ಕುದಿಯುತ್ತಿದೆ ರಕ್ತ… ಪ್ರತೀಕಾರ ಖಚಿತ

ನವದೆಹಲಿ: ಭಾರತೀಯ ಸೇನೆಯ 42 ಯೋಧರನ್ನು ಬಲಿಪಡೆದ ಪುಲ್ವಾಮ ಉಗ್ರ ದಾಳಿ ಹಿಂದಿನ ಕೈವಾಡ ಯಾರದ್ದೇ ಆಗಿದ್ದರೂ ಅವರು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಈ ಮೂಲಕ ಉಗ್ರ ಸಂಘಟನೆ ಹಾಗೂ ಅವುಗಳಿಗೆ ನೆರವು ನೀಡುತ್ತಿರುವ ಪಾಕಿಸ್ತಾನ ವಿರುದ್ಧ ಪ್ರತೀಕಾರ ಖಚಿತ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಪಾಕ್ ವಿರುದ್ಧ ಭಾರತ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೇಶಾದ್ಯಂತ ಜನರು ಆಗ್ರಹಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. ‘ದೇಶದ ಜನರ ರಕ್ತ ಕುದಿಯುತ್ತಿದೆ. ದಾಳಿಕೋರರಿಗೆ ಶಿಕ್ಷೆ ನಿಶ್ಚಿತ. ಇಂಥ ದಾಳಿಗಳಿಂದ ಭಾರತವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಸೇನೆ ಮೇಲೆ ದೇಶದ ಜನರಿಗೆ ಸಂಪೂರ್ಣ ವಿಶ್ವಾಸವಿದೆ. ಕಾರ್ಯಾಚರಣೆ ಮತ್ತು ಮುಂದಿನ ಕ್ರಮ ಜರುಗಿಸಲು ಭದ್ರತಾ ಪಡೆಗಳಿಗೆ ಸರ್ಕಾರ ಮುಕ್ತ ಅಧಿಕಾರ ನೀಡುತ್ತದೆ. ಪುಲ್ವಾಮ ಉಗ್ರ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲು ಸಮಯ, ಸ್ಥಳ ಮತ್ತು ಮಾದರಿಯನ್ನು ಸರ್ಕಾರ ತೀರ್ವನಿಸುವುದಿಲ್ಲ. ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಪ್ರಧಾನಿ ಸೂಚ್ಯವಾಗಿ ಪ್ರತಿದಾಳಿಯ ಸುಳಿವು ನೀಡಿದ್ದಾರೆ. ಶುಕ್ರವಾರ ಭದ್ರತಾ ಅಧಿಕಾರಿಗಳು, ಸಂಪುಟ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ (ಸಿಸಿಸಿಎಸ್) ನಡೆಸಿದ ಬಳಿಕ ಮಾತನಾಡಿದ ಅವರು, ಉಗ್ರರು ಮತ್ತು ಅವರ ಬೆಂಬಲಿಗರು ನ್ಯಾಯದ ಮುಂದೆ ತಲೆಬಾಗುವಂತೆ ಮಾಡುತ್ತೇವೆ ಎಂದು ಸಂಕಲ್ಪ ಮಾಡುವುದಾಗಿ ತಿಳಿಸಿದರು.

ಎನ್​ಐಎ ತಂಡ ಪರಿಶೀಲನೆ: ಐಜಿ ದರ್ಜೆಯ ಅಧಿಕಾರಿ ನೇತೃತ್ವದ 12 ಸದಸ್ಯರ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ತಂಡ ದಾಳಿ ನಡೆದ ಸ್ಥಳ ಪುಲ್ವಾಮಕ್ಕೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿದೆ.

ಪಾಕಿಸ್ತಾನಕ್ಕೆ ಆಪ್ತ ರಾಷ್ಟ್ರ ಮಾನ್ಯತೆ ರದ್ದು

ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಭದ್ರತೆ ಕುರಿತಾದ ಸಂಪುಟ ಸಭೆ ಶುಕ್ರವಾರ ನಡೆದಿದೆ. ಪಾಕಿಸ್ತಾನಕ್ಕೆ ನೀಡಲಾಗಿದ್ದ ಅತಿ ಆಪ್ತ ರಾಷ್ಟ್ರ (ಎಂಎಫ್​ಎನ್) ಎಂಬ ಮಾನ್ಯತೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ವ್ಯಾಪಾರ ಸಂಬಂಧ ಅನುಕೂಲಕ್ಕಾಗಿ ನೆರೆಹೊರೆ ರಾಷ್ಟ್ರಗಳಿಗೆ ಈ ಮಾನ್ಯತೆ ನೀಡಲಾಗುತ್ತದೆ. ಮಾನ್ಯತೆ ರದ್ದುಗೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ಮಿತಿರಹಿತವಾಗಿ ಏರಿಕೆ ಮಾಡಲು ಭಾರತಕ್ಕೆ ಅವಕಾಶ ಸಿಗಲಿದೆ. ತಾರತಮ್ಯ ರಹಿತ ವ್ಯಾಪಾರಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. 1996ರಲ್ಲಿ ಈ ಮಾನ್ಯತೆಯನ್ನು ಪಾಕಿಸ್ತಾನಕ್ಕೆ ಭಾರತ ನೀಡಿತ್ತು. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲುಟಿಒ) ನಿಯಮದಂತೆ ಪಾಕ್ ಕೂಡ ಭಾರತಕ್ಕೆ ಅತಿ ಆಪ್ತ ರಾಷ್ಟ್ರ ಎಂಬ ಮಾನ್ಯತೆ ನೀಡಬೇಕಿದೆ. ಆದರೆ ಅದನ್ನು ಪಾಕ್ ನೀಡಿಲ್ಲ.

