ಪೊಳಲಿ ವೈಭವ

ಧನಂಜಯ ಗುರುಪುರ

ಇಂದಿನಿಂದ (ಮಾ.4) ಒಂಬತ್ತು ದಿನ ಸಂಪೂರ್ಣ ನವೀಕೃತ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಜರುಗಲಿರುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ಗುರುಪುರ ಕೈಕಂಬದಿಂದ ಪೊಳಲಿವರೆಗೆ ರಸ್ತೆ ಇಕ್ಕೆಲ ಕೇಸರಿಮಯವಾಗಿದ್ದು, ಭಗವಾಧ್ವಜ, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಪೊಳಲಿ ಪರಿಸರ ಮದುವಣಗಿತ್ತಿಯಂತೆ ಅಲಂಕೃತಗೊಂಡಿದ್ದು, ನೋಡುಗರ ಕಣ್ಣಿಗೆ ಮನೋಹರವಾಗಿ ಕಂಗೊಳಿಸುತ್ತಿದೆ.

ಯಾವುದೇ ವಾಹನಗಳು ದೇವಸ್ಥಾನದತ್ತ ಮುಂದುವರಿಯುವಂತಿಲ್ಲ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎಕರೆಗಟ್ಟಲೆ ವಿಶಾಲ ಗದ್ದೆ ಪ್ರದೇಶದಲ್ಲಿ ಬಸ್, ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೂರು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವಾಹನಗಳಿಗೆ ದಾರಿ ತೋರಿಸಲು ಸ್ವಯಂಸೇವಕರ ತಂಡ ಸಿದ್ಧವಾಗಿದೆ.

ಮುಖ್ಯ ರಸ್ತೆಯಿಂದ ಪೊಳಲಿ ದೇವಸ್ಥಾನಕ್ಕೆ ಬೃಹತ್ ದ್ವಾರ ದಾಟಿ ನಡೆದುಕೊಂಡು ಹೋಗಿ ದೇವರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ರಸ್ತೆ ಪಕ್ಕ ಮಕ್ಕಳ ಆಕರ್ಷಣೆಗಾಗಿ ಸಂತೆಗಳು ಹಾಗೂ ತೊಟ್ಟಿಲುಗಳು ಜಮಾಯಿಸಿವೆ. ಮಹಿಳೆಯರ ಸಹಿತ ಸ್ವಯಂಸೇವಕರ ಒಂದೊಂದು ಗುಂಪುಗಳು ದೇವಸ್ಥಾನ ಸುತ್ತ ನೀರು ಚುಮುಕಿಸಿ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿವೆ. ಒಂದು ಕಸಕಡ್ಡಿಯೂ ಕಾಣದಷ್ಟು ಸ್ವಚ್ಛ. ಮುಂದಕ್ಕೆ ಭಕ್ತರನ್ನು ಸ್ವಾಗತಿಸುತ್ತಿದೆ ವಿದ್ಯುದ್ದೀಪಾಲಂಕೃತ ಸಂಪೂರ್ಣ ನವೀಕೃತ, ಶಿಲಾಮಯ ಪೊಳಲಿ ದೇವಾಲಯ. ಭಾನುವಾರ ದೇವಾಲಯದಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ದೇವಸ್ಥಾನದೊಳಗೆ ಇನ್ನುಳಿದ ಕೆಲವು ಕೆಲಸದಲ್ಲಿ ಕಾರ್ಮಿಕರು ತುರ್ತು ನಿರತರಾಗಿದ್ದಾರೆ.

ವೇದಿಕೆ, ಚಪ್ಪರಗಳು: ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀ ರಾಜರಾಜೇಶ್ವರಿ ಹೆಸರಿನ ಭವ್ಯ ಹಾಗೂ ವಿಶಾಲ ವೇದಿಕೆ ಸಿದ್ಧವಾಗಿದೆ. ಪಕ್ಕದಲ್ಲೇ ಒಮ್ಮೆಗೆ ಎಂಟು ಸಾವಿರದಷ್ಟು ಮಂದಿ ಊಟ ಮಾಡಬಹುದಾದಷ್ಟು ವಿಶಾಲ ಬೃಹತ್ ಚಪ್ಪರ ಇದೆ. ಪಕ್ಕದಲ್ಲಿ ಅನ್ನಛತ್ರವಿದ್ದು, ನೂರಾರು ಬಾಣಸಿಗರು ವಿವಿಧ ಭಕ್ಷೃ ತಯಾರಿಯಲ್ಲಿ ನಿರತರಾಗಿದ್ದಾರೆ. ಒಂಬತ್ತು ದಿನವೂ ಲಡ್ಡು, ಮೈಸೂರುಪಾಕ್, ಕಡಿ ಮೊದಲಾದ ಒಂಬತ್ತು ಬಗೆಯ ಸಿಹಿ ನೀಡಲಾಗುವುದು. 10ರಿಂದ 15 ಲಕ್ಷ ಜನ ಭಕ್ತರು ಇಲ್ಲಿ ಅನ್ನಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ.

