ಜನಾಶೀರ್ವಾದದಲ್ಲಿ ಮೋದಿಯೇ ಟಾರ್ಗೆಟ್

| ಶ್ರೀಕಾಂತ ಶೇಷಾದ್ರಿ ಕೊಪ್ಪಳ/ಗಂಗಾವತಿ

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಗರಿಷ್ಠ ಸೀಟುಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ಮಹತ್ವಾಕಾಂಕ್ಷೆಯಿಂದ ಕಾಂಗ್ರೆಸ್ ಹಮ್ಮಿಕೊಂಡಿರುವ ಮೊದಲ ಹಂತದ ಜನಾಶೀರ್ವಾದ ಯಾತ್ರೆಯ ಎರಡನೇ ದಿನವೂ ಪ್ರಧಾನಿ ನರೇಂದ್ರ ಮೋದಿಯೇ ಟಾರ್ಗೆಟ್ ಆಗಿದ್ದರು. ಆದರೆ, ಯಾತ್ರೆ ವೇಳೆ ನ್ಯಾ. ಸದಾಶಿವ ಆಯೋಗ ವರದಿ ಜಾರಿಗಾಗಿ ಕಪು್ಪಪಟ್ಟಿ ಪ್ರದರ್ಶಿಸುವ ಮೂಲಕ ಪ್ರತಿಭಟನೆ ಬಿಸಿಯನ್ನೂ ಅನುಭವಿಸಬೇಕಾಯಿತು.

 

ಎರಡು ಸಣ್ಣ ಸಭೆ, ದೇವಸ್ಥಾನ ಭೇಟಿ, ಎರಡು ರ್ಯಾಲಿ, ರೈತರೊಂದಿಗೆ ಸಂವಾದ, ಸಾಗಿಬಂದ ದಾರಿಯುದ್ದಕ್ಕೂ ಹಳ್ಳಿಗಳಲ್ಲಿ ಕೈ ಬೀಸಿದ್ದು ರಾಹುಲ್ ಸವಾರಿಯ ಪ್ರಮುಖ ಸಂಗತಿಗಳಾಗಿದ್ದು, ನೇರವಾಗಿ ಮೋದಿ ವಿರುದ್ಧ ಜನಾಭಿಪ್ರಾಯ ಮೂಡಿಸಲು ಅವರು ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸಿತು.

ರಾಹುಲ್ ಮಾಡಿದ ತುಲನೆ: ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಗಳನ್ನು ರಾಹುಲ್ ಭಾಷಣದಲ್ಲಿ ಹೋಲಿಕೆ ಮಾಡಿದರು. ಮೋದಿ ನುಡಿದಂತೆ ನಡೆಯಲಿಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದೆ ಎಂದು ಶಹಬ್ಬಾಸ್​ಗಿರಿ ನೀಡಿದರು. ಮೋದಿ ಸರ್ಕಾರ ರೈತರ ಸಾಲಮನ್ನಾ ಮಾಡಲಿಲ್ಲ, ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಿಲ್ಲ, ಯಾರ ಖಾತೆಗೂ 15 ಲಕ್ಷ ರೂ. ಹಾಕಲಿಲ್ಲ, ಕೆಲವೇ ಉದ್ಯಮಿಗಳ ಪರವಾಗಿದೆ, ಗುಜರಾತ್​ನಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆಂದು ಪಟ್ಟಿ ಮಾಡಿದರು. ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲೂ ಮೊದಲ ಸ್ಥಾನದಲ್ಲಿದೆ ಎಂದು ಶಹಬ್ಬಾಸ್​ಗಿರಿ ನೀಡಿದರು. ಬೆಳಗ್ಗೆ ಕುಕನೂರಿಂದ ಹೊರಟ ಯಾತ್ರೆ ಯಲಬುರ್ಗಾ ತಲುಪಿತು. ಅಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಯಾತ್ರೆಯ ದಿನದ ಚಟುವಟಿಕೆಗೆ ಚಾಲನೆ ದೊರೆಯಿತು. ನಂತರ ಬಂಡಿ ಕ್ರಾಸ್ ಹಾದು ಕುಷ್ಟಗಿಗೆ ಬಂದಾಗ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನ ಯಾತ್ರೆಯನ್ನು ಬರಮಾಡಿಕೊಂಡರು. ಬರುವ ದಾರಿಯುದ್ದಕ್ಕೂ ಜನರನ್ನು ಕಂಡೊಡನೆ ಬಸ್ಸಿನಿಂದ ಕೆಳಗಿಳಿದ ರಾಹುಲ್, ಜನರ ಕೈ ಕುಲುಕುತ್ತ ಸಾಗಿದರು.