ಅರವತ್ತು ಕೆಜಿ ಆರ್​ಡಿಎಕ್ಸ್ ಬಳಕೆ!

ಸಿಆರ್​ಪಿಎಫ್ ಬೆಂಗಾವಲು ಪಡೆ ವಾಹನದ ಮೇಲಿನ ದಾಳಿಗೆ ಉಗ್ರರು ಅತ್ಯಂತ ತೀವ್ರತೆಯ ಸ್ಪೋಟಕ ವಸ್ತು ‘ಆರ್​ಡಿಎಕ್ಸ್ ’ ಬಳಸಿದ್ದಾರೆ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಬಯಲಾಗಿದೆ. 60 ಕೆಜಿ ಆರ್​ಡಿಎಕ್ಸ್, ರಸಗೊಬ್ಬರ ತಯಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕಗಳನ್ನು ಬಳಸಲಾಗಿದೆ. ಇದರಿಂದಾಗಿ 350 ಕೆ.ಜಿ. ಸ್ಪೋಟಕ ಹೊತ್ತ ವಾಹನವನ್ನು ಪತ್ತೆಹಚ್ಚುವುದು ಸುಲಭವಾಗಿರಲಿಲ್ಲ ಎಂದು ವಿಧಿ ವಿಜ್ಞಾನ ತಜ್ಞರ ತಂಡ ಅಭಿಪ್ರಾಯಪಟ್ಟಿದೆ. ರಾಸಾಯನಿಕಗಳಿಗೆ ಚೂಪಾದ ಮೊಳೆಗಳು, ಸೀಸದ ಉಂಡೆಗಳು, ಬಾಂಬ್ ಸ್ಪೋಟದ ಬಳಿಕ ಉಳಿಯುವ ಹೊರಗಿನ ಲೋಹದ ಕವಚಗಳನ್ನು ಬೆರೆಸಲಾಗಿತ್ತು. ಇದರಿಂದಾಗಿ ಸ್ಫೋಟ ಮಾರಣಾಂತಿಕವಾಯಿತು ಎಂದು ತಜ್ಞರು ಹೇಳಿದ್ದಾರೆ. ಕಾಶ್ಮೀರದಲ್ಲಿ ಕಳೆದ 10 ವರ್ಷಗಳಲ್ಲಿ ಸಂಭವಿಸಿರುವ ಸ್ಪೋಟದಲ್ಲಿ ಹೆಚ್ಚಾಗಿ ಅಮೋನಿಯಮ್ ನೈಟ್ರೇಟ್ ಬಳಕೆಯಾಗಿದೆ.

ಯೋಧರ ಪಾರ್ಥಿವಶರೀರಕ್ಕೆ ಹೆಗಲುಕೊಟ್ಟ ಸಿಂಗ್

ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಶ್ರದ್ಧಾಂಜಲಿ ಅರ್ಪಿಸಿದ್ದಲ್ಲದೆ ಯೋಧರ ಪಾರ್ಥಿವಶರೀರಗಳಿಗೆ ಹೆಗಲುಕೊಟ್ಟರು. ಈ ವೇಳೆ ರಾಜನಾಥ್ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಗುರುವಾರ ಹುತಾತ್ಮರಾದ ಯೋಧರ ಪಾರ್ಥಿವಶರೀರಗಳನ್ನು ಶುಕ್ರವಾರ ಶ್ರೀನಗರದಲ್ಲಿರುವ ಸಿಆರ್​ಪಿಎಫ್ ಮುಖ್ಯಾಲಯಕ್ಕೆ ತಂದು, ಸೇನಾ ಗೌರವ ಸಲ್ಲಿಸಲಾಯಿತು. ಆ ಬಳಿಕ ಪಾರ್ಥಿವಶರೀರಗಳನ್ನು ವಾಹನಗಳತ್ತ ಕೊಂಡೊಯ್ಯುವಾಗ ಇತರೆ ಸೈನಿಕರೊಂದಿಗೆ ಸಿಂಗ್ ಕೂಡ ಹೆಗಲುಕೊಟ್ಟರು. ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಶ್ರದ್ಧಾಂಜಲಿ ಅರ್ಪಿಸಿದರು.

