ಕಾಶ್ಮೀರಿ ವ್ಯಾಪಾರಿಗಳಿಬ್ಬರ ಮೇಲಿನ ಹಲ್ಲೆಯನ್ನು ಖಂಡಿಸಿ ಪ್ರಧಾನಿ ಮೋದಿ ಹೇಳಿದ್ದೇನು?

ನವದೆಹಲಿ: ಉತ್ತರ ಪ್ರದೇಶದ ಲಖನೌದಲ್ಲಿ ಕಾಶ್ಮೀರಿ ವ್ಯಾಪಾರಿಗಳಿಬ್ಬರ ಮೇಲೆ ನಡೆದ ಹಲ್ಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದು, ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶುಕ್ರವಾರ ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ, ಬಳಿಕ ಮಾತನಾಡಿದ ಅವರು, ಕೆಲವು ಬುದ್ಧಿಹೀನ ಜನರು ನಮ್ಮ ಕಾಶ್ಮೀರಿ ಸಹೋದರರ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ದೇಶದಲ್ಲಿ ಶಾಂತಿ ಮತ್ತು ಐಕ್ಯತೆಯನ್ನು ಅತಿ ಮುಖ್ಯವಾಗಿ ನಿರ್ವಹಿಸಬೇಕಾಗಿದೆ. ಇಂತಹ ಕೃತ್ಯಗಳನ್ನು ಎಸಗುವ ಬುದ್ಧಿಹೀನ ಜನರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಎಲ್ಲ ಸರ್ಕಾರಗಳಿಗೆ ಒತ್ತಾಯಿಸುತ್ತೇನೆ ಎಂದರು.

ಕಾಶ್ಮೀರಿಗಳ ಮೇಲೆ ಹಲ್ಲೆ ನಡೆದ ತಕ್ಷಣವೇ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಯು.ಪಿ ಸರ್ಕಾರ ಆರೋಪಿಗಳನ್ನು ಬಂಧಿಸಿ ಬಹು ಬೇಗ ಕ್ರಮ ಕೈಗೊಂಡಿದೆ ಎಂದು ಶ್ಲಾಘಿಸಿದರು.

ಎರಡನೇ ಬಾರಿಗೆ ಪ್ರಧಾನಿ ಮೋದಿ ಅವರು ಕಾಶ್ಮೀರಿಗಳ ಮೇಲಿನ ಹಲ್ಲೆಯನ್ನು ಖಂಡಿಸಿದ್ದು, ಈ ಹಿಂದೆ ಪುಲ್ವಾಮಾ ದಾಳಿಯ ಬಳಿಕ ದೇಶದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಾಗ, ನಮ್ಮ ಹೋರಾಟ ಭಯೋತ್ಪಾದಕರ ವಿರುದ್ಧವೇ ಹೊರತು ಕಾಶ್ಮೀರಿಗಳ ವಿರುದ್ಧವಲ್ಲ ಎಂದು ದೇಶದ ಜನತೆಗೆ ಕರೆ ನೀಡಿದ್ದರು.

ಬುಧವಾರ ಸಂಜೆ ಕೇಂದ್ರ ಲಖನೌದಲ್ಲಿರುವ ದಲಿಗಂಜ್​ ಪ್ರದೇಶದಲ್ಲಿನ ಜನನಿಬಿಡ ರಸ್ತೆಯಲ್ಲಿ ಹಣ್ಣನ್ನು ಮಾರುತ್ತಿದ್ದಾಗ ಗುಂಪೊಂದು ಕಾಶ್ಮೀರಿ ವ್ಯಾಪಾರಿಗಳಿಬ್ಬರ ಮೇಲೆ ಏಕಾಏಕಿ ದಾಳಿ ಮಾಡಿ, ಹಲ್ಲೆ ನಡೆಸಿತ್ತು. ಈ ವೇಳೆ ಸಂತ್ರಸ್ತರಾದ ಮಹಮ್ಮದ್​ ಅಫ್ಜಲ್​ ನಾಯಕ್​ ಹಾಗೂ ಅಬ್ದುಲ್​ ಸಲಾಂ ಇಬ್ಬರನ್ನು ಅಲ್ಲಿಯೇ ಇದ್ದ ಸ್ಥಳೀಯರು ರಕ್ಷಣೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆದ ಬಳಿಕ ಘಟನೆಗೆ ಸಂಬಂಧಪಟ್ಟ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. (ಏಜೆನ್ಸೀಸ್​)