ಬಳಿಕ ಹಿರೇಮನ್ನಾಪುರ, ಹಂಚಿನಾಳ, ನವಲಹಳ್ಳಿ, ಅವರಗೆರೆ ಐಬಿ ವೃತ್ತ, ಮೇಣಿದಾಳ್ ಹುಲಿಹೈದರ, ಕನಕಗಿರಿ, ಕೆಸರಹಟ್ಟಿ, ಹೆರೂರು ಮೂಲಕ ಗಂಗಾವತಿ ತಲುಪಿತು. ಅಲ್ಲಿ ಕಿಕ್ಕಿರಿದು ತುಂಬಿದ್ದ ಜನರ ಸಮ್ಮುಖದಲ್ಲಿ ಗಾಂಧಿ ಪ್ರತಿಮೆಗೆ ರಾಹುಲ್ ಗಾಂಧಿ ಮಾಲಾರ್ಪಣೆ ಮಾಡಿ ಜನರತ್ತ ಕೈ ಬೀಸಿದರು. ಬಳಿಕ ಇಂದಿರಾಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಾಲ್ಕು ನಿಮಿಷ ಭಾಷಣಗೈದರು. ಮುಂದೆ ಸಿದ್ದಾಪುರ ಮೂಲಕ ಕಾರಟಗಿ ತಲುಪಿ ಸಮಾವೇಶದಲ್ಲಿ ಪಾಲ್ಗೊಂಡರು.

ಯಾತ್ರೆ ಬಿಸಿ

ಭಾನುವಾರ ಎಸ್​ಡಿಎ ಪರೀಕ್ಷೆಗಳಿದ್ದವು. ಆದರೆ, ರಾಹುಲ್ ಸಮಾವೇಶಕ್ಕೆ ಬಸ್ ಬಿಟ್ಟ ಕಾರಣ ವಿದ್ಯಾರ್ಥಿಗಳು ಪರದಾಡಿದರು. ಅಲ್ಲದೆ, ಕೆಲ ಅಭ್ಯರ್ಥಿಗಳು ಪರೀಕ್ಷೆಯಿಂದ ಹಿಂದುಳಿಯುವಂತಾಯಿತು. ಯಾತ್ರೆ ಸಾಗಿಬಂದ ಒಂದು ತಾಸು ಮುಂಚೆಯೇ ವಾಹನಗಳನ್ನು ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು.

ಊಟ ಮೊದಲು, ಉಳಿದ್ದದ್ದು ನಂತರ!

ಮಧ್ಯಾಹ್ನ 1.15ಕ್ಕೆ ಕನಕಗಿರಿಗೆ ಆಗಮಿಸಿದ ಯಾತ್ರೆ ಊಟಕ್ಕಾಗಿ ಅಲ್ಲಿನ ಪ್ರವಾಸಿ ಮಂದಿರ ಬಳಸಿಕೊಂಡಿತು. ರಾಹುಲ್ ಜತೆ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಮತ್ತಿತರರು ಒಟ್ಟಾಗಿ ಊಟ ಸವಿದರು. ಊಟಕ್ಕಾಗಿ ಜವಾರಿ ಕೋಳಿ ಬಿರಿಯಾನಿ, ಶಾವಿಗೆ ಪಾಯಸ, ಪಿಜ್ಜಾ, ಪಾವ್ ಬಾಜಿ, ಅನ್ನ ರಸಂ ಅನ್ನು ಹೊಸಪೇಟೆಯ ಮಲ್ಲಿಗೆ ಹೋಟೆಲ್​ನಿಂದ ತರಿಸಲಾಗಿತ್ತು. ಯಾರು ಏನು ಊಟ ಮಾಡಿದರು ಎಂಬ ಸಂಗತಿಯನ್ನು ಗೌಪ್ಯವಾಗಿಡುವ ಪ್ರಯತ್ನ ಮಾಡಲಾಗಿತ್ತು. ಊಟದ ಬಳಿಕ ರಾಹುಲ್ ಗಾಂಧಿ ತಂಡ ನೇರವಾಗಿ ಅಲ್ಲೇ ಸಮೀಪದ ಕನಕಾಚಲ, ನರಸಿಂಹ ಸ್ವಾಮಿ ದೇವರ ದರ್ಶನ ಪಡೆದರು.