ಪರಿಸ್ಥಿತಿ ಪರಾಮರ್ಶೆ: ಶ್ರೀನಗರಕ್ಕೆ ಬಂದಿಳಿಯುತ್ತಿದ್ದಂತೆ ಹಿರಿಯ ಸೇನಾಧಿಕಾರಿಗಳೊಂದಿಗೆ ಸಭೆ ನಡೆಸಿದ ಗೃಹ ಸಚಿವರು ಪರಿಸ್ಥಿತಿಯನ್ನು ಪರಾಮಶಿಸಿದರು. ದಾಳಿ ಕುರಿತಂತೆ ಹೆಚ್ಚಿನ ವಿವರಗಳನ್ನೂ ಪಡೆದುಕೊಂಡರು. ಶ್ರೀನಗರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ, ಸ್ಥೈರ್ಯ ತುಂಬಿದರು.

‘ಮರೆಯೋದೂ ಇಲ; ಕ್ಷಮಿಸೋದೂ ಇಲ್ಲ’! ಸಿಆರ್​ಪಿಎಫ್

ಪುಲ್ವಾಮಾ ದಾಳಿ ಬಳಿಕ ಟ್ವೀಟ್ ಮಾಡಿ ಕಟುವಾಗಿ ಖಂಡಿಸಿರುವ ಸಿಆರ್​ಪಿಎಫ್ ‘ಈ ಕೃತ್ಯವನ್ನು ಮರೆಯುವುದೂ ಇಲ್ಲ, ಕ್ಷಮಿಸೋದೂ ಇಲ್ಲ. ನಾವು ಹುತಾತ್ಮ ಯೋಧರ ಕುಟುಂಬಗಳ ಜತೆ ಇದ್ದೇವೆ’ ಎಂದು ಹೇಳಿದೆ.

ಜಮ್ಮುನಲ್ಲಿ ಹಿಂಸಾಚಾರ; ಕರ್ಫ್ಯೂ

ಪುಲ್ವಾಮಾ ದಾಳಿಯನ್ನು ಖಂಡಿಸಿ ಶುಕ್ರವಾರ ಕರೆ ನೀಡಲಾಗಿದ್ದ ಜಮ್ಮು ನಗರ ಬಂದ್ ವೇಳೆ ಹಿಂಸಾಚಾರ ಸಂಭವಿಸಿದೆ. ಒಂದು ಗುಂಪು, 15ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಘರ್ಷಣೆಯಲ್ಲಿ 12 ಜನ ಗಾಯಗೊಂಡಿದ್ದಾರೆ. ಶಾಂತಿ ಕಾಪಾಡುವಂತೆ ಜನರಿಗೆ ಕರೆ ನೀಡಿರುವ ಸೇನಾಧಿಕಾರಿಗಳು ಫ್ಲ್ಯಾಗ್ ಮಾರ್ಚ್ ಕೂಡ ನಡೆಸಿದ್ದಾರೆ. ಕೋಮು ಗಲಭೆ ತಲೆದೋರುವ ಆತಂಕದ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶುಕ್ರವಾರ ಬೆಳಗ್ಗೆ ಇಲ್ಲಿನ ಪುರಾನಿ ಮಂಡಿ, ರೇಹಾರಿ, ಶಕ್ತಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನ ವಿರೋಧಿ ಪ್ರತಿಭಟನೆಗಳು ಬೃಹತ್ ಪ್ರಮಾಣದಲ್ಲಿ ನಡೆದವು. ಪಾಕ್ ವಿರೋಧಿ ಘೋಷಣೆಗಳನ್ನು ಕೂಗಿದ ನೂರಾರು ಯುವಕರು ರಣಹೇಡಿ ಪಾಕ್ ವಿರುದ್ಧ ಪ್ರತೀಕಾರ ತಿರಿಸಿಕೊಳ್ಳುವಂತೆ ಆಗ್ರಹಿಸಿದರು. ಹಲವೆಡೆ ರಸ್ತೆ ಮಧ್ಯೆ ಟೈರ್​ಗಳನ್ನಿಟ್ಟು ಬೆಂಕಿ ಹಚ್ಚಿದರು. ಬಜರಂಗ ದಳ, ಶಿವಸೇನೆ ಮತ್ತು ಡೋಗ್ರಾ ಫ್ರಂಟ್​ಗಳು ಪ್ರತ್ಯೇಕವಾಗಿ ಕ್ಯಾಂಡಲ್ ಮಾರ್ಚ್ ನಡೆಸಿದವು. ಹೈಕೋರ್ಟ್ ವಕೀಲರು ಕೂಡ ಭಯೋತ್ಪಾದಕ ದಾಳಿ ಖಂಡಿಸಿ ಕಲಾಪ ಬಹಿಷ್ಕರಿಸಿದರು.

ವ್ಯಾಪಾರೋದ್ಯಮ ಸ್ತಬ್ಧ: ಜಮ್ಮು-ಕಾಶ್ಮೀರ ಚೆಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಕರೆ ನೀಡಿದ್ದ ಬಂದ್​ಗೆ ಭಾರಿ ಸ್ಪಂದನೆ ಸಿಕ್ಕಿದ್ದು, ಎಲ್ಲ ಅಂಗಡಿಗಳು ಬಾಗಿಲು ಹಾಕಿದ್ದವು. ವ್ಯಾಪಾರೋದ್ಯಮ ಸ್ತಬ್ಧಗೊಂಡಿತ್ತು.

