ಹುಬ್ಬಳ್ಳಿಯಲ್ಲಿ ಮೊಳಗಲಿದೆ ಮೋದಿ ರಣಕಹಳೆ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಇನ್ನೂ ಸಾಕಷ್ಟು ದೂರ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿ ಭಾನುವಾರ (ಫೆ.10) ಸಂಜೆ ಇಲ್ಲಿ ಆಯೋಜನೆಗೊಂಡಿದೆ. ರಾಜ್ಯದ ಹೆಬ್ಬಾಗಿಲು ಎಂದೇ ಗುರುತಿಸಲ್ಪಟ್ಟಿರುವ ಹುಬ್ಬಳ್ಳಿಯಿಂದಲೇ ಸಮಾವೇಶ ಆರಂಭಿಸುವುದರೊಂದಿಗೆ ಉತ್ತರ ಕರ್ನಾಟಕದಲ್ಲಿಯ ಗಟ್ಟಿ ನೆಲೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ.

ಧಾರವಾಡ, ಹಾವೇರಿ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬೀದರ್ ಹೀಗೆ ಉತ್ತರ ಕರ್ನಾಟಕದಲ್ಲಿ ಹಾಲಿ ಬಿಜೆಪಿ ಸಂಸದರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚಿಕ್ಕೋಡಿ, ಉಪಚುನಾವಣೆಯಲ್ಲಿ ಕೈತಪ್ಪಿದ ಬಳ್ಳಾರಿ, ರಾಯಚೂರು, ಕಲಬುರಗಿ ಹೀಗೆ ಬೆರಳೆಣಿಕೆಯ ಕಾಂಗ್ರೆಸ್ ಸಂಸದರಿದ್ದಾರೆ. ಜೆಡಿಎಸ್ ಈ ಭಾಗದಲ್ಲಿ ಗಟ್ಟಿ ನೆಲೆ ಹೊಂದಿಲ್ಲ.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ, ಈಗಿನ ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿವೆ ಎಂಬ ಭಾವನೆ ಜನರಲ್ಲಿದೆ. ಇದರ ಪ್ರಯೋಜನ ಪಡೆಯಲು ಬಿಜೆಪಿ ಸಜ್ಜಾಗಿದೆ. ಹೆದ್ದಾರಿಗಳ ಅಭಿವೃದ್ಧಿ ಸೇರಿ ಕೇಂದ್ರ ಸರ್ಕಾರದ ಅನೇಕ ಯೋಜನೆಗಳಲ್ಲಿ ಉತ್ತರ ಕರ್ನಾಟಕಕ್ಕೆ ಕಳೆದ ನಾಲ್ಕೂವರೆ ವರ್ಷದಲ್ಲಿ ಹಲವಾರು ರೀತಿಯ ಪ್ರಯೋಜನಗಳು ದೊರಕಿವೆ. ಇಲ್ಲಿ ಮೋದಿ ಹವಾ ಸ್ವಲ್ಪ ಜಾಸ್ತಿಯೇ ಇದೆ. ಹೀಗಾಗಿ ಜನರ ಮನಸ್ಸಿನ ಆಳಕ್ಕೆ ಮತ್ತಿಷ್ಟು ಇಳಿದರೆ, ಇರುವ ಕ್ಷೇತ್ರಗಳಲ್ಲಿ ಹೆಚ್ಚಿನ ಅಂತರದಿಂದ ಗೆಲ್ಲಬಹುದು. ಕಳೆದ ಸಲ ಕಾಂಗ್ರೆಸ್ ಪಾಲಾದ ಕ್ಷೇತ್ರಗಳಲ್ಲೂ ಕಮಲ ಅರಳಿಸಬಹುದು ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರ.

ಹುಬ್ಬಳ್ಳಿಯಲ್ಲಿ ಏರ್ಪಾಟಾಗಿರುವುದು ಧಾರವಾಡ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ (ಭಾಗಶಃ) ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ರ್ಯಾಲಿಯಾಗಿದ್ದು, ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಮುಂಬರುವ ಚುನಾವಣೆಗಾಗಿ ರಾಜ್ಯ ರಾಜಕೀಯದ ಮಹತ್ವದ ಸಭೆ ಇದಾಗಿರಲಿದೆ ಎನ್ನಲಾಗಿದೆ.

