ಕೇಂದ್ರದ ಸಾಧನೆಗೆ ವೆಬ್ ಕನ್ನಡಿ

ನವದೆಹಲಿ: ಲೋಕಸಭೆ ಚುನಾವಣೆ ಗಮನದಲ್ಲಿಟ್ಟು ಕೊಂಡು ಕೇಂದ್ರ ಸರ್ಕಾರ, ಸಾಧನೆಯ ವಿವರವನ್ನು ಮತದಾರರ ಮುಂದಿಡಲು ಮುಂದಾಗಿದೆ. ಪ್ರತ್ಯೇಕ ವೆಬ್​ಸೈಟ್ ಹಾಗೂ ಆಪ್ ಆರಂಭಿಸಿ ಸರ್ಕಾರದ ಪ್ರಮುಖ ಯೋಜನೆಗಳ ಸಮಗ್ರ ಹಾಗೂ ನಿರಂತರ ಮಾಹಿತಿ ನೀಡಲು ಕೇಂದ್ರ ನಿರ್ಧರಿಸಿದೆ.

ಎಲ್ಲ ಇಲಾಖೆಗಳಿಂದ ಮಾಹಿತಿ ಪಡೆದು ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಹೊಸ ವೆಬ್​ಸೈಟ್ ಹಾಗೂ ಆಪ್​ನ್ನು ಜನವರಿಯಲ್ಲಿ ಆರಂಭಿಸಲಿದೆ. ಮೋದಿ ಸರ್ಕಾರದ ಮಹತ್ವದ ಯೋಜನೆಗಳು, ಕಾರ್ಯಸಾಧನೆ, ಬಿಡುಗಡೆಯಾದ ಹಣ, ಖರ್ಚು ಸೇರಿ ಎಲ್ಲ ವಿವರಗಳು ಒಂದೇ ವೇದಿಕೆಯಲ್ಲಿ ಸಿಗಲಿವೆ. ಈ ಮೂಲಕ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ನೇರವಾಗಿ ತಲುಪಿಸುವ ಕಾರ್ಯವಾಗಲಿದೆ. ಈಗಾಗಲೇ ಪ್ರಧಾನಿ ಕಾರ್ಯಾಲಯ ಸಹಿತ ಹಲವು ಸಚಿವಾಲಯಗಳು ವೆಬ್​ಸೈಟ್​ನಲ್ಲಿ ಈ ರೀತಿಯ ಮಾಹಿತಿ ಪ್ರಕಟಿಸಿವೆ. ಆದರೆ ಒಂದೇ ವೇದಿಕೆಯಲ್ಲಿ ಮಾಹಿತಿ ನೀಡುವುದರಿಂದ ಸಾರ್ವಜನಿಕರನ್ನು ತಲುಪಲು ಸುಲಭವಾಗುತ್ತದೆ ಎನ್ನುವುದು ಸರ್ಕಾರದ ಚಿಂತನೆಯಾಗಿದೆ.

ವಿಡಿಯೋ ವಾಲ್

ದೆಹಲಿಯಲ್ಲಿನ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯದ ಮುಖ್ಯ ಕಚೇರಿಯ ಮೊದಲ ಮಹಡಿಯಲ್ಲಿ ವಿಶೇಷ ವಿಡಿಯೋ ವಾಲ್ ನಿರ್ವಣವಾಗುತ್ತಿದೆ. ದೊಡ್ಡ ಪರದೆ ಇರುವ ವಿಡಿಯೋ ವಾಲ್ ನಿರ್ವಿುಸಿ, ಸಾರ್ವಜನಿಕರು ಮಾಹಿತಿ ಪಡೆಯಲು ಅವಕಾಶ ನೀಡಲಾಗುತ್ತದೆ. ಟಚ್​ಸ್ಕ್ರೀನ್ ಸೌಲಭ್ಯವಿರುವ ವಿಡಿಯೋ ವಾಲ್​ನಲ್ಲಿ ಸಾರ್ವಜನಿಕರು ತಮಗೆ ಬೇಕಾದ ನಗರದ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯಬಹುದಾಗಿದೆ. ಇದೇ ಸ್ವರೂಪದ ಮಾಹಿತಿಗಳು ವೆಬ್​ಸೈಟ್ ಹಾಗೂ ಆಪ್​ನಲ್ಲಿಯೂ ಇರಲಿದೆ.

ಏನೇನು ಇರಲಿದೆ?

