Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಭಕ್ತಿ-ಶಕ್ತಿ ಹೆಚ್ಚಿಸುವ ನವರಾತ್ರಿ ಉಪವಾಸಕ್ಕೆ ನಮೋ!

Friday, 12.10.2018, 3:04 AM       No Comments

ಪ್ರಧಾನಮಂತ್ರಿ ನರೇಂದ್ರ ಮೋದಿ 68ರ ವಯಸ್ಸಲ್ಲೂ ದಣಿವರಿಯದೆ ದಿನಕ್ಕೆ 18 ಗಂಟೆಗೂ ಹೆಚ್ಚು ಕಾಲ ದುಡಿಯುತ್ತಾರಲ್ಲ, ಈ ಉತ್ಸಾಹ ಮತ್ತು ಎನರ್ಜಿ ಹಿಂದಿನ ಗುಟ್ಟೇನು ಎಂಬ ಬಗ್ಗೆ ಆಗಾಗ ಕುತೂಹಲದ ಚರ್ಚೆ ಗರಿಗೆದರುತ್ತಲೇ ಇರುತ್ತದೆ. ಸೂಕ್ತ ಸಾಧನೆ (ಯೋಗ, ಪ್ರಾಣಾಯಾಮ), ಆಧ್ಯಾತ್ಮಿಕ ಮನೋಭಾವ, ಸಾತ್ವಿಕ ಆಚರಣೆಯಿಂದ ಇಂಥ ಶಕ್ತಿಗಳು ನಮ್ಮದಾಗುತ್ತವೆ ಎಂಬುದಕ್ಕೆ ಈ ನೆಲದ ಪರಂಪರೆ, ಭಕ್ತಿಸಂಪ್ರದಾಯ ಸಾಕ್ಷಿಯಾಗಿದೆ. ನರೇಂದ್ರ ಮೋದಿ ಮೊದಲಿನಿಂದಲೂ ಅಧ್ಯಾತ್ಮದಲ್ಲಿ ಆಸಕ್ತಿ ಉಳ್ಳವರು ಮತ್ತು ಕಠಿಣ ವ್ರತಗಳನ್ನು ಮಾಡುವವರು. ತರುಣಾವಸ್ಥೆಯಲ್ಲೇ ಸಂನ್ಯಾಸಿ ಆಗಲು ಬಯಸಿ ಹಿಮಾಲಯಕ್ಕೆ ಹೋಗಿ ಅಲ್ಲಿ ಕೆಲ ತಿಂಗಳ ಕಾಲ ಸಂಚರಿಸಿದ್ದ ಮೋದಿ ಸೂಕ್ತ ಗುರು ಸಿಗದೆ ವಾಪಸ್ ಆಗಿದ್ದರು ಮತ್ತು ಶ್ರೀರಾಮಕೃಷ್ಣ ಆಶ್ರಮದ ಸ್ವಾಮೀಜಿಗಳ ಬಳಿಯೂ ಸಂನ್ಯಾಸಿಯಾಗುವ ಇಚ್ಛೆ ತೋಡಿಕೊಂಡಿದ್ದರು. ಆದರೆ, ಸ್ವಾಮೀಜಿ ಅದಕ್ಕೆ ಸಮ್ಮತಿಸದೆ ಲೌಕಿಕದಲ್ಲಿ ದೊಡ್ಡ ಸ್ಥಾನಕ್ಕೇರಿ, ಹೆಚ್ಚು ಸಾಧನೆ ಮಾಡಬೇಕಾಗಿದೆ ಎಂಬ ಸೂಚ್ಯ ಸಂದೇಶವನ್ನು ನೀಡಿದ್ದರು.

 