ಸ್ಥಳ, ಸಮಯ

ಹುಬ್ಬಳ್ಳಿ ಹೊರವಲಯದ ಗಬ್ಬೂರು ಬಳಿಯ ಕೆಎಲ್​ಇ ಸಂಸ್ಥೆ ಜಾಗದಲ್ಲಿ ಭಾನುವಾರ ಸಂಜೆ 5ಕ್ಕೆ ಸಮಾವೇಶ ಆರಂಭವಾಗಲಿದೆ. ಬೃಹತ್ ಶಾಮಿಯಾನ ಹಾಕಿದ್ದು, ಒಂದು ಲಕ್ಷದಷ್ಟು ಆಸನ ವ್ಯವಸ್ಥೆ ಮಾಡಲಾಗಿದೆ. ಆಸನ ಸಿಗದವರು ಎಲ್​ಇಡಿ ಪರದೆಯಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿದೆ.

ಕಾಂಗ್ರೆಸ್ ಆಕ್ಷೇಪ

ನರೇಂದ್ರ ಮೋದಿ ರ್ಯಾಲಿಗಾಗಿ ಕೇಂದ್ರ ಸರ್ಕಾರಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ. ಇದನ್ನು ವಿರೋಧಿಸಿ ಭಾನುವಾರ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷ ತಿಳಿಸಿದೆ.

ಕುತೂಹಲ ಕೆರಳಿಸಿರುವ ಭಾಷಣ

ಪ್ರತಿಪಕ್ಷಗಳ ನಡೆ-ನಿಲುವುಗಳನ್ನು ಟೀಕಿಸಿ, ತರಾಟೆಗೆ ತೆಗೆದು ಕೊಳ್ಳುವ ಪ್ರಧಾನಿ ಮೋದಿ ಅವರ ಹುಬ್ಬಳ್ಳಿ ಸಮಾವೇಶದ ಭಾಷಣವು ಕರ್ನಾಟಕದ ಸದ್ಯದ ರಾಜಕೀಯ ವಿದ್ಯಮಾನದ ಮೇಲೆ ಏನು ಪರಿಣಾಮ ಬೀರಬಹುದು ಎಂಬ ಕುತೂಹಲವಿದೆ. ಸಮ್ಮಿಶ್ರ ಸರ್ಕಾರ ಶುಕ್ರವಾರವಷ್ಟೇ ಮುಂಗಡಪತ್ರ ಮಂಡಿಸಿದೆ. ಉಭಯ ಪಕ್ಷಗಳ ಆಂತರಿಕ ಪೈಪೋಟಿ ಮತ್ತು ಭಿನ್ನಮತದಿಂದ ಸರ್ಕಾರ ಅಸ್ಥಿರವಾಗಿದೆ. ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಲು ಹೊಂಚು ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಿಎಂ ಕುಮಾರಸ್ವಾಮಿ ಆಡಿಯೊ ಟೇಪ್ ಬಿಡುಗಡೆ ಮೂಲಕ ಬಿಜೆಪಿಯವರ ನೈತಿಕ ಸ್ಥೈರ್ಯ ಕುಂದಿಸುವ ಪ್ರಯುತ್ನ ಮಾಡಿದ್ದಾರೆ. ಇಂಥ ಸಂಕೀರ್ಣ ಸಂದರ್ಭದಲ್ಲೇ ಏರ್ಪಾಟಾಗಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿಯವರು ಏನು ಮಾತಾಡಲಿದ್ದಾರೆ? ಪ್ರತಿಪಕ್ಷವನ್ನು ಹೇಗೆ ತಿವಿಯಲಿದ್ದಾರೆ ಎನ್ನುವುದು ಆಸಕ್ತಿಯ ಸಂಗತಿ. ಮೋದಿ ಅವರು ಮೊಳಗಿಸುವ ಕಹಳೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆಯೆ ಎನ್ನುವುದೂ ಕುತೂಹಲಕ್ಕೆ ಕಾರಣವಾಗಿದೆ.

ಶಿಲಾನ್ಯಾಸ, ದೇಶಪಾಂಡೆಗೆ ಜವಾಬ್ದಾರಿ

ಸಮಾವೇಶ ಸ್ಥಳದ ಪಕ್ಕದಲ್ಲೇ ಸರ್ಕಾರಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ. ಧಾರವಾಡ ಐಐಟಿ ಮತ್ತು ಐಐಐಟಿ ಕಟ್ಟಡಕ್ಕೆ ಶಿಲಾನ್ಯಾಸ, ವಸತಿ ಯೋಜನೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ನವನಗರದಲ್ಲಿಯ ಗ್ಯಾಸ್ ಪೈಪ್​ಲೈನ್ ಉದ್ಘಾಟನೆ, ಕಿಮ್್ಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಯನ್ನು ಪ್ರಧಾನಿ ಅಲ್ಲಿಂದಲೇ ನೆರವೇರಿಸಲಿದ್ದಾರೆ. ಪ್ರಧಾನಿ ಬರಮಾಡಿಕೊಳ್ಳುವ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಾಗೂ ಮೋದಿ ಬೀಳ್ಕೊಡುವ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಗೆ ವಹಿಸಿದ್ದಾರೆ.

