ಯೋಧರ ನೈತಿಕ ಸ್ಥೈರ್ಯಕ್ಕೆ ಪ್ರತಿಪಕ್ಷಗಳಿಂದ ಧಕ್ಕೆ

ಪಟನಾ: ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಪ್ರತೀಕಾರವಾಗಿ ನಡೆದ ವೈಮಾನಿಕ ದಾಳಿಗೆ ಸಾಕ್ಷ್ಯ ಕೇಳುತ್ತಿರುವ ವಿರೋಧ ಪಕ್ಷಗಳನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ, ‘ಹುತಾತ್ಮ ಯೋಧರ ತ್ಯಾಗ, ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಪ್ರತಿಯೊಂದು ಬಲಿದಾನಕ್ಕೂ ಪ್ರತೀಕಾರ ತೀರಿಸಿಕೊಳ್ಳಲಾಗುವುದು’ ಎಂದು ಪಾಕ್​ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಪಟನಾದ ಗಾಂಧಿ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂಕಲ್ಪ ಯಾತ್ರೆ’ಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸರ್ಜಿಕಲ್ ದಾಳಿ ನಡೆದಾಗಲೂ ವಿರೋಧ ಪಕ್ಷಗಳು ಸಾಕ್ಷ್ಯ ಕೇಳಿದ್ದವು. ಈಗ ಬಾಲಾಕೋಟ್ ದಾಳಿಯ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿವೆ. ಈ ಮೂಲಕ ಸೇನಾ ಪಡೆಯ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತಿವೆ. ಇಂತಹ ಹೇಳಿಕೆಯನ್ನು ನೆರೆಯ ದೇಶ ತನ್ನ ರಕ್ಷಣೆಗೆ ಬಳಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳ ನಾಯಕರನ್ನು ಟೀಕಿಸಿದರು.

‘ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕಬೇಕೆಂದು ಪ್ರಯತ್ನಿಸುತ್ತಿರುವ ನನ್ನ ವಿರುದ್ಧವೇ ಪ್ರತಿಪಕ್ಷಗಳು ಸಂಚು ನಡೆಸಿ ರಾಜಕೀಯವಾಗಿ ಕೊನೆಗಾಣಿಸುವ ಕನಸು ಕಾಣುತ್ತಿವೆ’ ಎಂದು ದೂರಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಚೌಕಿದಾರ್ ಚೋರ್ ಹೈ ಟೀಕೆಗೆ ಪ್ರತಿಕ್ರಿಯಿಸಿದ ಮೋದಿ, ಅವರಿಗೆ ಈ ಚೌಕಿದಾರನಿಂದ ತೊಂದರೆ ಇದೆ. ಆದರೆ, ಚೌಕಿದಾರ ತನ್ನ ವಿರೋಧಿಗಳ ಬಗ್ಗೆ ಎಚ್ಚರದಿಂದ ಇದ್ದಾನೆ ಎಂದು ತಿರುಗೇಟು ನೀಡಿದರು.

ಎಲ್ಲ 40 ಸೀಟು ಎನ್​ಡಿಎ ತೆಕ್ಕೆಗೆ

ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ, ರಾಜ್ಯದ 40 ಲೋಕಸಭಾ ಕ್ಷೇತ್ರಗಳನ್ನೂ ಎನ್​ಡಿಎ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2019ರ ಅಕ್ಟೋಬರ್ 2ರ ಒಳಗೆ ಬಿಹಾರದ ಪ್ರತಿಯೊಂದು ಹಳ್ಳಿಯೂ ಬಯಲುಶೌಚ ಮುಕ್ತವಾಗಲಿದೆ ಎಂದರು. ಲೋಕಜನ ಶಕ್ತಿ ಪಕ್ಷದ ಮುಖ್ಯಸ್ಥ, ರಾಮ್​ಲಾಸ ಪಾಸ್ವಾನ್ ಕೂಡ ರ್ಯಾಲಿಯಲ್ಲಿ ಭಾಗವಹಿಸಿದ್ದರು.