ಸರ್ಕಾರದ ಪ್ರಮುಖ ಯೋಜನೆಗಳು ರಾಜ್ಯವಾರು ಎಷ್ಟು ಮಂಜೂರಾಗಿವೆ? ಯಾವ ಕಾಮಗಾರಿ ಯಾವ ಹಂತದಲ್ಲಿದೆ? ಎನ್ನುವ ವಿವರಗಳನ್ನು ವೆಬ್​ಸೈಟ್ ನೀಡಲಿದೆ. ಇದರ ಜತೆಗೆ ಜಿಯೋಟ್ಯಾಗ್ ಸೌಲಭ್ಯವೂ ಇರುವುದರಿಂದ ಸಾರ್ವಜನಿಕರು ಯೋಜನೆಯ ಅನುಷ್ಠಾನದ ನೈಜ ವಿವರಗಳನ್ನು ಪಡೆಯ ಬಹುದಾಗಿದೆ. ಪ್ರತಿ ಯೋಜನೆಯ ಅನುಷ್ಠಾನದ ಮಾಹಿತಿ ಜತೆಗೆ ಚಿತ್ರ, ವಿಡಿಯೋ ಹಾಗೂ ಇತರ ವಿವರ ಲಭ್ಯವಿರಲಿದೆ. ಪ್ರತಿ ದಿನ, ಪ್ರತಿ ಕ್ಷಣವೂ ವೆಬ್​ಸೈಟ್​ನಲ್ಲಿ ಮಾಹಿತಿ ಅಪ್​ಲೋಡ್ ಮಾಡಲಾಗುತ್ತದೆ.

48 ಬಾರಿ ಪ್ರವಾಸ

ಮೋದಿ 2014ರಲ್ಲಿ ಪ್ರಧಾನಿ ಯಾದ ನಂತರ ಇದುವರೆಗೆ 48 ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಡಿ. 27ರಿಂದ 2 ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಭೂತಾನ್​ಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವ ಸಾಧ್ಯತೆ ಇದೆ. ಆದರೆ, ಈ ಆಹ್ವಾನ ಒಪ್ಪಿಕೊಂಡು ಪ್ರಧಾನಿ ಭೂತಾನ್​ಗೆ ತೆರಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಸ್ಟಾರ್ ಪ್ರಚಾರಕ

ಪ್ರಧಾನಿ ಮೋದಿ ಬಿಜೆಪಿ ಪಾಲಿಗೆ ಅತಿಮುಖ್ಯ ಚುನಾವಣಾ ಪ್ರಚಾರಕರಾಗಿದ್ದಾರೆ. 2019ರ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಹಿಂದಿ ಭಾಷಿಕ ಪ್ರಮುಖ ಮೂರು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ. ಈ ಸೋಲು ಲೋಕಸಭಾ ಚುನಾವಣೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಅವರು ಹೆಚ್ಚಿನ ರ್ಯಾಲಿಗಳನ್ನು ನಡೆಸಲಿದ್ದಾರೆ ಎನ್ನಲಾಗಿದೆ.

ಮೋದಿ ವಿದೇಶ ಪ್ರವಾಸ ಇಲ್ಲ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2019ರ ಜನವರಿಯಿಂದ ಏಪ್ರಿಲ್​ವರೆಗೆ ಯಾವುದೇ ವಿದೇಶ ಪ್ರವಾಸ ಕೈಗೊಳ್ಳದಿರಲು ನಿರ್ಧರಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯತ್ತ ಅವರು ಗಮನ ಕೇಂದ್ರೀಕರಿಸಲಿದ್ದಾರೆ.

2018ನೇ ಸಾಲಿನಲ್ಲಿ ಪ್ರಧಾನಿ ಮೋದಿ 14 ವಿದೇಶ ಪ್ರವಾಸ ಕೈಗೊಂಡಿದ್ದರು. ಅಕ್ಟೋಬರ್​ನಲ್ಲಿ ಆಸಿಯಾನ್ ಸಮಾವೇಶ ಹಿನ್ನೆಲೆಯಲ್ಲಿ ಜಪಾನ್, ಸಿಂಗಾಪುರಕ್ಕೆ ತೆರಳಿದ್ದರು. ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಸೋಲಿಹಾ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕಾಗಿ ಮಾಲ್ದೀವ್ಸ್​ಗೆ ಹಾಗೂ ಜಿ20 ಸಮಾವೇಶಕ್ಕಾಗಿ ನವೆಂಬರ್​ನಲ್ಲಿ ಅರ್ಜೆಂಟೀನಾಕ್ಕೆ ಭೇಟಿ ನೀಡಿದ್ದರು.