ಮೋದಿಗೆ ಮತ್ತೆ ದೀದಿ ಸೆಡ್ಡು: ಚಂಡಮಾರುತ ಹಾನಿ ಕುರಿತು ಪ್ರಧಾನಿ ಜತೆಗಿನ ಪರಿಶೀಲನಾ ಸಭೆಗೆ ನಕಾರ

ನವದೆಹಲಿ: ಫೊನಿ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿರುವ ಪಶ್ಚಿಮ ಬಂಗಾಳದ ಸಂತ್ರಸ್ತರು ಪರಿಹಾರಕ್ಕೆ ಎದುರು ನೋಡುತ್ತಿದ್ದರೆ ಮಮತಾ ಬ್ಯಾನರ್ಜಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಜತೆಗಿನ ಪರಿಶೀಲನಾ ಸಭೆಯನ್ನು ಬಹಿಷ್ಕರಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಮತ್ತು ಮಮತಾ ಬ್ಯಾನರ್ಜಿ ನಡುವಿನ ಕಿತ್ತಾಟ ಮುಂದುವರಿದಿದೆ.

ಒಡಿಶಾದಲ್ಲಿ ಫೊನಿಯಿಂದ ಉಂಟಾಗಿರುವ ಹಾನಿ ಬಗ್ಗೆ ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಿದ ಮೋದಿ ನಂತರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದರು. ಫೊನಿಯಿಂದ ಉಂಟಾದ ಹಾನಿ ಕುರಿತು ಪರಿಶೀಲನಾ ಸಭೆ ನಡೆಸಲು ನಿರ್ಧರಿಸಿದ್ದರು. ಆದರೆ ಸಭೆಗೆ ಹಾಜರಾಗಲು ಮಮತಾ ಬ್ಯಾನರ್ಜಿ ಸರ್ಕಾರ ನಿರಾಕರಿಸಿದೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ತಿಳಿಸಿರುವ ಪಶ್ಚಿಮ ಬಂಗಾಳ ಸರ್ಕಾರ, ರಾಜ್ಯದ ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಸಭೆ ನಡೆಸಲು ಸಾಧ್ಯವಿಲ್ಲ ಎಂದಿದೆ.

ಫೊನಿ ಚಂಡಮಾರುತದ ಕುರಿತಂತೆ ಪ್ರಧಾನಿ ಮೋದಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್​ಗೆ ಕರೆ ಮಾಡಿ ಮಾತನಾಡಿದ್ದಾರೆ. ಆದರೆ ತಮಗೆ ಕರೆ ಮಾಡಿಲ್ಲ ಎಂದು ಕೆಲ ದಿನಗಳ ಹಿಂದೆ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಪ್ರಧಾನಿ ಕಾರ್ಯಾಲಯ ಆರೋಪವನ್ನು ತಳ್ಳಿಹಾಕಿತ್ತು. ಮಮತಾ ಬ್ಯಾನರ್ಜಿಯನ್ನು ಸಂರ್ಪಸಲು ಎರಡು ಬಾರಿ ಕರೆ ಮಾಡಿದ್ದೇವೆ. ಮೊದಲು ಸಿಎಂ ಪ್ರವಾಸದಲ್ಲಿದ್ದಾರೆ ಎಂದು ಅಧಿಕಾರಿಗಳು ಉತ್ತರಿಸಿದ್ದರು. ಮತ್ತೊಮ್ಮೆ ಮಾಡಿದ ಕರೆಗೆ ಉತ್ತರಿಸಲೇ ಇಲ್ಲ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಒಡಿಶಾ ಸಿಎಂ ಕಾರ್ಯಕ್ಕೆ ಶ್ಲಾಘನೆ

ಫೊನಿ ಚಂಡಮಾರುತದಿಂದ ಹಾನಿಗೊಳಗಾದ ಒಡಿಶಾ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿ ಹಾನಿ ಬಗ್ಗೆ ಮಾಹಿತಿ ಪಡೆದರು. ಸಿಎಂ ನವೀನ್ ಪಟ್ನಾಯಕ್, ರಾಜ್ಯಪಾಲ ಗಣೇಶಿ ಲಾಲ್ ಮತ್ತು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಜತೆಗಿದ್ದರು. ನವೀನ್ ಪಟ್ನಾಯ್್ಕ ಸರ್ಕಾರ ಕೈಗೊಂಡಿದ್ದ ಮುಂಜಾಗೃತಾ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಇದ್ದ ನಿರಂತರ ಸಂಪರ್ಕ ಹಾಗೂ ಅಧಿಕಾರಿಗಳು ಕೈಗೊಂಡ ತುರ್ತು ಕ್ರಮಗಳಿಂದ ಭಾರಿ ನಷ್ಟ ತಪ್ಪಿದೆ. ಚುನಾವಣಾ ಬಿಸಿಯ ಮಧ್ಯೆಯೂ ಸಿಎಂ ಪಟ್ನಾಯ್್ಕ ಉತ್ತಮ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೋದಿ ಶ್ಲಾಘಿಸಿದರು. ಸುಮಾರು 1 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದರಿಂದ ಸಾವು-ನೋವುಗಳ ಪ್ರಮಾಣ ಹೆಚ್ಚಾಗಲಿಲ್ಲ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.