ಹುಬ್ಬಳ್ಳಿಗೆ ಬಂದ ಪ್ರಧಾನಿ ಕಾರ್

ಮೋದಿ ಅವರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಮಾವೇಶ ಸ್ಥಳಕ್ಕೆ ಕರೆದೊಯ್ಯಲು ವಿಶೇಷ ಬುಲೆಟ್​ಪ್ರೂಫ್ ಕಾರುಗಳು ನಗರ ತಲುಪಿವೆ. ಎಸ್​ಪಿಜಿ ಅಧಿಕಾರಿಗಳು ರೈಲು ಮೂಲಕ ಕಾರುಗಳನ್ನು ತರಿಸಿಕೊಂಡಿದ್ದು, ಶನಿವಾರ ಸಂಜೆ ಟ್ರಯಲ್ ರನ್ ನಡೆಸಿದರು. ಸಂಪೂರ್ಣ ಗುಂಡು ನಿರೋಧಕ, ವಿಶೇಷ ಭದ್ರತಾ ವ್ಯವಸ್ಥೆ ಉಳ್ಳ ಅತ್ಯಾಧುನಿಕ ಕಾರು ಇವಾ ಗಿದ್ದು, ವಿಮಾನ ನಿಲ್ದಾಣದಿಂದ 9 ಕಿಮೀ. ದೂರವಿರುವ ಸಮಾವೇಶ ಸ್ಥಳಕ್ಕೆ ಝೀರೋ ಟ್ರಾಫಿಕ್​ನಲ್ಲಿ ಪ್ರಧಾನಿ ತೆರಳಲಿದ್ದಾರೆ.

ಪ್ರಧಾನಿ ಹತ್ಯೆಗೆ ಬೆದರಿಕೆ ಪತ್ರ!

ಹುಬ್ಬಳ್ಳಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡುವುದಾಗಿ ಹುಸಿ ಬೆದರಿಕೆ ಪತ್ರವೊಂದನ್ನು ದುಷ್ಕರ್ವಿುಗಳು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ರವಾನಿಸಿದ್ದಾರೆ. ಸಾಮಾನ್ಯ ಪೋಸ್ಟ್​ಕಾರ್ಡ್ ನಲ್ಲಿ ಪತ್ರ ಬರೆದಿದ್ದು, ಬರವಣಿಗೆ ಸ್ಪಷ್ಟವಾಗಿಲ್ಲ. ಕಾರ್ಯಕ್ರಮದಲ್ಲಿ ಪ್ರಧಾನಿ ಹತ್ಯೆ ಮಾಡುವುದಾಗಿ ತಿಳಿಸಲಾಗಿದೆ. ಒಂದು ಕಡೆ ನಾವು ಪಾಕಿಸ್ತಾನದ ಮುಜಬುಲ್ ಹುಲೆ ಸಂಘಟನೆ ಸದಸ್ಯರು ಎಂದು ಪತ್ರದಲ್ಲಿ ಉಲ್ಲೇಖಿಸ ಲಾಗಿದ್ದು, ಮತ್ತೊಂದೆಡೆ ರೈತರಿಗಾಗಿ ಮೋದಿ ಏನೂ ಮಾಡಿಲ್ಲ. ಕೇವಲ ವಿದೇಶ ಪ್ರವಾಸ ಮಾಡಿದ್ದಾರೆ. ಅದಕ್ಕಾಗಿ ಹತ್ಯೆಗೈಯುತ್ತೇವೆ ಎಂದು ಬರೆಯಲಾಗಿದೆ.

ಹಾವೇರಿಯಿಂದ ಬಂದ ಪತ್ರ

ಫೆ.6ರಂದು ಹಾವೇರಿಯಿಂದ ಪತ್ರ ರವಾನೆಯಾಗಿದ್ದು, ಫೆ.8ಕ್ಕೆ ಧಾರವಾಡ ಎಸ್​ಪಿ ಕಚೇರಿ ತಲುಪಿದೆ. ಫೆ.9ರಂದು ಧಾರವಾಡ ಎಸ್​ಪಿ ‘ಐಪಿಸಿ ಕಲಂ 506’ ಅಡಿ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಐವರು ಅಧಿಕಾರಿಗಳ ತಂಡ ರಚಿಸಿದ್ದಾರೆ. ಹಾವೇರಿಗೆ ತೆರಳಿರುವ ತಂಡ ಪತ್ರ ಬರೆದವರ ಪತ್ತೆಗೆ ಬಲೆ ಬೀಸಿದೆ ಎಂದು ಪೊಲೀಸ್ ಮೂಲಗಳು ‘ವಿಜಯವಾಣಿ’ಗೆ ತಿಳಿಸಿವೆ.