಾಣಿಲ ಶ್ರೀಧಾಮ ಮೋಹನದಾಸ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ನಾಕ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಹೊರೆಕಾಣಿಕೆ ಸಮಿತಿ ಬಂಟ್ವಾಳ ತಾಲೂಕು ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಪ್ರಮುಖರಾದ ಜಗನ್ನಾಥ ಚೌಟ, ಸುಲೋಚನಾ ಜಿ.ಕೆ.ಭಟ್, ದಿನೇಶ್ ಅಮ್ಟೂರು, ಬೇಬಿ ಕುಂದರ್, ಮೋಹನ ರಾವ್, ಬಿ.ದೇವದಾಸ ಶೆಟ್ಟಿ, ಸುದೀಪ್ ಶೆಟ್ಟಿ ಮಾಣಿ, ಕೈಯೂರು ನಾರಾಯಣ ಭಟ್, ಅಶೋಕ್ ಬರಿಮಾರು ಸಹಿತ ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಂದಾಳುಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ವಾಹನಗಳಿಂದ ತುಂಬಿದ ಮೈದಾನ: ಅಕ್ಕಿ, ಸಕ್ಕರೆ, ಹೆಸರುಬೇಳೆ, ಕಡ್ಲೆಬೇಳೆ, ಮೆಣಸು, ದಿನಸಿ ಸಾಮಾನು, ತೆಂಗಿನಕಾಯಿ, ಸುವರ್ಣಗಡ್ಡೆ, ಕುಂಬಳ, ಸಿಹಿಕುಂಬಳ, ಸೌತೆ, ಬದನೆ, ಬಾಳೆ ಎಲೆ, ಸೀಯಾಳ ಇತ್ಯಾದಿಗಳನ್ನು ಹೇರಿಕೊಂಡ ಸುಮಾರು 600ಕ್ಕೂ ಅಧಿಕ ವಾಹನಗಳು ಟೆಂಪೊ, ಆಟೋ, ಲಾರಿಗಳಲ್ಲಿ ಸಾಗಿದರು. ಮಧ್ಯಾಹ್ನ 3ಕ್ಕೆ ಮೆರವಣಿಗೆ ಆರಂಭ ಎಂದು ನಿಗದಿಯಾಗಿದ್ದ ಕಾರಣ ಮಧ್ಯಾಹ್ನವೇ ಬಂಟ್ವಾಳದ ಮೈದಾನಕ್ಕೆ ವಾಹನಗಳು ತರಕಾರಿಗಳನ್ನು ಹಾಗೂ ದಿನಸಿ ಸಾಮಗ್ರಿಗಳನ್ನು ಹೇರಿಕೊಂಡು ಬಂದವು. ಎಲ್ಲ ವಾಹನಗಳಿಗೂ ನಂಬರ್ ನೀಡಲಾಯಿತು. ಮೆರವಣಿಗೆ ಆರಂಭಗೊಂಡ ಬಳಿಕ ಮತ್ತಷ್ಟು ವಾಹನಗಳು ಸೇರಿಕೊಂಡವು.

ಪ್ರಮುಖ ಜಂಕ್ಷನ್‌ಗಳಲ್ಲಿ ಭಕ್ತರ ದಂಡು: ಬಿ.ಸಿ.ರೋಡ್‌ನಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆ ಕೈಕಂಬ ತಲುಪುತ್ತಿದ್ದಂತೆ ಇನ್ನಷ್ಟು ಭಕ್ತರು ಹಸಿರು ಕಾಣಿಕೆಯೊಂದಿಗೆ ಸೇರಿಕೊಂಡರು. ಬೆಂಜನಪದವು ಮಾರ್ಗವಾಗಿ ಬಂದ ಹೊರೆಕಾಣಿಕೆ ಮೆರವಣಿಗೆ ಕಲ್ಪನೆ ಬಳಿ ಸೇರಿಕೊಂಡಿತು. ಪ್ರಮುಖ ಜಂಕ್ಷನ್‌ಗಳಲ್ಲೂ ಭಕ್ತರು ಮರೆವಣಿಗೆ ಸೇರಿಕೊಂಡರು.

ಮೆಲ್ಕಾರ್, ಬೋಳಂಗಡಿ ಅಸುಪಾಸು ನಾಗರಿಕರಿಂದ ಸಂಗ್ರಹಿಸಿದ ಎರಡು ವಾಹನಗಳ ಹೊರೆಕಾಣಿಕೆ ವಾಹನಗಳಿಗೆ ಮೆಲ್ಕಾರ್ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಹಿರಿಯರಾದ ಪಿ. ಶ್ರೀನಿವಾಸ ನಾಯಕ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಹೊರೆಕಾಣಿಕೆ ವ್ಯವಸ್ಥೆಯನ್ನು ಸತೀಶ್ ಪಿ. ಸಾಲಿಯಾನ್ ಆಯೋಜಿಸಿದ್ದರು.