ದಿನಚರಿ ಮತ್ತಷ್ಟು ಚುರುಕು

ದಿನಕ್ಕೆ 18 ಗಂಟೆ ಕೆಲಸ ಮಾಡುವ ಮೋದಿ ದಿನಚರಿ ನವರಾತ್ರಿ ಸಂದರ್ಭದಲ್ಲಿ ಮತ್ತಷ್ಟು ಚುರುಕಾಗುತ್ತದೆ. ಪ್ರತಿನಿತ್ಯ 5 ಗಂಟೆಗೆ ಏಳುವ ಅವರು ನವರಾತ್ರಿ ಹೊತ್ತಲ್ಲಿ ನಸುಕಿನ ಜಾವ 4 ಗಂಟೆಗೇ ಎದ್ದು, ನಿಯತ ಯೋಗ, ಪ್ರಾಣಾಯಾಮ ಪೂರೈಸುತ್ತಾರೆ. ಬಳಿಕ, ದುರ್ಗೆಯನ್ನು ಪೂಜಿಸಿ, ಕೆಲ ಮಂತ್ರಗಳನ್ನು ಪಠಿಸಿ ಲಿಂಬುಪಾನಿ ಸೇವಿಸುತ್ತಾರೆ. ಆ ಬಳಿಕ, ಷೆಡ್ಯುಲ್​ನಂತೆ ಅವರೆಲ್ಲ ಕಾರ್ಯಕ್ರಮಗಳು ನಡೆಯುತ್ತವೆ. ಸಂಜೆ ಒಂದು ಹೊತ್ತು ಮಾತ್ರ ಹಣ್ಣು ಸೇವಿಸುತ್ತಾರೆ. ಎಷ್ಟೋ ಬಾರಿ ಹಣ್ಣನ್ನೂ ಸೇವಿಸದೆ ಸಂಜೆಯೂ ಲಿಂಬುಪಾನಿಯನ್ನಷ್ಟೇ ತೆಗೆದುಕೊಳ್ಳುತ್ತಾರೆ ಎಂದು ವಿವರಿಸುತ್ತಾರೆ ಅವರ ಆತ್ಮೀಯವಲಯದಲ್ಲಿ ಇರುವವರು. ಉಪವಾಸದ ಕಾರಣ ಕಾರ್ಯಕ್ರಮಗಳನ್ನು/ಚಟುವಟಿಕೆಯನ್ನು ಮೊಟಕುಗೊಳಿಸಿದ ಉದಾ ಹರಣೆಯೇ ಇಲ್ಲ. ಬದಲಿಗೆ, ಇವರ ದಿನಚರಿಗೆ ಒಂದೆರಡು ಕಾರ್ಯಕ್ರಮ ಹೆಚ್ಚುವರಿಯಾಗಿ ಸೇರ್ಪಡೆ ಆಗಿರುತ್ತವೆ. ಭಾಷಣ ಮಾಡುವಾಗ ಅಥವಾ ಅಧಿಕಾರಿಗಳ ಸಭೆ ನಡೆಸುವಾಗ ನೀರನ್ನು ಸೇವಿಸುತ್ತಾರಷ್ಟೇ.

ನವರಾತ್ರಿಯ ಭಕ್ತಿ ಉಪವಾಸದ ಶಕ್ತಿ

ಈಗಾಗಲೇ ದೇಶಾದ್ಯಂತ ನವರಾತ್ರಿ ಸಂಭ್ರಮ ಶುರುವಾಗಿದೆ. ಬಹುತೇಕರು ನವರಾತ್ರಿ ಆರಂಭದ ದಿನ ಮತ್ತು ನವಮಿಯ ದಿನ ಉಪವಾಸ ಇರುವುದು ವಾಡಿಕೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಕಳೆದ 40 ವರ್ಷಗಳಿಂದ ಒಂಭತ್ತೂ ದಿನ ಉಪವಾಸ ಕೈಗೊಳ್ಳುತ್ತಿದ್ದಾರೆ. ಶಾರದೆ ನವರಾತ್ರಿಯಲ್ಲಿ ಅಷ್ಟೇ ಅಲ್ಲ ಚೈತ್ರ ನವರಾತ್ರಿಯಲ್ಲೂ ಮೋದಿ ಉಪವಾಸ ಕೈಗೊಳ್ಳುತ್ತಾರೆ ಎಂಬ ಸಂಗತಿ ತುಂಬ ಜನರಿಗೆ ತಿಳಿದಿಲ್ಲ. ನವರಾತ್ರಿ ಶಕ್ತಿ ಆರಾಧನೆಗೆ, ಪುಣ್ಯಪ್ರಾಪ್ತಿಗೆ ಪರ್ವಕಾಲ. ಈ ಹೊತ್ತಲ್ಲಿ ಉಪವಾಸ ಆಚರಿಸಿ ನವದೇವಿಯರನ್ನು ಆರಾಧಿಸಿದರೆ ಕಷ್ಟಗಳೆಲ್ಲ ಕಳೆದು, ನಾವು ಮಾಡುವ ಕಾರ್ಯಗಳಲ್ಲಿ ವಿಜಯ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ, ಮನೋನಿಗ್ರಹ, ಇಂದ್ರಿಯನಿಗ್ರಹಕ್ಕೂ ಉಪವಾಸ ತುಂಬ ಸಹಕಾರಿ. ಈ ಸಂಗತಿಗಳನ್ನು ಅಧ್ಯಯನ, ಸ್ವಾಮೀಜಿಗಳ ಒಡನಾಟದಿಂದ ಅರಿತ ಮೋದಿ ನವರಾತ್ರಿ ಹೊತ್ತಲ್ಲಿ ಉಪವಾಸವಿರುತ್ತಾರೆ.