ದೇವಾಲಯಗಳ ಭೇಟಿ ರಾಜಕೀಯ ವಿಷಯವಲ್ಲ. ನಮ್ಮ ನಾಯಕರು ದೇವಸ್ಥಾನಕ್ಕೆ ಹೋಗುತ್ತಾರೆ, ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಹೋಗುತ್ತಿಲ್ಲ. ಬಿಜೆಪಿಯವರೂ ಸುಖಾಸುಮ್ಮನೆ ಟೀಕಿಸುತ್ತಾರೆ.

| ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಕಾಂಗ್ರೆಸ್ ನಾಯಕ

 

ಕಪು್ಪ ಬಾವುಟ, ಮೋದಿ ಘೋಷಣೆ!

ನ್ಯಾ. ಸದಾಶಿವ ಆಯೋಗ ವರದಿ ವಿಚಾರದಲ್ಲಿ ನಿಧಾನವಾಗಿ ಸರ್ಕಾರದ ವಿರುದ್ಧದ ಒಳ ಆಕ್ರೋಶ ಹೆಚ್ಚಾಗಲಾರಂಭಿಸಿದೆ. ಸಚಿವರ ಪ್ರಯತ್ನದ ಹೊರತಾಗಿಯೂ ಯಲಬುರ್ಗಾ ಮತ್ತು ಗಂಗಾವತಿಯಲ್ಲಿ ರಾಹುಲ್ ಹಾಗೂ ಸಿದ್ದರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಕನಕಗಿರಿಯಲ್ಲಿ ರಾಹುಲ್ ಬಸ್ ಬರುತ್ತಲೇ ಕೆಲ ಯುವಕರು ಮೋದಿ ಮೋದಿ ಎಂದು ಕೂಗುವ ಮೂಲಕ ಸ್ವಾಗತ ಕೋರಿದರು.

ಉಡುಗೊರೆ ಸಹವಾಸ ಬಿಟ್ಟ ರಾಹುಲ್

ಹೊಸಪೇಟೆ ಸಮಾವೇಶದಲ್ಲಿ ಶಾಸಕ ನಾಗೇಂದ್ರ ನೀಡಿದ ಉಡುಗೊರೆಯನ್ನು ಧಾರ್ವಿುಕ ದತ್ತಿ ಇಲಾಖೆಗೆ ನೀಡಲು ರಾಹುಲ್ ನಿರ್ಧರಿಸಿದ್ದಾರೆ. ಚಿನ್ನದ ಲೇಪನದ ವಾಲ್ಮೀಕಿ ಪುತ್ಥಳಿಯನ್ನು ಸ್ವೀಕರಿಸಿದ್ದ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಿತ್ತು. ಹೀಗಾಗಿ ಪಕ್ಷದ ಮುಖಂಡರೊಂದಿಗೆ ಬಸ್​ನಲ್ಲಿ ಸಂಚರಿಸುವಾಗ ಚರ್ಚೆ ನಡೆಸಿ ಈ ನಿರ್ಧಾರ ಪ್ರಕಟಿಸಿದ್ದಾರೆ.

