ಮೋದಿ ಸರ್ಕಾರದ್ದು ಖಾಲಿ ಭರವಸೆಗಳ ವೀರಚರಿತೆ: ಟಿಡಿಪಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಖಾಲಿ ಭರವಸೆಗಳನ್ನಷ್ಟೇ ನೀಡುತ್ತಿದ್ದು, ಅದು ಖಾಲಿ ಭರವಸೆಗಳ ವೀರಚರಿತೆ ಇದ್ದಂತೆ ಎಂದು ತೆಲುಗು ದೇಶಂ ಪಾರ್ಟಿಯ ಮುಖಂಡ ಜಯದೇವ್‌ ಗಲ್ಲಾ ಕಿಡಿಕಾರಿದ್ದಾರೆ.

ಕಲಾಪ ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರ ಪ್ರದೇಶದಲ್ಲಿ ಪ್ರಚಾರ ಕೈಗೊಂಡಿದ್ದಾಗ ‘ಕಾಂಗ್ರೆಸ್‌ ತಾಯಿಯನ್ನು ಕೊಂದು ಮಗುವನ್ನು ಉಳಿಸುವ ಕೆಲಸ ಮಾಡುತ್ತಿದೆ. ಆದರೆ ನಾನು ತಾಯಿಯನ್ನು ಕೂಡ ರಕ್ಷಿಸುತ್ತೇನೆ ಎಂದಿದ್ದರು. ಅದರಂತೆ ಆಂಧ್ರದ ಜನರು ತಮ್ಮ ತಾಯಿಯನ್ನು ರಕ್ಷಿಸಿಕೊಳ್ಳಲು ಬರೋಬ್ಬರಿ 4 ವರ್ಷ ಕಾಯುತ್ತಿದ್ದರು. ಆದರೆ ಮೋದಿ-ಅಮಿತ್‌ ಷಾ ಆಳ್ವಿಕೆಯಲ್ಲಿ ಇದೆಲ್ಲ ಖಾಲಿ ಭರವಸೆಗಳಾಗಿವೆ ಎಂದರು.

ವಿರೋಧ ಪಕ್ಷಗಳು ಒಟ್ಟುಗೂಡಿ ಕೇಂದ್ರದ ವಿರುದ್ಧ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಗೋ ರಕ್ಷಕರ ಹೆಸರಿನಲ್ಲಿ ಹಲ್ಲೆ, ಸಮೂಹ ಸನ್ನಿ ಸೇರಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಸೇರಿ ದಲಿತರ ಮೇಲಿನ ದೌರ್ಜನ್ಯಗಳನ್ನಿಟ್ಟುಕೊಂಡು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿವೆ.

ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ನಂತೆಯೇ ಬಿಜೆಪಿಗೂ ಕೂಡ ತಕ್ಕ ಪಾಠ ಕಲಿಸಲಾಗುತ್ತದೆ. ಪ್ರಧಾನಿಯವರು ಆಂಧ್ರದ ಜನತೆಯೊಂದಿಗೆ ಹೊಸ ರಾಗದಲ್ಲಿ ಹಾಡಲು ಹೊರಟಿದ್ದಾರೆ. ಆದರೆ, ಇದನ್ನೆಲ್ಲ ಗಮನಿಸುತ್ತಿರುವ ಜನತೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪ್ರತಿಫಲವನ್ನೇ ನೀಡಲಿದ್ದಾರೆ ಎಂದು ತಿಳಿಸಿದರು.

ಟಿಡಿಪಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ಟಿಡಿಪಿ ಪ್ರಧಾನಮಂತ್ರಿ ಕೇವಲ ಖಾಲಿ ಭರವಸೆಗಳನ್ನು ನೀಡುತ್ತಾರೆ ಎಂದು ದೂರಿದ್ದಕ್ಕೆ ಸಿಡಿದೆದ್ದ ಕೆಲ ಬಿಜೆಪಿ ನಾಯಕರು ಆಕ್ರಮಣಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಕೈಗೊಂಡರು.
ಈ ವೇಳೆ ಸದನದಲ್ಲಿ ಎದ್ದು ನಿಂತು ಪ್ರತಿಭಟನೆ ಕೈಗೊಂಡ ಬಿಜೆಪಿ ನಾಯಕರು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿ ಟಿಡಿಪಿ ಬಳಸಿರುವ ಪದವನ್ನು ಕಡತದಿಂದ ತೆಗೆದುಹಾಕುವಂತೆ ಒತ್ತಾಯಿಸಿದರು. (ಏಜೆನ್ಸೀಸ್)