ಜಾತಿಗಿರುವ ಬೆಲೆ ಪ್ರತಿಭೆ, ಪ್ರಾಮಾಣಿಕತೆಗಿಲ್ಲ 

ವಿಜಯವಾಣಿ ಸುದ್ದಿಜಾಲ ಮೈಸೂರು
ಭಾರತದಲ್ಲಿ ಜಾತಿಗೆ ಬೆಲೆ ಇದೆಯೇ ಹೊರತು, ಪ್ರತಿಭೆ, ಪ್ರಾಮಾಣಿಕತೆಗೆ ಬೆಲೆ ಇಲ್ಲ, ಇದು ದುರದೃಷ್ಟಕರ ಸಂಗತಿ ಎಂದು ಕವಿ ಡಾ.ಸಿದ್ದಲಿಂಗಯ್ಯ ವಿಷಾದಿಸಿದರು.
ಸಾಮಾಜಿಕ ಕ್ರಾಂತಿಕಾರಿ ಮಾಜಿ ಸಚಿವ ಬಿ.ಬಸವಲಿಂಗಪ್ಪನವರ ಸ್ಮರಣಾರ್ಥ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿಗಳ ಬಳಗ ಭಾನುವಾರ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲ್ಕುಂಡಿ ಮಹಾದೇವಸ್ವಾಮಿ ಅವರ ‘ಬಯಲು ಬಹಿರ್ದೆಸೆ- ಒಂದು ಸಾಮಾಜಿಕ ಅನಿಷ್ಟ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಅಥ್ಲೀಟ್ ಹಿಮದಾಸ್ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಾಗ ವಿದೇಶಿಗರು ‘ಭಾರತದಲ್ಲಿ ನವತಾರೆ ಉದಯಿಸಿತು’ ಎಂದು ಹೊಗಳುತ್ತಾರೆ. ಆದರೆ ಭಾರತದಲ್ಲಿ ಉದಯಿಸಿದ ನವತಾರೆ ಯಾವ ಜಾತಿಯದೆಂದು ಸಂಶೋಧನೆ ಶುರುವಾಗುತ್ತದೆ. ಒಲಿಂಪಿಕ್ಸ್‌ನಲ್ಲಿ ಸಿಂಧು ಪದಕ ಗೆದ್ದಾಗ 10 ನಿಮಿಷದಲ್ಲಿ 10 ಸಾವಿರ ಜನರು ಸಿಂಧು ಯಾವ ಜಾತಿಯೆಂದು ಸಂಶೋಧನೆ ಮಾಡಿದ್ದಾರೆ ಎಂದರು.
ಒಬ್ಬ ವ್ಯಕ್ತಿ ಯಾವ ಜಾತಿಯವನೆಂದೂ ಸಂಶೋಧನೆ ಮಾಡದಿದ್ದರೆ ನಮ್ಮ ದೇಶದ ಜಾತಿಯ ಮನಸ್ಸುಗಳಿಗೆ ನಿದ್ದೆಯೇ ಬರುವುದಿಲ್ಲ, ಊಟವೂ ಸೇರುವುದಿಲ್ಲ, ಸಮಾಧಾನ ಮೊದಲೇ ಇರುವುದಿಲ್ಲ ಎಂದರು.
ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಸ್ವಚ್ಛ ಭಾರತದ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ಸ್ವಚ್ಛತೆಗಿಂತ ದೇಶದ ಜನರ ಮನಸ್ಥಿತಿಯಲ್ಲಿ ತುಂಬಿರುವ ಜಾತಿಯ ಮಲಿನತೆಯನ್ನು ಮೊದಲು ಸ್ವಚ್ಛ ಮಾಡಬೇಕಿದೆ. ಕೈಯಲ್ಲಿ ಪೊರಕೆ ಹಿಡಿಯದವರೆಲ್ಲ ಈಗ ಪೊರಕೆ ಹಿಡಿದು ಪರಿಸರ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ನಮ್ಮ ಜನರ ಮನಸ್ಸಿನಲ್ಲಿರುವ ಕೊಳಕನ್ನು ಮೊದಲು ಸ್ವಚ್ಛಗೊಳಿಸಬೇಕು. ದೇಶ ಜಾತಿಯ ಕೆಟ್ಟ ಮನಸ್ಸುಗಳಿಂದ ತುಂಬಿದೆ ಎಂದರು.
