ಶುಂಠಿ ತೊಳೆದು ಕೆರೆ ನೀರು ಕಲುಷಿತ

ಚಿಕ್ಕಮಗಳೂರು: ತಾಲೂಕಿನ ಗಡಬನಹಳ್ಳಿ ಸುತ್ತ ಇರುವ ಕೆರೆಗಳಲ್ಲಿ ಶುಂಠಿ ತಂದು ತೊಳೆಯುತ್ತಿರುವುದರಿಂದ ವಿಷಾನಿಲ ಉತ್ಪತ್ತಿಯಾಗಿ ಜನ-ಜಾನುವಾರುಗಳು ಆತಂಕದಿಂದ ಜೀವನ ನಡೆಸುವ ಸ್ಥಿತಿ ಎದುರಾಗಿದೆ. ಗುರುವಾರ ಗಡಬನಹಳ್ಳಿ ಕೆರೆ ಬದಿಯಲ್ಲಿ ಲಾರಿ ನಿಲ್ಲಿಸಿಕೊಂಡು ಪೈಪ್ ಎಳೆದು ಶುಂಠಿ ತೊಳೆಯುವುದು ಕಂಡು ಬಂದಿದ್ದು, ಕೆಲವು ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಲಾರಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ನೀರಿಗಾಗಿ ಪರಿತಪಿಸುವ ಪರಿಸ್ಥಿತಿಯಲ್ಲಿ ಇರುವ ಅಲ್ಪಸ್ವಲ್ಪ ನೀರನ್ನು ಶುಂಠಿ ತೊಳೆಯಲು ಬಳಸಿದಲ್ಲಿ ಗ್ರಾಮಸ್ಥರು ಮತ್ತು ಜಾನುವಾರುಗಳಿಗೆ ನೀರೇ ಇಲ್ಲದಂತಾಗಲಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶುಂಠಿ ತೊಳೆದ ನೀರು ರಾಸಾಯನಿಕ ಮಿಶ್ರಿತವಾಗಿ ತೊಂದರೆಯಾಗಿದ್ದು, ಜಿಲ್ಲಾಡಳಿತ ಕೆರೆಗಳಲ್ಲಿ ಶುಂಠಿ ತೊಳೆಯುವ ಕಾರ್ಯಕ್ಕೆ ತಡೆಯೊಡ್ಡಬೇಕೆಂದು ಅವರು ಆಗ್ರಹಿಸಿದ್ದಾರೆ.