‘ಆ ಉಡುಗೊರೆ ಮೊತ್ತ ಗೊತ್ತಿಲ್ಲ’ ಎಂದು ಸಿಎಂ ಪ್ರತಿಕ್ರಿಯಿಸಿ ದ್ದಾರೆ. ಕಾರಟಗಿಯಲ್ಲಿ ಶಾಸಕ ಶಿವರಾಜ್ ತಂಗಡಗಿ ರಾಹುಲ್​ಗೆ ನೀಡಿದ ಬೆಳ್ಳಿ ಖಡ್ಗ, 2 ಕೆಜಿ ಕಿರೀಟ ಉಡುಗೊರೆಯನ್ನೂ ಕನಕಚಲಪತಿ ದೇಗುಲಕ್ಕೆ ದೇಣಿಗೆ ನೀಡಿದರು.

ಯಾತ್ರೆಯಲ್ಲಿ ಕಂಡಿದ್ದು

# ನವನಹಳ್ಳಿಯಲ್ಲಿ ಜನಾಶೀರ್ವಾದ ಯಾತ್ರೆ ಸಂಚರಿಸುತ್ತಿದ್ದಾಗ ಬಸ್​ಗೆ ಮೇಕೆಗಳು ಅಡ್ಡ ಬಂದವು. ಪೊಲೀಸರು ಮೇಕೆಗಳನ್ನು ಓಡಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

# ಬಸ್​ನಲ್ಲಿ ರಾಹುಲ್ ಜತೆ ಆಸೀನರಾಗಲು ನಾಯಕರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಸಿಎಂ, ಖರ್ಗೆ, ಪರಮೇಶ್ವರ ಹೊರತಾಗಿ ಇತರ ನಾಯಕರು ಸೀಟು ಹಿಡಿಯಲು ಹೆಣಗಾಡಿದ್ದು ಕಂಡುಬಂತು.

# ಕುಕನೂರು ಐಬಿಯಿಂದ ಯಲಬುರ್ಗಾ ಕಡೆ ರಾಹುಲ್ ಗಾಂಧಿ ತೆರಳುವ ವೇಳೆ ಬಾಲಕನೊಬ್ಬ ರಾಹುಲ್ ನೋಡಲು ಹವಣಿಸಿದ್ದರಿಂದ ಬಸ್ ನಿಲ್ಲಿಸಿ, ಬಾಲಕನನ್ನು ಎತ್ತಿಕೊಂಡು ಕ್ಯಾಮರಾಗೆ ಫೋಸ್ ಕೊಟ್ಟರು.

# ಕಾರಟಗಿ ಭಾಷಣದ ವೇಳೆ ಸಿಎಂ ಮಾತು ಆರಂಭಿಸುತ್ತಿದ್ದಂತೆ ನಮಾಜ್ ಧ್ವನಿ ಕೇಳಿಬಂತು. ಆಗ ಸಿಎಂ ಮಾತು ನಿಲ್ಲಿಸಿದರು. ಶಾಸಕ ಶಿವರಾಜ ತಂಗಡಗಿ ಕೈ ಸನ್ನೆ ಮಾಡುವ ಮೂಲಕ ಜನರನ್ನು ಸುಮ್ಮನಿರಿಸಿದರು. ಈ ಸಭೆಗೆ ನಿರೀಕ್ಷೆಯಷ್ಟು ಜನ ಬಾರದೆ ಕುರ್ಚಿಗಳು ಖಾಲಿ ಉಳಿದಿದ್ದವು.

