ಖಾದಿ ಉತ್ಸವದಲ್ಲಿ ಜಾಕೆಟ್​ ಖರೀದಿಸಿದ ಮೋದಿ: ರುಪೇ ಕಾರ್ಡ್​ನಿಂದ ಹಣ ಸಂದಾಯ

ಅಹಮಾದಾಬಾದ್​: ಗುಜರಾತ್​ನಲ್ಲಿ ನಡೆಯುತ್ತಿರುವ ಖಾದಿ ಶಾಪಿಂಗ್​ ಫೆಸ್ಟಿವಲ್​ನಲ್ಲಿ ಪ್ರಧಾನಿ ಮೋದಿಯವರು ಖಾದಿ ಜಾಕೆಟ್​ (ಕೋಟು) ಖರೀದಿಸಿ ತಮ್ಮ ರುಪೇ ಕಾರ್ಡ್​ ಮೂಲಕ ಹಣ ನೀಡುತ್ತಿರುವ ವಿಡಿಯೋ, ಫೋಟೋ ವೈರಲ್​ ಆಗಿದೆ.

ಪ್ರಧಾನಿ ಮೋದಿ ಮೂರು ದಿನಗಳ ಗುಜರಾತ್​, ಮಹಾರಾಷ್ಟ್ರ ಪ್ರವಾಸದಲ್ಲಿದ್ದು, ಇಂದು ಗುಜರಾತ್​ನಲ್ಲಿ 9ನೇ ವೈಬ್ರಂಟ್​ ಗುಜರಾತ್​ ಶೃಂಗಸಭೆ ಉದ್ಘಾಟಿಸಲಿದ್ದಾರೆ. ಪ್ರತಿ ವರ್ಷ ನಡೆಯುವ ವೈಬ್ರಂಟ್​ ಗುಜರಾತ್​ ಶೃಂಗಸಭೆಯೊಟ್ಟಿಗೆ ಈ ಶಾಪಿಂಗ್​ ಫೆಸ್ಟಿವಲ್​ ಕೂಡ ನಡೆಯುತ್ತದೆ. ಇದರಲ್ಲಿ ಸ್ಥಳೀಯ ಉದ್ಯಮಿಗಳು ತಮ್ಮ ಸಂಸ್ಥೆಯ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವನ್ನು ನಡೆಸುತ್ತಾರೆ.

ಈ ಶಾಪಿಂಗ್​ ಫೆಸ್ಟಿವಲ್ ಅ​ನ್ನು ಉದ್ಘಾಟಿಸಿ ಮೋದಿಯವರು ನಂತರ ಎಲ್ಲ ಮಳಿಗೆಗಳನ್ನೂ ವೀಕ್ಷಿಸುತ್ತ ನಡೆದರು. ಅಲ್ಲಿಯೇ ಇದ್ದ ಖಾದಿ ಉಡುಪುಗಳ ಅಂಗಡಿ ಎದುರು ನಿಂತು ಇಷ್ಟವಾದ ಜಾಕೆಟ್​ ಒಂದನ್ನು ಖರೀದಿಸಿ ರುಪೇ ಕಾರ್ಡ್​ನಿಂದ ಹಣ ನೀಡಿದರು.

ಇಂದು ಮೋದಿ ವೈಬ್ರಂಟ್​ ಗುಜರಾತ್​ ಶೃಂಗಸಭೆ ಉದ್ಘಾಟನೆ ಮಾಡಿದ ಬಳಿಕ ಸಂಜೆ ಸರ್ದಾರ್​ ವಲ್ಲಭಭಾಯಿ ಪಟೇಲ್​ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಲೋಕಾರ್ಪಣೆ ಮಾಡುವರು.