ವಿಷ ಕುಡಿದು ಮಹಿಳೆ ಆತ್ಮಹತ್ಯೆ

ಸೋಮವಾರಪೇಟೆ: ಸಿಆರ್‌ಪಿಎಫ್ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಮಹಿಳೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೂತಿ ಗ್ರಾಮದ ನಿವಾಸಿ, ಸಿ.ಆರ್.ಪಿ.ಎಫ್‌ನಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಚಂದ್ರಶೇಖರ್ ಅವರ ಪತ್ನಿ ದೇವಕ್ಕಿ (46) ಆತ್ಮಹತ್ಯೆ ಮಾಡಿಕೊಂಡವರು.

ಮೇ 3ರ ರಾತ್ರಿ ಕೂತಿ ಗ್ರಾಮದ ತಮ್ಮ ಮನೆಯಲ್ಲಿ ದೇವಕ್ಕಿ ವಿಷ ಕುಡಿದಿದ್ದರು. ರಜೆ ಮೇಲೆ ಬಂದಿದ್ದ ಚಂದ್ರಶೇಖರ್ ಈ ವೇಳೆ ಮನೆಯಲ್ಲೇ ಇದ್ದರು. ಕೂಡಲೇ ದೇವಕ್ಕಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

1995ರಲ್ಲಿ ಸಿ.ಆರ್.ಪಿ.ಎಫ್‌ಗೆ ಸೇರ್ಪಡೆಯಾಗಿದ್ದ ದೇವಕ್ಕಿ ತರಬೇತಿ ನಂತರ ಹತ್ತು ವರ್ಷಗಳ ಕಾಲ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಗುಜರಾತ್, ದೆಹಲಿ, ಉತ್ತರ ಪ್ರದೇಶ್, ಬಿಹಾರ್, ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಸೇವೆ ಸಲ್ಲಿಸಿ, 22 ವರ್ಷಗಳ ಸೇವೆ ನಂತರ ಎರಡು ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ಪಡೆದು, ಕೂತಿ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.

ಈಚೆಗೆ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರಪೇಟೆ ಜೇಸಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಕ್ಕಿ ಅವರಿಗೆ ಪಂಚರತ್ನ ಆವಾರ್ಡ್ ನೀಡಿ ಗೌರವಿಸಲಾಗಿತ್ತು. ಪುಲ್ವಾಮಾ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾದ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ದೇವಕ್ಕಿ, ಮತ್ತೊಮ್ಮೆ ಸೇನೆಗೆ ಸೇರಬೇಕು ಎನ್ನಿಸುತ್ತಿದೆ ಎಂದು ಹೇಳಿದ್ದರು.

ಪತಿ ಚಂದ್ರಶೇಖರ್ ಛತ್ತೀಸ್‌ಗಢದಲ್ಲಿ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರರಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.