ಹೊರೆಕಾಣಿಕೆ: ಮಾ.4ರಂದು ದೇವಸ್ಥಾನಕ್ಕೆ ವಿವಿಧೆಡೆಗಳಿಂದ ಹಸಿರು ಹೊರೆಕಾಣಿಕೆ ಬರಲಿದ್ದು, ಇದಕ್ಕಾಗಿ ದೇವಳ ಬಳಿ ಪ್ರತ್ಯೇಕ ವಿಶಾಲ ಚಪ್ಪರ ವ್ಯವಸ್ಥೆ ಮಾಡಲಾಗಿದೆ. ಸಂಗೀತ ಮತ್ತಿತರ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ದೇವಸ್ಥಾನ ಮುಂಭಾಗ ಶ್ರೀ ದುರ್ಗಾಪರಮೇಶ್ವರಿ ವೇದಿಕೆ ಸಿದ್ಧಗೊಂಡಿದೆ. ಮಂಗಳೂರು ನಗರದಿಂದ ಪೊಳಲಿ ಕ್ಷೇತ್ರಕ್ಕೆ ಮಾ.8ರಂದು ನಗರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಮಂಗಳಾದೇವಿಯಿಂದ ಮೆರವಣಿಗೆ ಹೊರಟು ಬಳಿಕ ಶರವು ದೇವಸ್ಥಾನಕ್ಕೆ ಬಂದು ಅಲ್ಲಿಂದ ಕದ್ರಿ ದೇವಸ್ಥಾನಕ್ಕೆ ತೆರಳಲಿದೆ. ನಂತೂರಿನಲ್ಲಿ ಉಳ್ಳಾಲದಿಂದ ಆಗಮಿಸಿದ ಹೊರೆಕಾಣಿಕೆ ಸೇರ್ಪಡೆಯಾಗಲಿದೆ. ಈ ಮೆರವಣಿಗೆಯಲ್ಲಿ ನೂರಾರು ಹೊರೆಕಾಣಿಕೆ ವಾಹನಗಳು, ಭಕ್ತರು ಭಾಗವಹಿಸಲಿದ್ದಾರೆ ಎಂದು ಹೊರೆಕಾಣಿಕೆ ಸಮಿತಿ ನಗರ ಸಂಚಾಲಕ ಗಣೇಶ್ ಭಟ್ ಶರವು ತಿಳಿಸಿದ್ದಾರೆ.

