ನನ್ನನ್ನು ಹತ್ಯೆ ಮಾಡಲು ಬಯಸುತ್ತಿರುವುದು ಮೋದಿಯವರು, ನನ್ನ ಭದ್ರತಾ ಸಿಬ್ಬಂದಿ ಅಲ್ಲ: ಅರವಿಂದ್​ ಕೇಜ್ರಿವಾಲ್​ ಟ್ವೀಟ್​

ನವದೆಹಲಿ: ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು, ಬಿಜೆಪಿ ನನ್ನ ಜೀವನವನ್ನು ಹಾಳು ಮಾಡಿದೆ. ಇನ್ನು ಒಂದಲ್ಲ ಒಂದು ದಿನ ಕೊಲ್ಲುತ್ತಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದಂತೆ ನನ್ನ ಹತ್ಯೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಅಲ್ಲದೆ ನನ್ನ ವೈಯಕ್ತಿಕ ಭದ್ರತಾ ಸಿಬ್ಬಂದಿ (ಪಿಎಸ್​ಒ) ಎಲ್ಲ ವಿಚಾರಗಳನ್ನೂ ಬಿಜೆಪಿಗೆ ವರದಿ ಮಾಡುತ್ತಿದ್ದಾರೆ. ಒಂದು ದಿನ ಅವರ ಮೂಲಕವೇ ನನ್ನ ಸಾವು ಎಂದಿದ್ದರು.

ಅರವಿಂದ್​ ಕೇಜ್ರಿವಾಲ್​ ಹೇಳಿಕೆಗೆ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದ ವಿಜಯ್​ ಗೋಯೆಲ್​, ನಿಮಗೆ ನಿಮ್ಮ ಪಿಎಸ್​ಒ ಮೇಲೆ ಅಪನಂಬಿಕೆ ಇರುವುದು ಕೇಳಿ ದುಃಖವಾಗುತ್ತಿದೆ. ಈ ಹೇಳಿಕೆ ನೀಡುವ ಮೂಲಕ ದೆಹಲಿ ಪೊಲೀಸರ ಗೌರವಕ್ಕೇ ನೀವು ಧಕ್ಕೆ ತಂದಿದ್ದೀರಿ. ನಿಮಗೆ ನಿಮ್ಮ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಸದ್ಯ ಇರುವವರ ಮೇಲೆ ಅನುಮಾನವಿದ್ದರೆ ಬೇರೆಯವರನ್ನು

ನೇಮಿಸಿಕೊಳ್ಳಬಹುದು. ಈ ವಿಚಾರದಲ್ಲಿ ನನ್ನ ಸಹಾಯವೇನಾದರೂ ಬೇಕಿದ್ದರೆ ಹೇಳಿ. ನೀವು ದೀರ್ಘ ಜೀವನ ನಡೆಸುವಂತಾಗಲಿ ಎಂದಿದ್ದರು.

ಈಗ ಮತ್ತೆ ವಿಜಯ್​ ಟ್ವೀಟ್​ಗೆ ಅರವಿಂದ್​ ಕೇಜ್ರಿವಾಲ್​ ಪ್ರತಿಕ್ರಿಯೆ ನೀಡಿದ್ದಾರೆ. ನನ್ನನ್ನು ಕೊಲ್ಲಲು ಬಯಸುತ್ತಿರುವುದು ಮೋದಿಯವರೇ ಹೊರತು ಪಿಎಸ್​ಒ ಅಲ್ಲ ಎಂದು ಟ್ವೀಟ್​ ಮಾಡಿದ್ದಾರೆ. ಅಂದರೆ ಯಾರನ್ನೇ ಭದ್ರತೆಗೆ ನೇಮಿಸಿಕೊಂಡರೂ ಬಿಜೆಪಿ ತನ್ನನ್ನು ಕೊಲ್ಲುತ್ತದೆ ಎಂದು ಪರೋಕ್ಷವಾಗಿ ಮತ್ತದನ್ನೇ ಪುನರುಚ್ಚರಿಸಿದ್ದಾರೆ.