ಕೇದಾರನಾಥನ ಸನ್ನಿಧಿಯಲ್ಲಿ ಮೋದಿ ಧ್ಯಾನ: ಪಹಾಡಿ ಉಡುಗೆಯಲ್ಲಿ ಮಿಂಚಿದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಎರಡು ದಿವಸಗಳ ಯಾತ್ರೆಯನ್ನು ಆರಂಭಿಸಿದ್ದು, ಶನಿವಾರ ಕೇದಾರನಾಥ ದೇವಾಲಯದ ದರ್ಶನ ಪಡೆದರು. ಅರ್ಧ ತಾಸು ಪೂಜೆ, ಅರ್ಚನೆ ನೆರವೇರಿಸಿದರು. ಭಾರಿ ಪ್ರವಾಹ ಕಾರಣದಿಂದ ನಾಶವಾಗಿ ಹೋಗಿದ್ದ ಕೇದಾರಪುರಿಯ ಮರುನಿರ್ವಣ ಕಾರ್ಯಗಳ ಪರಿಶೀಲನೆ ನಡೆಸಿದರು. ಶನಿವಾರ ಕೇದಾರನಾಥದಲ್ಲೇ ಉಳಿದುಕೊಳ್ಳಲಿರುವ ಮೋದಿ ಭಾನುವಾರ ಬದರೀನಾಥನ ದರ್ಶನ ಪಡೆಯಲಿದ್ದಾರೆ. ಮೋದಿ ಯಾತ್ರೆಗೆ ಚುನಾವಣಾ ಆಯೋಗ ಅಭ್ಯಂತರ ವ್ಯಕ್ತಪಡಿಸಿಲ್ಲ. ಆದರೆ, ಈಗಲೂ ನೀತಿಸಂಹಿತೆ ಜಾರಿಯಲ್ಲಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ.

ನಾಲ್ಕನೇ ಬಾರಿ ಕೇದಾರನಾಥನ ದರ್ಶನ: ಪ್ರಧಾನಿಯಾದ ಬಳಿಕ 4ನೇ ಬಾರಿ ಮೋದಿ ಕೇದಾರನಾಥಕ್ಕೆ ಭೇಟಿ ನೀಡಿದ್ದು, ಕಳೆದ ಬಾರಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.

ಚರ್ಚೆಗೆ ಕಾರಣವಾದ ಉಡುಗೆ: ಕೇದಾರನಾಥನ ದರ್ಶನದ ವೇಳೆ ಮೋದಿ ಧರಿಸಿದ್ದ ಉಡುಗೆ ಭಾರಿ ಚರ್ಚೆಗೆ ಕಾರಣವಾಗಿದೆ. ಅವರು ಸಾಂಪ್ರದಾಯಿಕ ಪಹಾಡಿ ಉಡುಗೆ ತೊಟ್ಟಿದ್ದರು. ಬೂದು ಬಣ್ಣದ ಕುರ್ತಾ, ಹುಲಿಯ ಚರ್ಮವನ್ನು ಹೋಲುವ ಶಾಲು, ಕೇಸರಿ ಪಟ್ಟಿ, ರುದ್ರಾಕ್ಷಿ ಮಾಲೆ ಹಾಕಿಕೊಂಡಿದ್ದ ಮೋದಿ ಥೇಟ್ ಸಂತನಂತೆ ಕಾಣುತ್ತಿದ್ದರು. ಕೇದಾರನಾಥದಲ್ಲಿ ಧ್ಯಾನ ಮಾಡುವಾಗ ಕೇಸರಿ ಉಡುಪು ಧರಿಸಿದ್ದು ವಿಶೇಷವಾಗಿತ್ತು.

ಬೆಳಗಿವರೆಗೂ ಧ್ಯಾನ

ಕೇದಾರ ಮಠ ಗುಹೆ ತಲುಪಲು 2 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿದ ಪ್ರಧಾನಿ ನರೇಂದ್ರ ಮೋದಿ, ತಮ್ಮೊಂದಿಗೆ ಬರಲು ಮಾಧ್ಯಮದವರಿಗೂ ಅವಕಾಶ ಮಾಡಿಕೊಟ್ಟರು. ತಾವು ಧ್ಯಾನ ಆರಂಭಿಸುವ ಕ್ಷಣಗಳ ಚಿತ್ರಗಳನ್ನು ತೆಗೆಯಲು ಅನುಮತಿಸಿದರು. ಪ್ರಧಾನಿ ಮೋದಿ ಬೆಳಗಿನ ಜಾವದವರೆಗೂ ಧ್ಯಾನ ಮುಂದುವರಿಸಿದರು ಎಂದು ಮೂಲಗಳು ತಿಳಿಸಿವೆ.