ಕ್ಯಾತೆ ಮುಂದುವರಿಸಿದ ಚೀನಾ!

ಪುಲ್ವಾಮಾ ಬಳಿ ನಡೆದ ಭಯೋತ್ಪಾದಕ ದಾಳಿಯನ್ನು ಚೀನಾ ಖಂಡಿಸಿದೆಯಾದರೂ, ಭಯೋತ್ಪಾದಕ ಸಂಘಟನೆ ಜೈಷ್ ಎ ಮೊಹಮ್ಮದ್​ನ ಸ್ಥಾಪಕ ಮಸೂದ್ ಅಜರ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ನಿರಾಕರಿಸಿದೆ. ಚೀನಾದ ಈ ದ್ವಂದ್ವ ನಿಲುವು ಅಚ್ಚರಿ ಮೂಡಿಸಿದೆ. ದಾಳಿಯ ಒಂದು ದಿನದ ಬಳಿಕ ಪ್ರತಿಕ್ರಿಯೆ ನೀಡಿ ಕೃತ್ಯವನ್ನು ಖಂಡಿಸಿರುವ ಚೀನಾ, ‘ನಾವು ಎಲ್ಲ ತರಹದ ಭಯೋತ್ಪಾದನೆಯನ್ನು ವಿರೋಧಿಸುತ್ತೇವೆ. ಯೋಧರ ಮೇಲೆ ನಡೆಸಿರುವ ಈ ದಾಳಿಯಿಂದ ನಮಗೆ ನೋವಾಗಿದೆ’ ಎಂದಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮಾತನಾಡಿ ‘ಮಸೂದ್ ಅಜರ್​ನನ್ನು ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರ ಎಂದು ಘೋಷಿಸುವ ವಿಷಯವನ್ನು ನಾವು ಜವಾಬ್ದಾರಿಯುತವಾಗಿ ನೋಡುತ್ತೇವೆ. ತಕ್ಷಣಕ್ಕೆ ಈ ಬಗ್ಗೆ ನಿರ್ಣಯಕ್ಕೆ ಬರಲಾಗದು’ ಎಂದಿದ್ದಾರೆ. ಪಾಕಿಸ್ತಾನದೊಂದಿಗೆ ಸ್ನೇಹ ಹೊಂದಿರುವ ಚೀನಾ ಇದೇ ಕಾರಣಕ್ಕಾಗಿ ಮಸೂದ್ ಅಜರ್​ನನ್ನು ರಕ್ಷಿಸುತ್ತಿದೆ. ಈ ಹಿಂದೆ ಭಾರತ ಮಸೂದ್ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ವಿಶ್ವಸಂಸ್ಥೆಗೆ ಆಗ್ರಹಿಸಿತ್ತು. ಆದರೆ, ಪಾಕ್​ನ್ನು ಬೆಂಬಲಿಸಲು ಚೀನಾ ತನ್ನ ವಿಟೋ ಅಧಿಕಾರ ಬಳಸಿತು. 2016ರ ಜನವರಿ 2ರಂದು ಪಠಾಣ್​ಕೋಟ್​ನ ವಾಯುನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಕೂಡ ಮಸೂದನೇ ಆಗಿದ್ದಾನೆ. ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆ ವೇಳೆಯೂ ಹಲವು ಬಾರಿ ಮಸೂದ್ ವಿಷಯ ಪ್ರಸ್ತಾಪವಾಗಿದೆಯಾದರೂ, ಒಮ್ಮತ ಏರ್ಪಟ್ಟಿಲ್ಲ.

ಇನ್ನೊಬ್ಬ ಪುತ್ರನನ್ನೂ ಸೇನೆಗೆ ಕಳಿಸುವೆ

ನವದೆಹಲಿ: ಹುತಾತ್ಮ ಯೋಧರ ಕುಟುಂಬವರ್ಗದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕೆಲ ಯೋಧರು ಕುಟುಂಬವನ್ನು ಹಲವು ದಿನಗಳ ಹಿಂದಷ್ಟೇ ಭೇಟಿಯಾಗಿ ಕರ್ತವ್ಯಕ್ಕೆ ಮರಳಿದ್ದರೆ, ಮತ್ತೆ ಕೆಲವರು ದಾಳಿಯ ಸ್ವಲ್ಪ ಹೊತ್ತು ಮುನ್ನ ಮನೆಯವರೊಂದಿಗೆ ಫೋನಿನಲ್ಲಿ ಮಾತನಾಡಿದ್ದಾರೆ. ಮಗ-ಗಂಡನನ್ನು ಕಳೆದುಕೊಂಡಿರುವ ಕುಟುಂಬಗಳು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ಎಂದು ಆಗ್ರಹಿಸಿವೆ.

