ಮೋದಿ ರ‍್ಯಾಲಿ ವೇಳೆ ಪೆಂಡಾಲ್​ ಕುಸಿತ: ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಪಿಎಂ

ಮಿಡ್ನಾಪುರ: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ ವೇಳೆ ಪೆಂಡಾಲ್​ ಕುಸಿದು 22 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳನ್ನು ಮೋದಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಮಿಡ್ನಾಪುರ್​ನಲ್ಲಿ ನಡೆಯುತ್ತಿದ್ದ ಕೃಷಿಕ ಕಲ್ಯಾಣ ರ‍್ಯಾಲಿಯಲ್ಲಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದ ಕಾರ್ಯಕ್ರಮದಲ್ಲಿ ಪಾಲಗೊಳ್ಳುವ ಜನ ಮಳೆಯಿಂದ ಒದ್ದೆಯಾಗದಿರಲಿ ಎಂದು ಹಾಕಿದ್ದ ಪೆಂಡಾಲ್​ ಕುಸಿದು ಬಿದ್ದಿತ್ತು. ಘಟನೆ ಸಂಭವಿಸುತ್ತಿದ್ದಂತೆ ಭಾಷಣ ನಿಲ್ಲಿಸಿದ ಮೋದಿ ಗಾಯಗೊಂಡವರನ್ನು ಶೀಘ್ರ ಆಸ್ಪತ್ರೆಗೆ ದಾಖಲಿಸುವಂತೆ ಭದ್ರತಾ ಸಿಬ್ಬಂದಿಗೆ ಆದೇಶಿಸಿದರು.

ಗಾಯಾಳುಗಳನ್ನು ತಕ್ಷಣ ಪ್ರಧಾನಿಯ ವೈದ್ಯರು ಹಾಗೂ ವಿಶೇಷ ಭದ್ರತಾ ಸಿಬ್ಬಂದಿ ಕಾರುಗಳು ಮತ್ತು ಆ್ಯಂಬುಲೆನ್ಸ್​ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಮೋದಿ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಮಾಡಿ ಆರೋಗ್ಯ ವಿಚಾರಿಸಿದರು.

ಮೋದಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಾಯಗೊಂಡ ಮಹಿಳೆಯೊಬ್ಬಳು ಪ್ರಧಾನಿಯ ಆಟೋಗ್ರಾಫ್​ ಕೇಳಿದರು. ಇದಕ್ಕೆ ಒಪ್ಪಿಕೋಂಡ ಪ್ರಧಾನಿ ಮಹಿಳೆಗೆ ಆಟೋಗ್ರಾಫ್​ ನೀಡಿದರು ಎಂದು ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್​ ಮಾಳವೀಯ ಟ್ವೀಟ್​ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)