ಎಕ್ಸ್​ಪೈರಿ ಪ್ರಧಾನಮಂತ್ರಿ

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಸಿಎಂ ಮಮತಾ, ಎಕ್ಸ್​ಪೈರಿ (ಅವಧಿ ಮುಗಿದಿರುವ) ಪ್ರಧಾನಿ ಜತೆ ವೇದಿಕೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಪ್ರಸ್ತುತ ಲೋಕಸಭೆ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಮೋದಿ ಅಧಿಕಾರದಿಂದ ಇಳಿಯುತ್ತಾರೆ. ಅವರು ಈಗ ಚುನಾವಣಾ ಪ್ರಚಾರಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದಾರೆ. ಅವರ ಕರುಣೆ ನಮಗೆ ಬೇಕಾಗಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಈ ಹಿಂದೆ ಬಂಗಾಳದಲ್ಲಿ ಪ್ರವಾಹ ಉಂಟಾಗಿದ್ದಾಗ ಮೋದಿ ಎಲ್ಲಿ ಹೋಗಿದ್ದರು. ನಾನು ಎರಡು ಬಾರಿ ಅವರನ್ನು ಸಂರ್ಪಸಿದರೂ ಒಂದು ಪೈಸೆ ಪರಿಹಾರ ನೀಡಲಿಲ್ಲ. ನಾನು ಚುನಾವಣಾ ಪ್ರಚಾರದಲ್ಲಿ ನಿರತವಾಗಿದ್ದ ಕಾರಣ ಅವರ ಕರೆ ಸ್ವೀಕರಿಸಲು ಸಾಧ್ಯವಾಗಿಲ್ಲ’ ಎಂದು ಸಿಎಂ ಮಮತಾ ಹೇಳಿದ್ದಾರೆ.

ಸ್ಪೀಡ್ ಬ್ರೇಕರ್ ಮಮತಾ

ಚಂಡಮಾರುತದ ವಿಷಯದಲ್ಲಿ ಮಮತಾ ಬ್ಯಾನರ್ಜಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ಪಶ್ಚಿಮ ಬಂಗಾಳದ ತಮ್ಲುಕ್​ನಲ್ಲಿ ಮಾತನಾಡಿದ ಅವರು, ‘ಚಂಡಮಾರುತದ ಪರಿಸ್ಥಿತಿ ಬಗ್ಗೆ ತಿಳಿಯಲು ನಾನು ಮಮತಾ ಸಿಎಂ ಬ್ಯಾನರ್ಜಿಗೆ ಕರೆ ಮಾಡಿದ್ದೆ. ಆದರೆ ಅವರು ರಾಜಕಾರಣ ಮಾಡುವುದರಲ್ಲೇ ಹೆಚ್ಚು ಬ್ಯುಸಿಯಾಗಿದ್ದರು. ಬಳಿಕ ಅವರೆ ಕರೆ ಮಾಡಬಹುದೆಂದು ನಾನು ಕಾದೆ. ಆದರೆ ಅವರು ಕರೆ ಮಾಡಲಿಲ್ಲ. ಸಂಭವಿಸಿರುವ ಹಾನಿ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಸಭೆ ನಡೆಸಲು ಪ್ರಯತ್ನಿಸಿದರೆ ದೀದಿ ಸರ್ಕಾರ ಅದಕ್ಕೂ ಅನುಮತಿ ನೀಡಿಲ್ಲ. ರಾಜ್ಯದ ಅಭಿವೃದ್ಧಿಗೆ ಸ್ಪೀಡ್ ಬ್ರೇಕರ್ ಆಗಿರುವ ಮಮತಾ ಬ್ಯಾನರ್ಜಿ, ಸಂತ್ರಸ್ತರ ರಕ್ಷಣೆ ಬದಲು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.