ಬೆಂಗಳೂರು : ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ ಜಾಮೀನು ನೀಡಿ ಸಂತ್ರಸ್ತೆಯನ್ನೇ ಮದುವೆಯಾಗಲು ಅವಕಾಶ ಮಾಡಿಕೊಟ್ಟಿದ್ದ ಹೈಕೋರ್ಟ್, ಇದೀಗ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಕೂಡ ರದ್ದುಪಡಿಸಿದೆ.
ಪ್ರಸ್ತುತ ಸಂತ್ರಸ್ತೆ ವಯಸ್ಕಳಾಗಿದ್ದು, ಈಗಾಗಲೇ ಆರೋಪಿ ಸಂತ್ರಸ್ತೆಯನ್ನು ವರಿಸಿದ್ದಾನೆ ಹಾಗೂ ಅವರಿಗೆ ಮಗು ಜನಿಸಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಆರೋಪಿ ವಿರುದ್ಧದ ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (ಪೋಕ್ಸೋ ವಿಶೇಷ ಕೋರ್ಟ್) ಮುಂದಿದ್ದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಇದರಿಂದಾಗಿ ಆರೋಪಿ, ಸಂತ್ರಸ್ತೆ ಹಾಗೂ ಮಗುವಿಗೆ ನೆಮ್ಮದಿಯಿಂದ ಜೀವನ ಸಾಗಿಸಲು ಅನುವು ಮಾಡಿಕೊಟ್ಟಿದೆ.
ಸಮಾಜದಲ್ಲಿ ಅವಮಾನ ಎದುರಿಸಬೇಕಾದಿತು
ಮಗುವಿನ ಡಿಎನ್‌ಎ ಆಧಾರದಲ್ಲಿ ಸಂತ್ರಸ್ತೆ ಮತ್ತು ಆರೋಪಿಯೇ ಮಗುವಿನ ತಂದೆ-ತಾಯಿ ಎಂದು ತಿಳಿದು ಬಂದಿದೆ. ಆ ಮಗುವಿಗೆ ಪ್ರಕರಣದ ಬಗ್ಗೆ ಕಲ್ಪನೆಯೂ ಇಲ್ಲ. ಇದೀಗ ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸದಿದ್ದರೆ ಮಗು ಮತ್ತು ತಾಯಿ ವಿಪರೀತ ಸಂಕಟ ಎದುರಿಸಬೇಕಾಗುತ್ತದೆ. ಅವರ ಜೀವನದಲ್ಲಿ ಭೀಕರವಾದ ಕಂದಕ ಸೃಷ್ಟಿಯಾಗುತ್ತದೆ. ಇದರಿಂದಾಗಿ ಸಮಾಜದಲ್ಲಿ ಅವಮಾನ ಎದುರಿಸಬೇಕಾಗುತ್ತದೆ. ಅವರ ಸಂತೋಷವನ್ನು ಸಂಪೂರ್ಣವಾಗಿ ಮರೆ ಮಾಚಿದಂತಾಗುತ್ತದೆ. ಅದನ್ನು ತಡೆಹಿಡಿಯಲು ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.