ವಿಷ ಪ್ರಾಶನ ದುರಂತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ: ತಪ್ಪಿತಸ್ಥರ ಬಂಧನ ನಿಶ್ಚಿತ ಎಂದ ಸಚಿವ ಪುಟ್ಟರಾಜು

ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿಯ ದೇಗುಲದಲ್ಲಿ ನೀಡಲಾದ ವಿಷಯುಕ್ತ ಪ್ರಸಾದ ಸೇವಿಸಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಹನೂರು ಗ್ರಾಮದವರಾದ ಶಾಂತರಾಜು, ಪಾಪಣ್ಣ, ಗೋಪಿಯಮ್ಮ ಮತ್ತು ಅನಿತಾ ಎಂಬುವರನ್ನು ಬಿದರಹಳ್ಳಿ ರುದ್ರಭೂಮಿಯಲ್ಲಿ ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಅಂತ್ಯಸಂಸ್ಕಾರ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಸಿ.ಎಸ್​.ಪುಟ್ಟರಾಜು, ಘಟನೆಗೆ ಕಾರಣವಾದವರು ಎಷ್ಟೇ ದೊಡ್ಡವರಾದರೂ ಬಿಡುವುದಿಲ್ಲ. ಅವರನ್ನು ಬಂಧಿಸುತ್ತೇವೆ. ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ಇಂದು ಸಂಜೆ ಆಹಾರ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಈಗಾಗಲೇ 5 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದೆ. ಚಿಕಿತ್ಸೆ ಪಡೆಯುತ್ತಿರುವವರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.

ಆಂಬುಲೆನ್ಸ್​ನಲ್ಲಿನ ವೆಂಟಿಲೇಟರ್​ ಸಮಸ್ಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊಸರಿನಲ್ಲಿ ಕಲ್ಲು ಹುಡುಕುವುದು ಬೇಡ. ಮುಂದಿನ ದಿನಗಳಲ್ಲಿ ಆಂಬುಲೆನ್ಸ್​ನಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುತ್ತೇವೆ. ನೀವೆಲ್ಲ ಘಟನೆಯಲ್ಲಿ ತಮಿಳುನಾಡಿನ ಕೈವಾಡವಿದೆ ಎಂದು ಹೇಳಿದ್ದೀರಿ. ಸಾಕ್ಷ್ಯಗಳಿದ್ದರೆ ಕೊಡಿ ಎಂದು ಮಾಧ್ಯಮದವರ ವಿರುದ್ಧವೇ ಗರಂ ಆದರು.

ಉಳಿದಂತೆ ಇತರ ಗ್ರಾಮದವರಾದ ಅನಿಯಪ್ಪ, ದೊಡ್ಡಮಾರಯ್ಯ, ರಾಚಯ್ಯ, ಸತ್ಯವೇಲು, ಕೃಷ್ಣನಾಯಕ್​, ಅನಿಲ್​, ಪ್ರೀತಮ್​ ಅವರ ಅಂತ್ಯಸಂಸ್ಕಾರವೂ ಮುಕ್ತಾಯವಾಗಿದೆ.

ಸುಳ್ವಾಡಿಗೆ ಐಜಿಪಿ ಶರತ್​ ಚಂದ್ರ ಭೇಟಿ
ವಿಷ ದುರಂತ ನಡೆದ ಸುಳ್ವಾಡಿ ಗ್ರಾಮಕ್ಕೆ ಇಂದು ದಕ್ಷಿಣ ವಲಯ ಐಜಿಪಿ ಶರತ್​ ಚಂದ್ರ, ಚಾಮರಾಜನಗರ ಎಸ್​ಪಿ ಧರ್ಮೇಂದ್ರ ಕುಮಾರ್​ ಮೀನಾ ಭೇಟಿ ನೀಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯದ ಆವರಣ ಪರಿಶೀಲನೆ ಮಾಡಿದರು. ಶರತ್​ ಕುಮಾರ್​ ಅವರು ಸ್ಥಳದಲ್ಲಿದ್ದ ಪೊಲೀಸರಿಂದ ಮಾಹಿತಿ ಸಂಗ್ರಹ ಮಾಡಿದರು.