ಸಾಗರ: ಕಾವ್ಯವು ಭಾಷೆ, ಭಾವ, ಅರ್ಥ, ಲಯದಿಂದ ಓದುಗರನ್ನು ತಲುಪಿದರೂ ಪ್ರಶ್ನೆ ಕೇಳುವುದರ ಮೂಲಕವೇ ತನ್ನ ಸಾರ್ಥಕತೆ ಕಂಡುಕೊಳ್ಳುತ್ತದೆ ಎಂದು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.
ಸಾಗರ ಸಮೀಪದ ಹೆಗ್ಗೋಡಿನ ನೀನಾಸಂ ಸಂಸ್ಥೆ ಆಯೋಜಿಸಿರುವ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮದಲ್ಲಿ ಪಠ್ಯಗಳ ಓದಿನ ಕುರಿತ ಜಿಜ್ಞಾಸೆ ಕುರಿತ ಗೋಷ್ಠಿಯಲ್ಲಿ ಮಾತನಾಡಿ, ಉತ್ತಮ ಕಾವ್ಯವು ಅಭಿಪ್ರಾಯ ರೂಪಿಸುತ್ತದೆಯೇ ಹೊರತು ತನ್ನ ಅಭಿಪ್ರಾಯ ಹೇರುವುದಿಲ್ಲ. ಕವಿ ತನ್ನೊಳಗಿನ ಪ್ರಶ್ನೆಗಳಿಗೆ ಉತ್ತರವನ್ನು ಕೂಡ ಕಾವ್ಯದ ಮೂಲಕ ಕಂಡುಕೊಳ್ಳುತ್ತಾನೆ ಎಂದು ತಿಳಿಸಿದರು.
ಆಯಾ ಕಾಲಘಟ್ಟಗಳಲ್ಲಿ ಕಾವ್ಯಗಳು ಸಾಮಾಜಿಕ ಸ್ಥಿತ್ಯಂತರಗಳಿಗೆ ಧ್ವನಿಸುತ್ತಾ ಮುಖಾಮುಖಿಯಾಗಿವೆ. ಕೆಲ ಸಂದರ್ಭಗಳಲ್ಲಿ ನೇರವಾಗಿ ಪ್ರತಿಭಟನೆಗೆ ಇಳಿಯದಿದ್ದರೂ ಒಳಗೆನಿಂದಲೇ ಬಂಡಾಯದ ಧ್ವನಿಯನ್ನು ಕಾವ್ಯಗಳ ಮೂಲಕ ಎತ್ತಿ ಹಿಡಿಯಲಾಗಿದೆ ಎಂದರು.
ಬರಹಗಾರ ಕಮಲಾಕಾರ ಭಟ್ ಕಡವೆ ಮಾತನಾಡಿ, ಕೆಲ ಕವಿತೆಗಳನ್ನು ವಾಚಿಸುವ ಮೂಲಕ ಶಬ್ಧದ ಹಂಗು ತೊರೆದು ಕಾವ್ಯ ಹೇಗೆ ಪರಿಣಾಮಕಾರಿಯಾಗಿ ವಿಚಾರಗಳನ್ನು ದಾಟಿಸುತ್ತದೆ ಎಂಬುದು ಅರಿವಾಗುತ್ತದೆ. ಹಾಡಿನ ಹಂಗಿಲ್ಲದ ಕವನಗಳು ಪರಿಣಾಮಕಾರಿಯಾಗಿ ಜನತೆಯನ್ನು ತಲುಪುತ್ತವೆ ಎಂದರು. ರಂಗಕರ್ಮಿ ಕೆ.ವಿ.ಅಕ್ಷರ ನಿರ್ವಹಿಸಿದರು. ನೀನಾಸಂ ಬಳಗದಿಂದ ನಟರಾಜ ಹೊನ್ನವಳ್ಳಿ ನಿರ್ದೇಶನದ ಹಬ್ಬದ ಹನ್ನೆರಡನೆಯ ರಾತ್ರಿ ನಾಟಕ ಪ್ರದರ್ಶನಗೊಂಡಿತು.