40ಕ್ಕೂ ಹೆಚ್ಚು ಹುತಾತ್ಮ ಯೋಧರಲ್ಲಿ ಬಿಹಾರದ ಭಾಗಲ್​ಪುರ್​ದ ರತನ್ ಠಾಕೂರ್ ಕೂಡ ಒಬ್ಬರು. ಸುದ್ದಿ ತಿಳಿದು ದುಃಖ ತಪ್ತರಾದ ರತನ್ ತಂದೆ-‘ನಾನು ಒಬ್ಬ ಮಗನನ್ನು ಕಳೆದುಕೊಂಡಿದ್ದೇನೆ. ಎರಡನೇ ಮಗನನ್ನು ಮಾತೃಭೂಮಿಯ ಸೇವೆಗಾಗಿ ಸೇನೆಗೆ ಕಳಿಸಲು ಸಿದ್ಧನಿದ್ದೇನೆ. ಆದರೆ ಸರ್ಕಾರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಮದುವೆ ಔತಣದ ದುಡ್ಡು ಸೈನಿಕರಿಗೆ! ಪುಲ್ವಾಮಾ ಭಯೋತ್ಪಾದಕ ದಾಳಿಯ ಸುದ್ದಿ ಗೊತ್ತಾಗುತ್ತಿದ್ದಂತೆ ಮಗಳ ಮದುವೆ ಆರತಕ್ಷತೆ ಸಮಾರಂಭ ಮತ್ತು ಭರ್ಜರಿ ಔತಣಕೂಟವನ್ನು ರದ್ದುಪಡಿಸಿದ ಗುಜರಾತ್ ಸೂರತ್​ನ ವಜ್ರ ವ್ಯಾಪಾರಿ ದೇವಶಿ ಮಾಣೇಕ್, 11 ಲಕ್ಷ ರೂ.ಗಳನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ಮತ್ತು 5 ಲಕ್ಷ ರೂ. ಸಾಮಾಜಿಕ ಸಂಸ್ಥೆಗಳಿಗೆ ನೀಡಲು ನಿರ್ಧರಿಸಿದ್ದಾರೆ. ಸೂರತ್​ನ ಪದ್ಮಾವತಿ ಡೈಮಂಡ್​ನ ಮಾಲೀಕ ದೇವಶಿ ಶುಕ್ರವಾರ ಪುತ್ರಿಯ ವಿವಾಹವನ್ನು ಸರಳವಾಗಿ ನಡೆಸಿದ್ದು, ಶನಿವಾರ ನಡೆಯಬೇಕಿದ್ದ ಔತಣ ರದ್ದುಮಾಡಿದ್ದಾರೆ.

ಪ್ರತ್ಯೇಕತಾವಾದಿಗಳ ಭದ್ರತೆ ಕಟ್?

ಜಮ್ಮು-ಕಾಶ್ಮೀರದಲ್ಲಿರುವ ಕೆಲವು ಮುಖಂಡರಿಗೆ ಪಾಕಿಸ್ತಾನದ ಐಎಸ್​ಐ ಜತೆಗೆ ನೇರ ಸಂಪರ್ಕವಿದೆ. ಉಗ್ರ ಸಂಘಟನೆಗಳಿಗೂ ಅವರು ನೆರವಾಗುತ್ತಿದ್ದಾರೆ. ಇಂಥವರಿಗೆ ನೀಡಲಾದ ರಾಜ್ಯ ಸರ್ಕಾರದ ಭದ್ರತೆಯನ್ನು ಹಿಂಪಡೆಯುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ದಾಳಿ ಹಿನ್ನೆಲೆ ಕಣಿವೆ ರಾಜ್ಯದಲ್ಲಿ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ ಪರಿಶೀಲನಾ ಸಭೆ ನಡೆಸಿದರು. ಸೇನೆ ಮತ್ತು ಭದ್ರತಾ ಪಡೆಗಳು ಇನ್ಮುಂದೆ ಹೆದ್ದಾರಿಯಲ್ಲಿ ಸಂಚರಿಸುವಾಗ ನಾಗರಿಕ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.

ಶವಪತ್ತೆಗೆ ಹರಸಾಹಸ

ಸ್ಪೋಟದ ತೀವ್ರತೆಗೆ ಯೋಧರ ದೇಹಗಳು ಚೂರುಚೂರಾದ್ದರಿಂದ ಶವಪತ್ತೆಗೆ ಸಿಆರ್​ಪಿಎಫ್ ಹರಸಾಹಸ ಪಡಬೇಕಾಯಿತು. ಓರ್ವ ಯೋಧನ ಕೈ ಬೆರಳಲ್ಲಿದ್ದ ನಿಶ್ಚಿತಾರ್ಥದ ಉಂಗುರ ನೋಡಿ ಗುರುತು ಹಚ್ಚಲಾಗಿದೆ. ರೋಪಡ್ ಬಳಿಯ ರೋಲಿ ಗ್ರಾಮದವರಾದ 28 ವರ್ಷದ ಕುಲವಿಂದರ್ ಸಿಂಗ್ ನಿಶ್ಚಿತಾರ್ಥ 2018ರ ನವೆಂಬರ್​ನಲ್ಲಿ ನಡೆದಿತ್ತು. ಕೆಲ ತಿಂಗಳ ಬಳಿಕ ಮದುವೆ ನಡೆಯುವುದಿತ್ತು. ಕುಟುಂಬದ ಸದಸ್ಯರು ಮದುವೆ ತಯಾರಿಯಲ್ಲಿ ತೊಡಗಿಕೊಂಡಿದ್ದರು.