ದಲಿತರ ನೋವು ದಲಿತರಿಗಷ್ಟೇ ಗೊತ್ತು. ಧರ್ಮ, ವರ್ಣಾಶ್ರಮ ಪದ್ಧತಿ, ಜಾತಿಯಿಂದ ದಲಿತರು ನೋವು ಅನುಭವಿಸಿದ್ದಾರೆ. ಪೌರಕಾರ್ಮಿರಂತೂ ತಲೆಯ ಮೇಲೆ ಮಲ ಹೊರುತ್ತಿದ್ದುದ್ದನ್ನು ನೋಡಿದ ಬಸವಲಿಂಗಪ್ಪ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದರು. ಮೇಲ್ವರ್ಗದವರು ಪೌರಕಾರ್ಮಿಕರ ಕೈಯಲ್ಲೇ ಸರ್ಕಾರದ ವಿರುದ್ಧ ಕೇಸು ಹಾಕಿಸಿದರು.ಆಗ ಬಸವಲಿಂಗಪ್ಪ ನೊಂದುಕೊಂಡಿದ್ದರು ಎಂದರು.
ಸಿದ್ದರಾಮ್ಯಯ ಸರ್ಕಾರದ ಅವಧಿಯಲ್ಲಿ ಪೌರಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದುಗೊಳಿಸುವಂತೆ ನಾನು ಒತ್ತಾಯಿಸಿದ್ದೆ, ಅವರು ಹೆದರಿಬಿಟ್ಟರು. ಇತ್ತೀಚೆಗೆ ದಸರಾ ಸಂದರ್ಭದಲ್ಲಿ ಪೌರಕಾರ್ಮಿಕರು ಪ್ರತಿಭಟನೆಗೆ ಕುಳಿತಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಆದರೆ ಇದುವರೆಗೆ ಒಂದೇ ಒಂದು ಬಾರಿಯೂ ಚರ್ಚಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೇಖಕ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ವಿಶ್ವದಲ್ಲಿ 900 ಬಿಲಿಯನ್ ಜನರಿದ್ದಾರೆ. ಅವರಲ್ಲಿ 1.2 ಬಿಲಿಯನ್ ಜನರು ಬಯಲು ಬಹಿರ್ದೆಸೆಗೆ ಹೋಗುತ್ತಾರೆ. ಭಾರತದಲ್ಲಿ 900 ಮಿಲಿಯನ್ ಜನರಲ್ಲಿ 700 ಮಿಲಿಯನ್ ಜನರು ಬಯಲು ಬಹಿರ್ದೆಸೆಗೆ ಹೋಗುತ್ತಾರೆ. ಚಂದ್ರನಲ್ಲಿಗೆ ಮಾನವನನ್ನು ಕಳುಹಿಸುವಷ್ಟು ತಾಂತ್ರಿಕ ಸಾಧಿಸಿರುವ ಭಾರತ ಬಯಲು ಬಹಿರ್ದೆಸೆಯಲ್ಲೂ ಸಾಧನೆ ಮಾಡುತ್ತಿದೆ. ಭಾರತದಲ್ಲಿ ಬಯಲು ಬಹಿರ್ದೆಸೆಯಿಂದ ಪ್ರತಿ ದಿನ 1200 ಗರ್ಭಿಣಿಯರು ಮತ್ತು 200 ಬಾಣಂತಿಯರು ಸಾವಿಗೀಡಾಗುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕಿದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ನೀಲಗಿರಿ ಎಂ.ತಳವಾರ್,  ಬಳಗದ ಅಧ್ಯಕ್ಷ ಪಿ.ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ವೆಂಕಟರಾಜು ಭಾಗವಹಿಸಿದ್ದರು.