‘ದುರ್ಗಾ ಸಪ್ತಶತಿ’ ಪಠಣ

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2001-2014) ಮಹಾನವಮಿಯಂದು ಆಯುಧ ಪೂಜೆ ಕೈಗೊಂಡ ಮೋದಿ, ಅದರ ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಪ್ರಧಾನಿಯಾದ ಬಳಿಕವೂ ಆಯುಧ ಪೂಜೆಯಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ, ನವರಾತ್ರಿಯ ಎಲ್ಲ ದಿನಗಳಲ್ಲೂ ನಸುಕಿನ ಜಾವ ದೇವಿಗೆ ಪೂಜೆ ಸಲ್ಲಿಸುತ್ತಾರೆ ಮತ್ತು ‘ದುರ್ಗಾ ಸಪ್ತಶತಿ’ಯನ್ನು ಪಠಿಸುತ್ತಾರೆ.

ಯೋಗಿ ಉಪವಾಸ

ಸುಪ್ರಸಿದ್ಧ ಗೋರಖನಾಥ ಮಂದಿರ ಟ್ರಸ್ಟ್​ನ ಮುಖ್ಯಸ್ಥರೂ ಆಗಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ನವರಾತ್ರಿ ಉಪವಾಸ ಕೈಗೊಳ್ಳುತ್ತಾರೆ. ಮಾತ್ರವಲ್ಲ, ಈ ಅವಧಿಯಲ್ಲಿ ಅವರು ಮಂದಿರದಲ್ಲೇ ಇದ್ದು, ವಿಶೇಷ ಅನುಷ್ಠಾನ ಕೈಗೊಳ್ಳುತ್ತಿದ್ದರು. ಆದರೀಗ, ರಾಜ್ಯದ ನೊಗ ಹೊತ್ತಿರುವುದರಿಂದ ವಿಶೇಷ ಅನುಷ್ಠಾನದಿಂದ ದೂರ ಉಳಿದಿದ್ದು, ದೇವಸ್ಥಾನದ ಮುಖ್ಯ ಅರ್ಚಕರಿಗೆ ಅನುಷ್ಠಾನ ಕೈಗೊಳ್ಳಲು ಸೂಚಿಸಿದ್ದಾರೆ. ಬುಧವಾರ ಕಳಶಸ್ಥಾಪನೆಯಲ್ಲಿ ಪಾಲ್ಗೊಂಡ ಅವರು ಉಪವಾಸ ವ್ರತ ಆರಂಭಿಸಿದ್ದಾರೆ. ವಿಜಯದಶಮಿ ದಿನದಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉಪವಾಸ ನಿಲ್ಲಿಸುತ್ತಾರೆ.

 

ಹೊಸ ಕೆಲಸ ಆರಂಭ ನವರಾತ್ರಿ ಹೊತ್ತಲ್ಲಿ

ವಿಜಯದ ಶ್ರೀರಕ್ಷೆ ಇರುವುದರಿಂದ ವೈಯಕ್ತಿಕವಾಗಿ, ಸಾಮುದಾಯಿಕವಾಗಿ ಯಾವುದೇ ಹೊಸ ಕೆಲಸ ಆರಂಭಿಸಬೇಕಾದರೂ ಮೋದಿ ಇದೇ ಅವಧಿಯನ್ನು ಆಯ್ದುಕೊಳ್ಳುತ್ತಾರೆ ಮತ್ತು ಈ ಕಾರ್ಯಗಳು ಅವರಿಗೆ ಗೆಲುವನ್ನೂ ತಂದುಕೊಟ್ಟಿವೆ ಎನ್ನುತ್ತವೆ ಮೂಲಗಳು.

ಶಕ್ತಿ ಹೆಚ್ಚಿಸುತ್ತೆ ಎಂದಿದ್ದರು

ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಕರ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಾಲೆಯೊಂದಕ್ಕೆ ಭೇಟಿ ನೀಡಿದ್ದರು. ಆಗ ಹೈಸ್ಕೂಲ್ ವಿದ್ಯಾರ್ಥಿನಿಯೋರ್ವಳು ‘ಉಪವಾಸದ ಹೊತ್ತಲ್ಲೂ ನೀವು ಉತ್ಸಾಹ ಹಾಗೂ ಲವಲವಿಕೆಯಿಂದ ಇರುವುದರ ಗುಟ್ಟೇನು?’ ಎಂದು ಪ್ರಶ್ನಿಸಿದ್ದಳು. ‘ಈಗ ಇದು(ಉಪವಾಸ) ಅಭ್ಯಾಸವಾಗಿ ಹೋಗಿದೆ. ಉಪವಾಸ ಕೂಡ ಜೀವನಕ್ರಮದ ಒಂದು ಭಾಗ. ಆಗಾಗ, ಕೈಗೊಳ್ಳುವ ಉಪವಾಸ ಶರೀರ, ಮನಸ್ಸು ಎರಡನ್ನೂ ಆಹ್ಲಾದಗೊಳಿಸುತ್ತದೆ. ನನಗೆ ಉಪವಾಸದಿಂದ ಆತ್ಮವಿಶ್ವಾಸ, ಶಕ್ತಿ ಹೆಚ್ಚುತ್ತದೆ, ಉತ್ಸಾಹವೂ ವರ್ಧಿಸುತ್ತದೆ’ ಎಂದಿದ್ದರು ಮೋದಿ. ಕಳೆದ 40 ವರ್ಷಗಳಿಂದ ಒಮ್ಮೆಯೂ ಅವರು ಈ ವ್ರತ ತಪ್ಪಿಸಿಲ್ಲ ಎಂಬುದು ವಿಶೇಷ.