ಸರ್ಕಾರಕ್ಕೆ ವಿಪಕ್ಷಗಳ ಬೆಂಬಲ

ಮುಂದಿನ ಕೆಲವು ದಿನ ಸರ್ಕಾರದ ವಿರುದ್ಧ ಕಾಂಗ್ರೆಸ್ ಯಾವುದೇ ರೀತಿಯ ಆರೋಪಗಳನ್ನು ಮಾಡುವುದಿಲ್ಲ. ಬದಲಿಗೆ ಪುಲ್ವಾಮ ದಾಳಿಗೆ ಪ್ರತಿಕ್ರಮ ಜರುಗಿಸಲು ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಲಿದ್ದೇವೆ. ಈ ದಾಳಿ ದೇಶದ ಆತ್ಮದ ಮೇಲೆ ನಡೆದ ದಾಳಿಯಾಗಿದೆ. ದೇಶ ಎದುರಿಸುತ್ತಿರುವ ಇಂಥ ಕಷ್ಟದ ಸಮಯದಲ್ಲಿ ಯೋಧರು ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ರಾಹುಲ್​ಗೆ ಸಾಥ್ ನೀಡಿ, ಸರ್ಕಾರಕ್ಕೆ ಬೆಂಬಲ ಸೂಚಿಸಿದರು.

ಪಾಕ್ ರಾಯಭಾರಿಗೆ ತರಾಟೆ

ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಸೊಹೇಲ್ ಮಹಮೂದ್​ರನ್ನು ಕೇಂದ್ರ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ. ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಈ ಕೂಡಲೇ ಪಾಕಿಸ್ತಾನ ಕ್ರಮ ತೆಗೆದುಕೊಳ್ಳಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಆಗ್ರಹಿಸಿದ್ದಾರೆ. ದಾಳಿ ಕುರಿತ ಚರ್ಚೆಗಾಗಿ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಅಜಯ್ ಬಿಸಾರಿಯಾಗೆ ದೆಹಲಿಗೆ ಬರುವಂತೆ ಸರ್ಕಾರ ಸೂಚಿಸಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಖಾಸಗಿ ಕಾರ್ಯದರ್ಶಿಯಾಗಿ ಅಜಯ್ ಸೇವೆ ಸಲ್ಲಿಸಿದ್ದರು.

25 ರೂ. ಲಕ್ಷ ಪರಿಹಾರ, ಉದ್ಯೋಗ

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಉತ್ತರಪ್ರದೇಶದ 12 ಯೋಧರಿಗೆ ತಲಾ 25 ಲಕ್ಷ ರೂ. ಪರಿಹಾರವನ್ನು ಸಿಎಂ ಯೋಗಿ ಆದಿತ್ಯನಾಥ ಘೋಷಿಸಿದ್ದಾರೆ. ಜತೆಗೆ ಯೋಧರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಹುತಾತ್ಮ ಯೋಧರ ಮೂಲ ಗ್ರಾಮಗಳಿಗೆ ಸಂರ್ಪಸುವ ರಸ್ತೆಗಳಿಗೆ ಅವರ ಹೆಸರನ್ನೇ ನಾಮಕರಣ ಮಾಡುವುದಾಗಿಯೂ ಸಿಎಂ ಯೋಗಿ ಘೋಷಣೆ ಮಾಡಿದ್ದಾರೆ.

ಸರ್ವಪಕ್ಷ ಸಭೆ ಇಂದು

ಸಿಆರ್​ಪಿಎಫ್ ಮೇಲೆ ಉಗ್ರ ದಾಳಿ ಹಿನ್ನೆಲೆಯಲ್ಲಿ ಶನಿವಾರ 11ಕ್ಕೆ ಸಂಸತ್ತಿನ ಗ್ರಂಥಾಲಯದಲ್ಲಿ ಸರ್ವಪಕ್ಷಗಳ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರೆ. ಕಾಶ್ಮೀರದಿಂದ ಹಿಂದಿರುಗುವ ಗೃಹ ಸಚಿವ ರಾಜನಾಥ್ ಸಿಂಗ್ ಸಭೆಯಲ್ಲಿ ಪರಿಸ್ಥಿತಿ ಕುರಿತು ವಿಪಕ್ಷ ನಾಯಕರಿಗೆ ವಿವರಿಸಲಿದ್ದಾರೆ. ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಗಳ ವಿರುದ್ಧ ಮುಂದಿನ ಕ್ರಮದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ಪಾಕ್ ವಿರುದ್ಧ ಪಂಚಕ್ರಮ?

ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಜನಾಗ್ರಹ ಹೆಚ್ಚುತ್ತಿದೆಯಾದರೂ, ನೇರ ಯುದ್ಧಕ್ಕೆ ಹೋಗದೆ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಕಟ್ಟಿಹಾಕಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ, ಭಾರತದ ಮುಂದಿರುವ ಇಂಥ ಸಾಧ್ಯತೆಗಳ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.

  1. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಲಷ್ಕರ್-ಎ-ತೊಯ್ಬಾ, ಜೈಷ್ ಎ ಮೊಹಮ್ಮದ್, ತಹರಿಕ್-ಎ-ತಾಲಿಬಾನ್ ಆಫ್ ಪಾಕಿಸ್ತಾನ ಮತ್ತು ಹಕ್ಕಾನಿ ಜಾಲಗಳ ಮೇಲೆ ಎರಡನೇ ಸರ್ಜಿಕಲ್ ದಾಳಿ ನಡೆಸಬಹುದು.
  2. ಅಮೆರಿಕ ಪಾಕಿಸ್ತಾನಕ್ಕೆ ನುಗ್ಗಿ ಒಸಾಮಾ ಬಿನ್ ಲಾಡೆನ್​ನನ್ನು ಕೊಂದು ಹಾಕಿದಂತೆ, ಭಾರತೀಯ ಸೇನೆ ಪಾಕ್ ಪ್ರವೇಶಿಸಿ ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್​ನನ್ನು ಎನ್​ಕೌಂಟರ್ ಮಾಡಬಹುದು.
  3. ಹಲವು ದೇಶಗಳು ಈಗಾಗಲೇ ಭಯೋತ್ಪಾದನಾ ದಾಳಿಯನ್ನು ಖಂಡಿಸಿದ್ದು, ಈ ದೇಶಗಳ ಮೂಲಕವೇ ಪಾಕಿಸ್ತಾನದ ಮೇಲೆ ಒತ್ತಡ ಹೇರುವುದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿತ್ತೀಯ ನೆರವನ್ನು ಕಡಿತಗೊಳಿಸಿ ಪಾಕ್ ಮೇಲೆ ಒತ್ತಡ ತಂದಿರುವಂತೆಯೇ ಇತರೆ ದೇಶಗಳಿಗೂ ಇದೇ ಮಾದರಿಯ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮನವೊಲಿಸಬಹುದು. ಮುಖ್ಯವಾಗಿ, ಪಿ-5 ಅಂದರೆ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ರಷ್ಯಾದ ಹಿರಿಯ ಅಧಿಕಾರಿಗಳನ್ನು ಭಾರತದ ವಿದೇಶಾಂಗ ಅಧಿಕಾರಿಗಳು ಭೇಟಿ ಮಾಡಿ ಪಾಕ್ ವಿರುದ್ಧ ಒತ್ತಡ ಹೇರಬಹುದು.
  4. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಏಕಾಂಗಿಯಾಗಿಸಲು ಭಾರತ ಪ್ರಯತ್ನಿಸುತ್ತಲೇ ಇದ್ದು, ಆ ಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸುವುದು. ಭಾರತ 1971ರಲ್ಲಿ ಪೂರ್ವ ಪಾಕಿಸ್ತಾನಕ್ಕೆ ಬೆಂಬಲ ನೀಡಿ, ಬಾಂಗ್ಲಾದೇಶ ಉದಯಕ್ಕೆ ಕಾರಣವಾಗಿತ್ತು. ಅದೇ ರೀತಿ ಪ್ರಸ್ತುತ, ಗಿಲ್ಗಿಟ್, ಬಲುಚಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಮುಂದಿಟ್ಟಿರುವ ಸ್ವಾತಂತ್ರ್ಯದ ಬೇಡಿಕೆಗೆ ಭಾರತ ಬಹಿರಂಗವಾಗಿ ಬೆಂಬಲ ಸೂಚಿಸುವ ಮೂಲಕ ಪಾಕ್​ನ್ನು ಭಾರಿ ಪೇಚಿಗೆ ಸಿಲುಕಿಸಬಹುದು. ಅಂತೆಯೇ, ಕಾಶ್ಮೀರದಲ್ಲಿ ಭಯೋತ್ಪಾದಕರ ಸಮರ್ಥಕರ ವಿರುದ್ಧವೂ ಕಠಿಣ ಕ್ರಮಕ್ಕೆ ಮುಂದಾಗುವುದು.
  5. ಪಾಕಿಸ್ತಾನವನ್ನು ಪರಮಾಪ್ತ ರಾಷ್ಟ್ರಗಳ ಪಟ್ಟಿಯಿಂದ ಹೊರಗಿಟ್ಟಿರುವಂತೆಯೇ, ಸಿಂಧೂ ಜಲ ಒಪ್ಪಂದವನ್ನು ಕೊನೆಗೊಳಿಸುವುದು. ಹೀಗೆ ಮಾಡಿದಲ್ಲಿ ಪಾಕ್ ಕುಡಿಯುವ ನೀರಿಗೂ ಪರದಾಡುವ ಸನ್ನಿವೇಶ ಸೃಷ್ಟಿಯಾಗುತ್ತದೆ.

