ದೇಶದ ಅತಿ ಉದ್ದದ ಬೋಗಿಬೀಲ್​ ರೈಲ್ವೆ-ರಸ್ತೆ ಸೇತುವೆ ಲೋಕಾರ್ಪಣೆ ಮಾಡಿದ ಮೋದಿ

ದಿಬ್ರೂಗಢ (ಅಸ್ಸಾಂ): ದೇಶದ ಅತೀ ಉದ್ದದ ಬೋಗಿಬೀಲ್ ಸೇತುವೆಯನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು.

ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವಾಗಿದ್ದು, 2002ರಲ್ಲಿ ಅವರೇ ಈ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರು. ಹಾಗಾಗಿ ಉತ್ತಮ ಆಡಳಿತದ ದಿನವಾದ ಇಂದು ಲೋಕಾರ್ಪಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

4.9 ಕಿ.ಮೀ. ಉದ್ದವಿರುವ ಈ ಸೇತುವೆ ಅಸ್ಸಾಂ-ಅರುಣಾಚಲ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲಿದೆ. ಅಸ್ಸಾಂನ ದಿಬ್ರೂಗಢ ಜಿಲ್ಲೆ ಬೋಗಿಬೀಲ್ ಮತ್ತು ಅರುಣಾಚಲ ಪ್ರದೇಶದ ಧೇಮಾಜಿ ಜಿಲ್ಲೆಯ ಸಿಲಾಪತ್ತರ್ ಮಧ್ಯೆ ಹರಿಯುವ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು, ಸಂಚಾರ ಅವಧಿ ಕನಿಷ್ಠ 10 ತಾಸು ಇಳಿಕೆಯಾಗಿದೆ. ಸೇತುವೆ ನಿರ್ಮಾಣಕ್ಕೆ ಒಟ್ಟು 5,920 ಕೋಟಿ ರೂ. ತಗುಲಿದ್ದು, ಎರಡು ಮಜಲಿನ ಸೇತುವೆಯ ಮೇಲುಭಾಗದಲ್ಲಿ ತ್ರಿಪಥದ ರಸ್ತೆ ಮಾರ್ಗವಿದ್ದರೆ, ಕೆಳಭಾಗದಲ್ಲಿ ದ್ವಿಪಥದ ರೈಲು ಹಳಿ ಇದೆ.

1997 ಜನವರಿ 22ರಂದು ಅಂದಿನ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ಸೇತುವೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. (ಏಜೆನ್ಸೀಸ್)