ಅಗಸ್ತಾ ಹಗರಣದ ಮಧ್ಯವರ್ತಿ ಬಾಯ್ಬಿಟ್ಟರೆ ಇನ್ನೂ ಏನೇನು ರಹಸ್ಯಗಳು ಬರುತ್ತವೋ ..?

ಸಮೇರ್​ಪುರ್​ (ರಾಜಸ್ಥಾನ​): ಅಗಸ್ತಾ ವೆಸ್ಟ್​ಲ್ಯಾಂಡ್​ ವಿವಿಐಪಿ ಹೆಲಿಕಾಪ್ಟರ್​ ಖರೀದಿ ಹಗರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಕ್ರಿಶ್ಚಿಯನ್​ ಮಿಶೆಲ್ ನನ್ನು ತನಿಖೆಗಾಗಿ ಭಾರತಕ್ಕೆ ಕರೆತಂದ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ವಿರುದ್ಧದ ಟೀಕೆಗೆ ಬಳಸಿಕೊಂಡು ಮತಬೇಟೆಗೆ ಮುಂದಾಗಿದ್ದಾರೆ.

ರಾಜಸ್ಥಾನದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುಮೇರ್​ಪುರ್ ಎಂಬಲ್ಲಿ ನಡೆಯುತ್ತಿದ್ದ ಪಕ್ಷದ ಸಮಾವೇಶವೊಂದರಲ್ಲಿ ಮಾತನಾಡಿದ ಮೋದಿ, ” ವಿವಿಐಪಿ ಹೆಲಿಕಾಪ್ಟರ್​ ಖರೀದಿ ಹಗರಣ ನಡೆದ್ದದ್ದು ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ. ನಾವು ಅಧಿಕಾರಕ್ಕೆ ಬಂದ ಮೇಲೆ ಹಗರಣದ ತನಿಖೆ ಆರಂಭಿಸಿದ್ದೆವು. ಅದರಂತೆ ಒಬ್ಬ ಆರೋಪಿಯನ್ನು ಹಿಡಿದಿದ್ದೇವೆ. ದುಬೈನಿಂದ ಆತನನ್ನು ಭಾರತಕ್ಕೆ ಕರೆತಂದಿರುವ ಬಗ್ಗೆ ನೀವು ಪತ್ರಿಕೆಗಳಲ್ಲಿ ಓದಿರಬಹುದು. ಆತ ಮಾತನಾಡಲು ಆರಂಭಿಸಿದರೆ ಏನೇನು ಗುಟ್ಟುಗಳು ಹೊರ ಬರುತ್ತವೋ ಏನೋ ಯಾರಿಗೆ ಗೊತ್ತು,” ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಭಾರತೀಯ ಗಣ್ಯ ವ್ಯಕ್ತಿಗಳ ಬಳಕೆಯ ಉದ್ದೇಶಕ್ಕಾಗಿ 3,600 ಕೋಟಿ ರೂ. ಮೊತ್ತದ ಹೆಲಿಕಾಪ್ಟರ್​ಗಳ ಖರೀದಿ ಒಪ್ಪಂದ ಏರ್ಪಡುವಂತೆ ಮಾಡಲು ಬ್ರಿಟಿಷ್​ ಪ್ರಜೆಯೂ ಆಗಿರುವ ಮಿಶೆಲ್ ಇಲ್ಲಿನ ಕೆಲ ರಾಜಕಾರಣಿಗಳಿಗೆ ಮಧ್ಯವರ್ತಿಯಾಗಿ ಹಣ ಸಂದಾಯ ಮಾಡಿದ್ದ ಎಂಬುದು ಆರೋಪ. ಭಾರತದ ತನಿಖಾ ಸಂಸ್ಥೆಗಳು ಸದ್ಯ ಮಿಶೆಲ್ ವಿರುದ್ಧ ತನಿಖೆ ಕೈಗೊಂಡಿವೆ.

ಭಾರತದ ವಶಕ್ಕೆ ಅಗಸ್ತಾ ಆರೋಪಿ