ಮೈತ್ರಿ ಪಕ್ಷಗಳ ವಿರುದ್ಧ ಮೋದಿ ರಣಕಹಳೆ: ಅಂಬರೀಷ್​ ಹೆಸರು ಪ್ರಸ್ತಾಪಿಸಿ ಸುಮಲತಾರನ್ನು ಬೆಂಬಲಿಸಲು ಕರೆ

ಮೈಸೂರು: ಮತ್ತೊಮ್ಮೆ ಕೇಂದ್ರದ ಗದ್ದುಗೆ ಏರಲು ಬಿಜೆಪಿ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಚುನಾವಣಾ ಪ್ರಚಾರ ಅಂಗವಾಗಿ ಇಂದು ಸಾಂಸ್ಕೃತಿಕ ನಗರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ರಣಕಹಳೆ ಊದಿದರು.

ಕನ್ನಡದಲ್ಲಿ ಭಾಷಣ ಆರಂಭ
ಮಂಗಳವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್​ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿದ ಮಾತನಾಡಿದ ಮೋದಿ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಯ ನಾಗರಿಕರಿಗೆ ಚೌಕಿದಾರ್​ ಮೋದಿಯ ನಮಸ್ಕಾರಗಳು ಎಂದು ಹೇಳುವ ಮೂಲಕ ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಜನತೆಗೆ ನಾನು ಆಭಾರಿಯಾಗಿದ್ದೇನೆ
ಮೈಸೂರಿಗೆ ಈ ಹಿಂದೆಯೂ ನಾನು ಬಂದಿದ್ದೆ. ಆದರೆ, ಇಂತಹ ದೃಶ್ಯವನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ನನಗೆ ಆಶೀರ್ವಾದ ನೀಡಲು ಇಲ್ಲಿಗೆ ಆಗಮಿಸಿರುವ ಜನತೆಗೆ ನಾನು ಆಭಾರಿಯಾಗಿದ್ದೇನೆ. ಚಾಮುಂಡೇಶ್ವರಿ ಸನ್ನಿಧಿಯಲ್ಲಿರುವ ಈ ಭಾಗದ ಮಠ-ಮಂದಿರಗಳಿಗೆ ನನ್ನ ನಮನ. ಸರ್.ಎಂ.ವಿಶ್ವೇಶ್ವರಯ್ಯ ಅವರಿಗೂ ನನ್ನ ನಮನ ಎಂದು ಹೇಳಿದರು.

2030ಕ್ಕೆ ಆರ್ಥಿಕತೆಯಲ್ಲಿ ದೇಶ ವಿಶ್ವದಲ್ಲೇ 3ನೇ ಸ್ಥಾನಕ್ಕೇರಲಿದೆ
ಮೈಸೂರು-ಬೆಂಗಳೂರು ಹೈವೇ ಸಂಪೂರ್ಣವಾದ ಬಳಿಕ ಮೈಸೂರು ಜಿಲ್ಲೆ ಮತ್ತಷ್ಟು ವೇಗವಾಗಿ ಪ್ರಗತಿ ಹೊಂದುತ್ತಿದೆ. ಮೈಸೂರಿನಲ್ಲಿ ಪ್ರಥಮ ಬಾರಿಗೆ ಅಂಚೆಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವೆ ಒದಗಿಸಲಾಗಿದೆ. ಮೈಸೂರು ವಿಮಾನ ನಿಲ್ದಾಣಕ್ಕೆ ಉಡಾನ್ ಯೋಜನೆಯ ಕೊಡುಗೆ ನೀಡಲಾಗಿದೆ. ಭಾರತದ ಸುರಕ್ಷತೆಗಾಗಿ ನಾವು ಸೇನೆಯನ್ನು ಮತ್ತಷ್ಟು ಸದೃಢಗೊಳಿಸಿದ್ದೇವೆ. 2030ಕ್ಕೆ ಆರ್ಥಿಕತೆಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನಕ್ಕೇರಲಿದೆ. ಮುಂದಿನ 5 ವರ್ಷಗಳಲ್ಲಿ 50 ನಗರಗಳಲ್ಲಿ ಮೆಟ್ರೋ ಸಂಚಾರ ವ್ಯವಸ್ಥೆ ನಿರ್ಮಾಣವಾಗಲಿದೆ. ನವ ಉದ್ದಿಮೆದಾರರಿಗೆ 50ಲಕ್ಷ ರೂ. ವರೆಗೆ ಯಾವುದೇ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