ರಾಹುಲ್ ಇಂದಿನ ದಿನಚರಿ

# ಬೆಳಗ್ಗೆ 9.45ಕ್ಕೆ ಯರಮರಸ್ ಸರ್ಕೀಟ್ ಹೌಸ್​ನಿಂದ ಪ್ರಯಾಣ

# ಬೆಳಗ್ಗೆ 10 ರಿಂದ 10.15ವರೆಗೆ ಗಂಜ್ ವೃತ್ತದಲ್ಲಿ ಸಭೆ

# ಬೆಳಗ್ಗೆ 10.45 ರಿಂದ 11.00ರವರೆಗೆ ರಾಯಚೂರು ತಾಲೂಕಿನ ಕಲ್ಮಲಾದಲ್ಲಿ ಬಹಿರಂಗ ಸಭೆ

# ಬೆಳಗ್ಗೆ 11.20 ರಿಂದ 11.30ರವರೆಗೆ ದೇವದುರ್ಗ ತಾಲೂಕು ಗಬ್ಬೂರಿನಲ್ಲಿ ಬಹಿರಂಗ ಸಭೆ

# ಮಧ್ಯಾಹ್ನ 12.15 ರಿಂದ 1.15ರ ವರೆಗೆ ದೇವದುರ್ಗದಲ್ಲಿ ಬುಡಕಟ್ಟು ಸಮುದಾಯದ ರ‍್ಯಾಲಿ ಹಾಗೂ ಸಮಾವೇಶದಲ್ಲಿ ಭಾಗಿ

# ಮಧ್ಯಾಹ್ನ 1.50 ರಿಂದ 2.20ರ ವರೆಗೆ ಶಹಪುರದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಭಾಗಿ

# ಮಧ್ಯಾಹ್ನ 3.20ರಿಂದ 4.20ರವರೆಗೆ ಕಲಬುರಗಿ ಜಿಲ್ಲೆ ಜೇವರ್ಗಿ ಕ್ರೀಡಾಂಗಣದಲ್ಲಿ ಬಹಿರಂಗ ಸಭೆ

# ಸಂಜೆ 5.20 ರಿಂದ 6.20ರ ವರೆಗೆ ಕಲಬುರಗಿ ನೂತನ ಶಾಲೆ ಆವರಣದಲ್ಲಿ ಸಮಾವೇಶದಲ್ಲಿ ಭಾಗಿ.

# ಸಂಜೆ 6.30ರಿಂದ 7ರವರೆಗೆ ಕಲಬರಗಿಯ ಖಾಜಾ ಬಂದೇ ನವಾಜ್ ದರ್ಗಾ ಭೇಟಿ

# ನಂತರ ಕಲುಬುರಗಿಯ ಸರ್ಕೀಟ್ ಹೌಸ್​ನಲ್ಲಿ ವಾಸ್ತವ್ಯ

 

ಮೋದಿಯವರದ್ದು ಬಾಯಿ ಬಡಾಯಿ, ಸಾಧನೆ ಶೂನ್ಯ. ಮೂರು ವರ್ಷದಲ್ಲಿ ಬರೀ ಮಾತಾಡಿಕೊಂಡೇ ಕಾಲ ಕಳೆದಿದ್ದಾರೆ.

| ಸಿದ್ದರಾಮಯ್ಯ ಸಿಎಂ (ಕಾರಟಗಿ ಸಭೆಯಲ್ಲಿ)

 

ನಾನು ರಾಮಾಯಣ, ಮಹಾಭಾರತ ಓದಿದ್ದೇನೆ, ಅದರ ಬಗ್ಗೆ ಬರೆದಿದ್ದೇನೆ. ಹಾಗೆಯೇ ನಮ್ಮ ನಾಯಕರು ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದವರಾರು?

| ವೀರಪ್ಪ ಮೊಯ್ಲಿ ಮಾಜಿ ಸಿಎಂ

 

ಹಿಂಬಾಲಕ ಅಭಿಮಾನಿ

ರಾಹುಲ್ ಅಭಿಮಾನಿಯಾದ ಹರಿಯಾಣದ ಕಾಕರೋಡ ಗ್ರಾಮದ ಪಂಡಿತ್ ದಿನೇಶ ಶರ್ವ, ರಾಹುಲ್ ಹೋದಲ್ಲೆಲ್ಲ ಆಗಮಿಸುವ ಮೂಲಕ ಜನರ ಗಮನ ಸೆಳೆದರು. ರಾಹುಲ್ ಪ್ರಧಾನಿಯಾಗುವವರೆಗೂ ಬೈಕ್​ನಲ್ಲಿ ಯಾತ್ರೆ ಕೈಗೊಂಡಿರುವ ಶರ್ಮಾ ಕಳೆದ 7 ವರ್ಷದಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದಾರೆ. ಭಾನುವಾರ ರಾಹುಲ್​ರನ್ನು ಶರ್ಮಾ ಭೇಟಿ ಮಾಡಿ ಮಾತನಾಡಿದರು.

Leave a Reply

Your email address will not be published. Required fields are marked *