One Reply to “ಕುದಿಯುತ್ತಿದೆ ರಕ್ತ… ಪ್ರತೀಕಾರ ಖಚಿತ”

  1. ಇಂದು ಜಮ್ಮುವಿನಲ್ಲಿ ನಡೆದ ಭಯಾನಕ ದುರಂತ ಯಾವ ರೀತಿಯ ಮಾನವ ರೋಧನ ? ಮುಂದಿನ ಭಯಾನಕತೆಯೇ? ಅಥವಾ ದೇಶದ ರಾಜಕೀಯ ತತ್ವಗಳಲ್ಲಿ ದುರಂತಕ್ಕೆ ಬಲಿಯಾದ ದೇಶದ ರಕ್ಷಕರು ರಾಜಕೀಯ ನಿರ್ವಹಣೆಕಾರರಲ್ಲಿ ಮುಂದಿನ ದಿನಗಳು ಈ ರೀತಿ ಆಗದಂತೇ ಬೇಡುವ ರಕ್ಷಣೆ ಮತ್ತು ಶಾಂತತೆಯಲ್ಲಿ ನಡೆಯಲಿ ಎಂದು ಗೋಗರೆಯುವ ಪ್ರತಿಧ್ವನಿಯೆ ? ಈ ರೀತಿ ಜಮ್ಮು ಕಶ್ಮೀರ ದಲ್ಲಿ ನಡೆಯಲು ಮೂಲ ಕಾರಣವನ್ನು ಯಾವ ಮಂತ್ರಿ ಯಾದರೂ ತರ್ಕ ಬದ್ಧವಾಗಿ ಯೋಚಿಸಲು ಸಿದ್ಧರಿದ್ದಾರೆಯೇ ? ದೇಶದ ರಕ್ಷಕರ ಬಲಿಗೆ ತಿರುಗಿ ಬಲಿ ತೆಗೆಯಲು ಮಾತ್ರ ಯೋಚಿಸದೇ ಅಲ್ಲಿನ ಅಸ್ಥವ್ಯಸ್ತತೆಯ ಮತ್ತು ಅತಂತ್ರತೆಯ ಬಗ್ಗೆ ಯೋಚಿಸಿ ದಯವಿಟ್ಟು. ಆಗ ಈಗ ಬಲಿದಾನ ಮಾಡಿದ ರಕ್ಷಕರಿಗೆ ಶಾಂತಿ ಮತ್ತು ತೃಪ್ತಿ ಸಿಗಲು ಸಾಧ್ಯ. ನಾವು ನಮ್ಮಲ್ಲಿ ಒಗ್ಗಟ್ಟಾಗಿ ಒಂದು ಶಿಸ್ತಿನಲ್ಲಿ ಇರದೇ ಹೊಡೆದಾಡುತ್ತಿದ್ದರೆ ಇದಕ್ಕೆ ಪಕ್ಕದವರು ಕಾರಣ ಎನ್ನುತ್ತಾ ತಿರುಗಿದರೆ ಅದಕ್ಕೆ ಅರ್ಥವಿಲ್ಲ. ನಮ್ಮ ಸ್ಥಿತಿ ನೋಡಿ ಪಕ್ಕದವರು ಅವಕಾಶಕ್ಕಾಗಿ ಕಾಯುವುದು ಅವರ ಗುಣ. ಅವರ ಗುಣಕ್ಕೆ ಅವಕಾಶ ಮಾಡಿಕೊಡಬಾರದು ಅಷ್ಟೇ ಅದಕ್ಕೆ ಮಿಲಿಟರಿ ಒಂದೇ ಉಪಾಯವಲ್ಲ. ಅಲ್ಲಿನ ಜನರಲ್ಲಿ ಆತ್ಮ ವಿಶ್ವಾಸ , ನಂಬಿಕೆ ಮತ್ತು ಕೂಡಿ ಬಾಳುವ ಜೀವದ ಮನವರಿಕೆ ಮಾಡಿಕೊಡಬೇಕು.
    ನನ್ನದೊಂದು ಪ್ರಶ್ನೆ
    ಜಮ್ಮು ಮತ್ತು ಕಶ್ಮೀರದಲ್ಲಿ ಮಿಲಟರಿ ಆಡಳಿದಕ್ಕೆ ಎಷ್ಟು ಸಾಮರ್ಥ್ಯವಿದೆಯೋ ಅಷ್ಟೇ ಅಲ್ಲಿನ ಸ್ಥಳೀಯ ರಕ್ಷಣಾ ಪಡೆಗಳಿಗೂ ಸಾಮರ್ಥ್ಯ ಇದೆಯೇ ? ಕೆಲವು ಹೊರದೇಶದ ಸಂಘ ಸಂಸ್ಥೆಗಳಿಗೆ ಜಮ್ಮು ಮತ್ತು ಕಾಶ್ಮೀರ ಭಾರತದ ಒಂದು ರಾಜ್ಯ ಅಥವಾ ಭಾಗ ಎಂದು ಘೋಷಣೆ ಮಾಡುವಂತಹ ಸ್ಥಿತಿ ಬಂದಿದೆಯೇ ?

Comments are closed.