ಮೋದಿ ಓಡಿಸಿ ಎಂಬುದೇ ಪಕ್ಷವೊಂದರ ಅಜೆಂಡಾ
ವಿರೋಧಿಗಳ ಬಾಯಲ್ಲಿ ಬರೋದು ಒಂದೇ ಮಾತು ಅದು ‘ಮೋದಿ ಓಡಿಸಿ’ ಅದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ. ಮೋದಿ ಓಡಿಸಿ ಎಂಬುದೇ ಪಕ್ಷವೊಂದರ ಅಜೆಂಡಾ ಆಗಿದೆ. ಹೀಗಿರುವಾಗ ಜನ ಕಲ್ಯಾಣದ ಬಗ್ಗೆ ಆ ಪಕ್ಷ ಯೋಚಿಸಲು ಸಾಧ್ಯವೇ? ಸಬ್​​ಕಾ ಸಾಥ್​​ ಸಬ್​ಕಾ ವಿಕಾಸ್ ನಮ್ಮ ಮಂತ್ರವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಯೆಂಬ ‘ಪಂಚಿಂಗ್ ಬ್ಯಾಗ್’
ಕರ್ನಾಟಕ ಕಾಂಗ್ರೆಸ್ ರೈತರಿಗೆ ಮೋಸ ಮಾಡಿರುವುದು ಇಡೀ ದೇಶಕ್ಕೆ ಗೊತ್ತಿದೆ. ಇಲ್ಲಿನ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಯನ್ನು ‘ಪಂಚಿಂಗ್ ಬ್ಯಾಗ್’ ಮಾಡಿಕೊಂಡಿದ್ದಾರೆ. ಇಲ್ಲಿನ ಕಾಂಗ್ರೆಸ್-ಜೆಡಿಎಸ್ ರೈತರ ಅಭ್ಯುದಯ ಬಯಸಲ್ಲ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ, ಕೆಲವು ರಾಜಕೀಯ ತಂತ್ರಗಳಿಂದ ಕೇರಳ ಆಯ್ಕೆ ಮಾಡಿಕೊಂಡರು. ಇದಕ್ಕೆ ಕಾರಣ ಜೆಡಿಎಸ್ ವರಿಷ್ಠ ದೇವೇಗೌಡರು ಎಂದು ಕಿಚಾಯಿಸಿದರು.

ಕಾಂಗ್ರೆಸ್ ಓಡಿಸಿ ಬಡತನ ತನ್ನಷ್ಟಕ್ಕೆ ತಾನೇ ಓಡುತ್ತದೆ
ಕಾಂಗ್ರೆಸ್‌ನವರು ಗರೀಬಿ ಹಠವೋ ಗರೀಬಿ ಹಠವೋ ಅಂತಾರೆ. ಕಾಂಗ್ರೆಸ್ ಓಡಿಸಿ ಬಡತನ ತನ್ನಷ್ಟಕ್ಕೆ ತಾನೇ ಓಡುತ್ತದೆ. ಕಾಂಗ್ರೆಸ್ ಅಧ್ಯಕ್ಷ ನಾಮಧಾರ್ ಅವರ ರಾಜಕೀಯ ಭವಿಷ್ಯವೇ ಅತಂತ್ರ ಸ್ಥಿತಿಗೆ ಬಂದಿದೆ. ಇನ್ನು ಅವರಿಂದ ದೇಶದ ಉಜ್ವಲ ಭವಿಷ್ಯ ನಿರೀಕ್ಷಿಸಲು ಸಾಧ್ಯವೇ?, ಯೋಧರ ಪರಾಕ್ರಮದ ಬಗ್ಗೆ ಸಾಕ್ಷಿ ಕೇಳ್ತೀರಿ, ನಮ್ಮ ಸೇನೆಯ ಶೌರ್ಯ, ಪರಾಕ್ರಮದ ಬಗ್ಗೆ ನಂಬಿಕೆ ಇಲ್ವೇ? ಕೇರಳದಲ್ಲಿ ಶಬರಿಮಲೆ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡರು. ಸುಪ್ರೀಂಕೋರ್ಟ್ ಮುಂದೆ ಎಲ್ಲದರ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ದೇಶಕ್ಕೆ 2G ಹಗರಣ ನೀಡಿತು. ಆದರೆ, ನಾವು ದೇಶದಲ್ಲಿ ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ನೀಡಿದೆವು. ವಿಶ್ವದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್​ ಡಾಟಾ ನೀಡಿದೆವು ಎಂದು ತಿಳಿಸಿದರು.