ಸ್ವಚ್ಛತೆ, ಮೂಲಸೌಕರ‌್ಯ: ದೇವಸ್ಥಾನದೊಳಗೆ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಬ್ರಹ್ಮಕಲಶೋತ್ಸವ ಸಂದರ್ಭ ಎಲ್ಲ ಕೆಲಸವೂ ಪೂರ್ಣಗೊಳ್ಳಲಿದೆ. 18 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನಕ್ಕಾಗಿ ಒದಗಿಸಲಾದ ಶಾಸ್ವತ ನೀರಿನ ವ್ಯವಸ್ಥೆ ಭಾನುವಾರ ಉದ್ಘಾಟನೆಗೊಂಡಿದೆ. ಆರೋಗ್ಯ, ಪೊಲೀಸ್, ಮೆಸ್ಕಾಂ ಇಲಾಖೆ ಹಾಗೂ ಇತರ ಇಲಾಖೆಗಳ ಸಿಬ್ಬಂದಿ ವರ್ಗದ ಸೇವೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಗುರುಪುರ -ಕೈಕಂಬ ರಸ್ತೆಯುದ್ದಕ್ಕೂ ಜರತಾರಿ ಸೀರೆ ಹಾಗೂ ಕೇಸರಿ ಬಟ್ಟೆಯಿಂದ ವಿಶೇಷ ವಿನ್ಯಾಸದಲ್ಲಿ ಸಿಂಗರಿಸಲಾಗಿದ್ದು, ಹೆದ್ದಾರಿ ಪ್ರಯಾಣಿಕರೆಲ್ಲ ಒಂದು ಬಾರಿ ಈ ದೃಶ್ಯ ನೋಡುವಂತಿದೆ. ಎಲ್ಲಿ ನೋಡಿದರಲ್ಲಿ ಪೊಳಲಿ ಬ್ರಹ್ಮಕಲಶೋತ್ಸವಕ್ಕೆ ಭಕ್ತರನ್ನು ಆಹ್ವಾನಿಸುವ ಫ್ಲೆಕ್ಸ್, ಬ್ಯಾನರುಗಳು. ಈ ಶೃಂಗಾರ ಬ್ರಹ್ಮಕಲಶೋತ್ಸವ ಮುಗಿದ ಬಳಿಕ ಒಂದು ತಿಂಗಳು ನಡೆಯುವ ಪೊಳಲಿ ಜಾತ್ರೋತ್ಸವದವರೆಗೂ ಕಂಗೊಳಿಸಲಿದೆ.

ಹೊರೆಕಾಣಿಕೆ ಕೇಂದ್ರ ಉದ್ಘಾಟನೆ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಅಂಗವಾಗಿ ಶರವು ಮಹಾಗಣಪತಿ ದೇವಸ್ಥಾನದಲ್ಲಿ ತೆರೆಯಲಾದ ಹೊರೆಕಾಣಿಕೆ ಸ್ವೀಕಾರ ಕೇಂದ್ರವನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್ ಮತ್ತು ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸಿ ಉದ್ಘಾಟಿಸಿದರು. ವಿಶ್ವ ಹಿಂದು ಪರಿಷತ್ ಮುಖಂಡ ಎಂ.ಬಿ.ಪುರಾಣಿಕ್, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಬಾಲಕೃಷ್ಣ ಕೊಟ್ಟಾರಿ, ಮಹಾಬಲ ಚೌಟ, ರಾಘವ್ ಶೆಟ್ಟಿ, ಪುಷ್ಪರಾಜ್ ಪೂಜಾರಿ, ಅಚ್ಯುತ ಭಟ್, ಗಣೇಶ್ ಭಟ್ ಶರವು, ಹರೀಶ್ ಐತಾಳ್, ವಿನಯಾನಂದ ಉಪಸ್ಥಿತರಿದ್ದರು.

ಪಾರ್ಕಿಂಗ್ ವ್ಯವಸ್ಥೆಗೆ ಚಾಲನೆ: ಪೊಳಲಿ ದೇವಸ್ಥಾನದಲ್ಲಿ ಮಾ.4ರಿಂದ 13ರವರೆಗೆ ಜರುಗಲಿರುವ ಬ್ರಹ್ಮಕಲಶೋತ್ಸವದಂಗವಾಗಿ ವಾಹನಗಳ ನಿಲುಗಡೆಗೆ ಬೃಹತ್ ಪಾರ್ಕಿಂಗ್ ವ್ಯವಸ್ಥೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಕ್ ಹಾಗೂ ಪೊಳಲಿ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕಚೈತನ್ಯಾನಂದ ಉದ್ಘಾಟಿಸಿದರು. ಒಂಬತ್ತು ದಿನಗಳ ಬ್ರಹ್ಮಕಲಶೋತ್ಸವ ಸಂದರ್ಭ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ನೂರಾರು ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಭುವನೇಶ್ ಪಚಿನಡ್ಕ, ಸೋಹನ್ ಅಥಿಕಾರಿ, ಚಂದ್ರಹಾಸ ಶೆಟ್ಟಿ ನಾರಳ, ಲೋಕೇಶ್ ಭರಣಿ, ಚಂದ್ರಶೇಖರ ಶೆಟ್ಟಿ, ವಿದ್ಯಾಚರಣ್ ಭಂಡಾರಿ, ಚರಣ್ ಮಂಗಾಜೆ, ರಾಮಚಂದ್ರ ಶೆಟ್ಟಿ ಮೊದಲಾದವರಿದ್ದರು.