ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಸವಾಲೊಂದನ್ನು ಹಾಕಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ಹಾಗೂ ಆರ್ಥಿಕತೆ ಕುಸಿತಕ್ಕೆ ಸಂಬಂಧಪಟ್ಟಂತೆ ಬಿಜೆಪಿ ವಿರುದ್ಧ ಹೋರಾಟ ರೂಪಿಸಲು ಇಂದು ಕಾಂಗ್ರೆಸ್ ನೇತೃತ್ವದಲ್ಲಿ ಸಭೆ ನಡೆದಿದೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿಯವರು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ, ದೇಶದ ಆರ್ಥಿಕತೆಯ ಬಗ್ಗೆ ಕೇಂದ್ರದ ನೀತಿ ಏನು ಎಂಬುದನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ತಿಳಿಸಲಿ ಎಂದು ಸವಾಲು ಹಾಕಿದರು. ಅಲ್ಲದೆ, ಪ್ರಧಾನಮಂತ್ರಿಯವರಿಗೆ ಇದಕ್ಕೆಲ್ಲ ಧೈರ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ದೇಶದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕುಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಜತೆ ಮಾತನಾಡುವ ಧೈರ್ಯ ತೋರಿಸಬೇಕು. ಕಳೆದ 50 ವರ್ಷಗಳಲ್ಲೇ ಭಾರತದಲ್ಲಿ ಇಷ್ಟು ಪ್ರಮಾನದ ನಿರುದ್ಯೋಗ ಸಮಸ್ಯೆ ತಲೆದೋರಿದ ಬಗ್ಗೆಯೂ ಮಾತನಾಡಬೇಕು. ಹೀಗೆ ಯೂನಿವರ್ಸಿಟಿಗಳಿಗೆ ಮೋದಿಯವರು ಜತೆಗೆ ಪೊಲೀಸರನ್ನಾಗಲೀ, ಸಹಚರರನ್ನಾಗಲೀ ಕರೆತರಬಾರದು ಎಂದು ರಾಹುಲ್ ಗಾಂಧಿ ಚಾಲೆಂಜ್ ಮಾಡಿದರು.
ಅಷ್ಟೇ ಅಲ್ಲದೆ, ಪ್ರಧಾನಿ ಮೋದಿಯವರು ದೇಶದ ಜನರನ್ನು ವಿಭಜಿಸುವ, ಅವರಲ್ಲಿ ಗೊಂದಲ ಮೂಡಿಸುವ ಮೂಲಕ ಇಡೀ ರಾಷ್ಟ್ರಕ್ಕೇ ಅಪಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.(ಏಜೆನ್ಸೀಸ್)