ಕಾಂಗ್ರೆಸ್ ಡಕೋಟ ಪ್ರಣಾಳಿಕೆ ಬಿಡುಗಡೆ ಮಾಡಿದೆ
ಕಾಂಗ್ರೆಸ್ ಡಕೋಟ ಪ್ರಣಾಳಿಕೆ ಬಿಡುಗಡೆ ಮಾಡಿದೆ. ನಮ್ಮದು ಮತ್ತು ಅವರದ್ದು ಎರಡೂ ಪ್ರಣಾಳಿಕೆ ನೋಡಿದರೆ ಗೊತ್ತಾಗುತ್ತದೆ. ನಾನು ನಿಮ್ಮ ಚೌಕಿದಾರ್ ಎಲ್ಲಿಯವರೆಗೂ ಇರ್ತಿನೋ, ಅಲ್ಲಿಯವರೆಗೂ ತೆರಿಗೆ ಹಣ ಸುರಕ್ಷತೆಗೊಳಿಸುತ್ತೇನೆ. ನಿನ್ನೆ ಬಿಜೆಪಿಯ ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದೇವೆ. ಅದನ್ನೆಲ್ಲ ನಾವು ಪರಿಪೂರ್ಣ ಮಾಡಲಿದ್ದೇವೆ. ಮೂರು ವರ್ಷದಲ್ಲಿ ದೇಶವನ್ನು ಬಲಿಷ್ಠ ರಾಷ್ಟ್ರ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

ಸುಮಲತಾ ಅವರನ್ನು ಬೆಂಬಲಿಸಿ
ಸಮಾವೇಶದಲ್ಲಿ ಅಂಬರೀಷ್ ಅವರ ಹೆಸರನ್ನು ಪ್ರಸ್ತಾಪಿಸಿದ ಮೋದಿ, ಅಂಬರೀಷ್ ಕನ್ನಡಕ್ಕೆ ನೀಡಿರುವ ಕೊಡುಗೆ ನಿಮಗೆ ತಿಳಿದಿದೆಯಲ್ಲವೇ? ನಾವು ಅವರ ಪ್ರಯತ್ನಕ್ಕೆ ಮತ್ತಷ್ಟು ಶಕ್ತಿ ತುಂಬೋಣ. ಹೀಗಾಗಿ ನಮ್ಮ ಜತೆಗಾರರಾಗಿರುವ ಸುಮಲತಾಗೆ ಬೆಂಬಲ ನೀಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಮೋದಿಗೆ ಮೈಸೂರು ಗೌರವ
ಸಮಾವೇಶದ ವೇದಿಕೆ ಆಗಮಿಸಿದ ಮೋದಿ ಅವರಿಗೆ ಭಾಷಣಕ್ಕೂ ಮುನ್ನ ಚಾಮುಂಡಿ ವಿಗ್ರಹ, ಏಲಕ್ಕಿ ಹಾರ ಹಾಗೂ ಮೈಸೂರು ಪೇಟ ತೊಡಿಸಿ ಬಿಜೆಪಿ ನಾಯಕರು ಗೌರವ ಸೂಚಿಸಿದರು.

Leave a Reply

Your email address will not be published. Required fields are marked *