ಬೆಂಗಳೂರು: ಕುಂಭಕರ್ಣ ನಿದ್ರೆಯಿಂದ ಎದ್ದಿರುವ ‘ಜಂಟಲ್ಮ್ಯಾನ್’ಗೆ ಈಗ ಪೊಗರು-ಪವರು ಎರಡೂ ಬಂದಿದೆ. ಅಂದರೆ ಕುಂಭಕರ್ಣನಂಥ ಕಥಾನಾಯಕ ಇರುವ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್ಮ್ಯಾನ್’ ಚಿತ್ರದ ಟ್ರೇಲರ್ ಬಿಡುಗಡೆಗೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಸದ್ಯ ‘ಪೊಗರು’ ಚಿತ್ರದಲ್ಲಿ ಬಿಜಿಯಾಗಿರುವ ಧ್ರುವ ಸರ್ಜಾ ಇಬ್ಬರೂ ಕೈಜೋಡಿಸಿದ್ದಾರೆ.
ಅರ್ಥಾತ್, ಜ. 6ರಂದು ಈ ಇಬ್ಬರ ಉಪಸ್ಥಿತಿಯಲ್ಲಿ ‘ಜಂಟಲ್ವ್ಯಾನ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಮತ್ತೊಂದೆಡೆ ನಟ ಸಂಚಾರಿ ವಿಜಯ್ ಕೂಡ ‘ಜಂಟಲ್ವ್ಯಾನ್’ಗೆ ಸಾಥ್ ನೀಡಿದ್ದಾರೆ. ನಿರ್ದೇಶಕ ಗುರು ದೇಶಪಾಂಡೆ ಅವರ ಚೊಚ್ಚಲ ನಿರ್ಮಾಣ ಹಾಗೂ ಜಡೇಶ್ಕುಮಾರ್ ಹಂಪಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ನಿಶ್ವಿಕಾ ನಾಯ್ಡು ನಾಯಕ-ನಾಯಕಿ ಆಗಿ ಅಭಿನಯಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಆಗಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ಕುಂಭಕರ್ಣನಾಗಿ ಕಾಣಿಸಲಿದ್ದಾರೆ.
ಅಂದರೆ ನಿದ್ರೆ ಸಂಬಂಧಿತ ಸಮಸ್ಯೆಯಿಂದ ಬಳಲುತ್ತ ದಿನಕ್ಕೆ 18 ಗಂಟೆಗಳ ಕಾಲ ಮಲಗುವ ನಾಯಕನಾಗಿ ಪ್ರಜ್ವಲ್ ಅಭಿನಯಿಸಿದ್ದಾರೆ. ಇನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಈ ಸಿನಿಮಾದಲ್ಲಿ ಖಾಕಿ ಖದರ್ನಲ್ಲಿ ಕಾಣಿಸಲಿದ್ದಾರೆ. ‘ಸಂಚಾರಿ ವಿಜಯ್ ಈ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿರುವ ಅವರು ಪರದೆ ಮೇಲೆ ಖಡಕ್ ಆಗಿ ಮಿಂಚಲಿದ್ದಾರೆ. ಸಾಮಾನ್ಯವಾಗಿ ಇಂಥ ಪಾತ್ರಕ್ಕೆ ಬೇರೆ ಭಾಷೆಯವರನ್ನು ಆರಿಸಿಕೊಳ್ಳುತ್ತಾರೆ. ಆದರೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ನಮ್ಮಲ್ಲಿರುವಾಗ ಅವರೇ ಈ ಪಾತ್ರಕ್ಕೆ ಸೂಕ್ತ ಎಂದು ಆರಿಸಿಕೊಂಡೆವು. ಈ ಮೂಲಕ ನಮ್ಮದೇ ಕಲಾವಿದರಿಗೆ ಪ್ರೋತ್ಸಾಹ ಕೊಡುವ ಉದ್ದೇಶ ನಮ್ಮದು’ ಎನ್ನುತ್ತಾರೆ ನಿರ್ವಪಕ ಗುರು ದೇಶಪಾಂಡೆ.
‘ಆನಂದ್ ಆಡಿಯೋ’ ಯೂ-ಟ್ಯೂಬ್ ಚಾನೆಲ್ನಲ್ಲಿ ಜ.6ರಂದು ಟ್ರೇಲರ್ ಬಿಡುಗಡೆ ಆಗಲಿದ್ದು, ಜ. 31ರಂದು ಸಿನಿಮಾ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ, ಆರೂರು ಸುಧಾಕರ್ ಶೆಟ್ಟಿ ಛಾಯಾಗ್ರಹಣ, ವೆಂಕಟೇಶ್ ಅವರ ಸಂಕಲನವಿದೆ.