ಜನರು ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆಂದು ಹೇಳಿ ಕಾಂಗ್ರೆಸ್​ಗೆ ಶುಭಕೋರಿದ ಪ್ರಧಾನಿ

ನವದೆಹಲಿ: ಪಂಚ ರಾಜ್ಯಗಳ ಮತದಾರರು ನೀಡಿದ ತೀರ್ಪನ್ನು ನಾವು ನಮ್ರತೆಯಿಂದ ಸ್ವಾಗತಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಗೆಲುವು ಸಾಧಿಸಿರುವ ಕಾಂಗ್ರೆಸ್​, ಕೆಸಿಆರ್​ ಹಾಗೂ ಎಂಎನ್​​ಎಫ್​ ಪಕ್ಷಗಳಿಗೆ ಪ್ರಧಾನಿ ಮೋದಿ ಅವರು ಟ್ವೀಟ್​ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್​ಗಢದ ಜನರು ನಮಗೆ ಮತ್ತಷ್ಟು ಸೇವೆ ಮಾಡಲು ಅವಕಾಶ ಮಾಡಿಕೊಡುತ್ತಾರೆ ಎಂದು ಯೋಚಿಸಿದ್ದೆವು. ಆದರೆ, ನೀವು ನೀಡಿದ ತೀರ್ಪನ್ನು ಸ್ವಾಗತಿಸುತ್ತೇವೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮಿಸಿದ್ದೇವೆ ಎಂದು ತಿಳಿಸಿದ್ದಾರೆ.

ಚುನಾವಣೆಗಾಗಿ ಬಿಜೆಪಿ ಕಾರ್ಯಕರ್ತರು ಹಗಲು ರಾತ್ರಿಯೆನ್ನದೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಶ್ರಮಕ್ಕೆ ನಾನು ಸಲಾಂ ಹೊಡೆಯುತ್ತೇನೆ. ಸೋಲು ಮತ್ತು ಗೆಲುವು ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದಿನ ಫಲಿತಾಂಶ ಜನರಿಗೆ ಸೇವೆ ಸಲ್ಲಿಸುವ ನಮ್ಮ ನಿರ್ಧಾರವನ್ನು ಮತ್ತಷ್ಟು ಬಲಗೊಳಿಸುತ್ತದೆ. ಭಾರತದ ಅಭಿವೃದ್ಧಿಗಾಗಿ ನಾವು ಮತ್ತಷ್ಟು ಶ್ರಮಿಸುತ್ತೇವೆ ಎಂದಿದ್ದಾರೆ.(ಏಜೆನ್ಸೀಸ್​)