ದಂಗಾಗಿದ್ದರು ಒಬಾಮ!

ಅದು 2014ರ ಸೆಪ್ಟೆಂಬರ್ ತಿಂಗಳು. ಪ್ರಧಾನಿಯಾದ ಕೆಲ ತಿಂಗಳಲ್ಲೇ ಮೋದಿ ಅಮೆರಿಕಕ್ಕೆ ಭೇಟಿ ನೀಡಿದರು. ಆ ಅವಧಿಯಲ್ಲಿ ನವರಾತ್ರಿ ಆರಂಭಗೊಂಡಿದ್ದರಿಂದ, ಉಪವಾಸವ್ರತ ಚ್ಯುತಿಯಾಗಲು ಬಿಡಲಿಲ್ಲ. ಭಾರತದ ಪ್ರಧಾನಿಯ ಗೌರವಾರ್ಥ ಆಗಿನ ಅಧ್ಯಕ್ಷ ಬರಾಕ್ ಒಬಾಮ ಔತಣಕೂಟ ಏರ್ಪಡಿಸಿದ್ದರು. ಅಲ್ಲೂ ಮೋದಿ ಸೇವಿಸಿದ್ದು ಲಿಂಬು ಪಾನಿ ಮಾತ್ರ. ಒಬಾಮ ಈ ಕಠಿಣ ಉಪವಾಸ ವ್ರತದ ಬಗ್ಗೆ ಮಾಹಿತಿ ಪಡೆದುಕೊಂಡಾಗ ದಂಗಾದರಲ್ಲದೆ, ಮೋದಿಯವರನ್ನು ಶ್ಲಾಘಿಸಿದ್ದರು.

ಟ್ರೆಂಡ್ ಆದ ಫಾಸ್ಟ್ ವಿತ್ ಮೋದಿ

ಈಗ ಮೋದಿಯವರಷ್ಟೇ ಅಲ್ಲ ಅವರ ಅಭಿಮಾನಿಗಳು, ಅನುಯಾಯಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಉಪವಾಸ ವ್ರತ ಆಚರಿಸು ತ್ತಿದ್ದಾರೆ. ಕರ್ನಾಟಕ ದಲ್ಲಿಯೂ ಈ ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಇದು ಟ್ರೆಂಡ್ ಆಗಿದ್ದು, ‘ಫಾಸ್ಟ್ ವಿತ್ ಮೋದಿ’ ಎಂಬ ಚಿಂತನೆ ಆಂದೋಲನದಂತೆ ಹಬ್ಬಿದೆ. ಯುವಾ ಬ್ರಿಗೇಡ್​ನ ಮಾರ್ಗದರ್ಶಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಈ ಬಾರಿ ಉಪವಾಸಕ್ಕೆ ಕೈಜೋಡಿಸಿದ್ದು, ಬೇಯಿಸದ ಆಹಾರವನ್ನಷ್ಟೇ ಸ್ವೀಕರಿಸುತ್ತಿದ್ದಾರೆ. ‘ದೇಶದ ಒಳಿತಿಗಾಗಿ ಮೋದಿ ಉಪವಾಸ ಮಾಡುತ್ತಿರುವಾಗ ನಾವೂ ಅವರ ಜತೆ ಕೈಜೋಡಿಸಿ, ಉಪವಾಸ ವ್ರತ, ಶಕ್ತಿ ಆರಾಧನೆ ಮೂಲಕ ದೇಶವನ್ನು ಬಲಿಷ್ಠಗೊಳಿಸೋಣ’ ಎಂಬ ಕರೆಗೆ ವ್ಯಾಪಕ ಸ್ಪಂದನೆ ಸಿಕ್ಕಿದ್ದು, ಯುವಾ ಬ್ರಿಗೇಡ್ ಕಾರ್ಯಕರ್ತರು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಪವಾಸ ವ್ರತ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

Back To Top