ಕಣ್ವಕುಪ್ಪೆ ಶ್ರೀಗಳಿಂದ ಪೂಜಾ ವಿಧಿ-ವಿಧಾನ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಕೇದಾರನಾಥಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಂದಿರದೊಳಗೆ ನಡೆದ ಪೂಜೆ, ಧಾರ್ವಿುಕ ವಿಧಿಗಳ ನೇತೃತ್ವ ವಹಿಸಿದ್ದವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ. 6 ತಿಂಗಳ ಕಾಲ ಮಹಾಮಂಡಲ ಅನುಷ್ಠಾನ ಮತ್ತು ಕೇದಾರನಾಥನ ಪೂಜೆಯ ಜವಾಬ್ದಾರಿ ಹೊತ್ತಿರುವ ಸ್ವಾಮೀಜಿ, ಪ್ರಧಾನಿ ಬಂದಾಗ ಕೇದಾರನಾಥನಿಗೆ ರುದ್ರಾಭಿಷೇಕ ಪೂಜೆ ಮಾಡಿಸಿದರು. ಮೋದಿ ಅವರಿಗೆ ಭಸ್ಮ ಮತ್ತು ತಿಲಕವನ್ನು ಹಚ್ಚಿ ರುದ್ರಾಕ್ಷಿ ಧಾರಣೆ ಮಾಡಿಸಿದರು. ‘ಕೇದಾರನಾಥನ ಮೇಲೆ ಬಾದಂಬರ್ ಎಂಬ ವಸ್ತ್ರವನ್ನು ಮೋದಿ ಅರ್ಪಣೆ ಮಾಡಿದರು. ಅದೇ ವಸ್ತ್ರವನ್ನು ಆಶೀರ್ವಾದ ರೂಪದಲ್ಲಿ ಮೋದಿ ಅವರಿಗೆ ನೀಡಿ, ಇದು ನಿಮಗೆ ರಕ್ಷಾಕವಚವಾಗಲಿದೆ ಎಂದು ಸ್ವಾಮೀಜಿ ಆಶೀರ್ವದಿಸಿದರು. ನಂತರ ಮೋದಿ ಕೇದಾರನಾಥ ಮಂದಿರದ ಪ್ರದಕ್ಷಿಣೆ ಹಾಕಿದರು. ಪ್ರಧಾನಿಯವರಿಂದ ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪ ಮಾಡಿಸಲಾಯಿತು. ಭಾನುವಾರ ಬೆಳಗ್ಗೆ ಮೋದಿ ದೇಗುಲಕ್ಕೆ ಮತ್ತೆ ಭೇಟಿ ನೀಡಲಿದ್ದು, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ನೆರವೇರಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.

ಮಮತಾ ಅಳಿಯನಿಂದ ಪ್ರಧಾನಿಗೆ ನೋಟಿಸ್

ಕೋಲ್ಕತ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾನನಷ್ಟ ಮೊಕದ್ದಮೆ ನೋಟಿಸ್ ಜಾರಿಗೊಳಿಸಿದ್ದಾರೆ. ಅಭಿಷೇಕ್ ಸ್ಪರ್ಧಿಸಿರುವ ಡೈಮಂಡ್ ಹಾರ್ಬರ್ ಪ್ರದೇಶದಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ಟಿಎಂಸಿ ಸರ್ಕಾರವನ್ನು ಮೋದಿ ಕಟುವಾಗಿ ಟೀಕಿಸಿದ್ದರು. ಅತ್ತೆ- ಅಳಿಯನ ಕಾಲಾವಧಿ ಜನರನ್ನು ದೌರ್ಜನ್ಯಕ್ಕೀಡು ಮಾಡಿದೆ, ಪ್ರಜಾಪ್ರಭುತ್ವ ಗೂಂಡಾಪ್ರಭುತ್ವವಾಗಿ ಮಾರ್ಪಟ್ಟಿದೆ ಮೊದಲಾದ ಹೇಳಿಕೆ ನೀಡಿದ್ದರು. ಆಧಾರರಹಿತ ಹಾಗೂ ದುರುದ್ದೇಶಪೂರಿತ ಹೇಳಿಕೆಗಳಿಂದ ಘನತೆಗೆ ಧಕ್ಕೆಯಾಗಿದೆ ಎಂದು ಅಭಿಷೇಕ್ ನೋಟಿಸ್​ನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *