More

    LIVE| ‘ಪರೀಕ್ಷಾ ಪೆ ಚರ್ಚಾ’: ಶಿಸ್ತು ಅಳವಡಿಸಿಕೊಳ್ಳಿ, ಪಾಲಕರ ಜತೆಗೆ ಬ್ಲೇಮ್ ಗೇಮ್ ಬೇಡ..

     ಪರೀಕ್ಷಾ ಕಾಲ ಹತ್ತಿರ ಬಂದಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿ ಹಲವು ಪರೀಕ್ಷೆಗಳು ನಡೆಯುವ ಕಾಲವಿದು. ವಿದ್ಯಾರ್ಥಿಗಳು ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ ಅವರ ಸಂದೇಹಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ನಡೆಸಿಕೊಡುವ ಪರೀಕ್ಷಾ ಪೆ ಚರ್ಚಾದ ಮೂರನೇ ಆವೃತ್ತಿ ಈಗ ಶುರುವಾಗಿದೆ.  ಆಯ್ದ ವಿದ್ಯಾರ್ಥಿಗಳ ಜತೆಗಿನ ಈ ಸಂವಹನ ದೆಹಲಿಯ ತಲಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ತಲಕಟೋರಾ ಸ್ಟೇಡಿಯಂಗೆ ಆಗಮಿಸಿದ್ದು, ಅಲ್ಲಿ ವಿದ್ಯಾರ್ಥಿಗಳ ಚಿತ್ರಪ್ರದರ್ಶನ ವೀಕ್ಷಿಸುತ್ತಿದ್ದಾರೆ. ದೇಶದ ವಿವಿಧ ಮೂಲೆಗಳಿಂದ ಆಯ್ಕೆಯಾದ 9 ಮತ್ತು 10ನೇ ತರಗತಿಯ ಸುಮಾರು 2 ಸಾವಿರ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕದಿಂದ ವಿವಿಧ ಶಾಲೆಗಳ ಒಟ್ಟು 42 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳ ಆಯ್ಕೆಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ದೂರದರ್ಶನದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವಿದೆ.

    01.12 PM: ಕಂಫರ್ಟ್ ಝೋನ್​ ನಿಂದ ನಾವು ಯಾವಾಗ ಹೊರಗೆ ಬರುತ್ತೇವೆಯೋ ಆಗ ನಾವು ಸವಾಲುಗಳನ್ನು ಸ್ವೀಕರಿಸಲು ಸನ್ನದ್ಧರಾಗುತ್ತೇವೆ. ಅಲ್ಲದೆ, ನಾವು ಮಾಡಬಲ್ಲೆವಾ ಅಥವಾ ಸಾಧ್ಯವಿಲ್ಲವೇ ಎಂಬುದೂ ಮನದಟ್ಟಾಗುತ್ತದೆ. ಹೀಗಾಗಿ ಕಂಫರ್ಟ್​ ಝೋನ್ ನಿಂದ ಹೊರಗೆ ಬನ್ನಿ ಎಂದು ಪ್ರಧಾನಿ ಹೇಳಿದರು.  

     

    01.07 PM: ನೀವು ಏನು ಮಾಡಬೇಕು ಎಂದು ನಿಶ್ಚಯಿಸಿರುತ್ತೀರೋ ಅದರ ಕಡೆಗೇ ಗಮನಹರಿಸಿ. ಆಗ ನಿಮ್ಮ ಮನಸ್ಸಿನಲ್ಲೊಂದು ಸ್ಪಷ್ಟತೆ ಮೂಡುತ್ತದೆ. ಪರೀಕ್ಷೆ ವಿಷಯದಲ್ಲೂ ಅಷ್ಟೇ. ಸ್ಟ್ರೆಸ್ ತೆಗೆದುಕೊಂಡರೆ ಅದು ಕಠಿಣವೆನಿಸುತ್ತದೆ. ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿ, ಯಶಸ್ಸನ್ನು ಗಳಿಸಿ ಎಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

    12.58 PM: ಪರೀಕ್ಷೆಗೆ ಬರೆಯುವಾಗ ಸರಳ ಪ್ರಶ್ನೆಗೆ ಮೊದಲು ಉತ್ತರಿಸಬೇಕು. ಈ ರೀತಿ ಮಾಡುವುದರಿಂದ ಉಳಿದ ಪ್ರಶ್ನೆಗಳೂ ಸುಲಭವಾಗುತ್ತವೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಕಲಿಕೆಗೆ ಸಂಬಂಧಿಸಿ ಮನೆಯ ಸದಸ್ಯರ ಜತೆಗೆ ಯಾವುದೇ ಕಾರಣಕ್ಕೂ ಬ್ಲೇಮ್ ಗೇಮ್ ಆಡಬೇಡಿ. ನಿಮಗೆ ನೀವೇ ಶಿಸ್ತು ಅಳವಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. 

    12.47 PM: ಓದುವುದಕ್ಕೆ ಯಾವ ಸಮಯ ಬೆಸ್ಟ್ ಮತ್ತು ಟೈಮ್ ಮ್ಯಾನೇಜ್ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿಯವರ ಉತ್ತರ- ನಾವು ನಮ್ಮ ಕುಟುಂಬದ ಸದಸ್ಯರ ಬಳಿ ಮಾತ್ರ ಕೇಳುವ ಪ್ರಶ್ನೆ ಇದು. ಖುಷಿ ಎನಿಸುತ್ತಿದೆ ಈ ಪ್ರಶ್ನೆ ಕೇಳಿ. ಬೆಳ್ಳಂಬೆಳಗ್ಗೆಯೇ ಎದ್ದೇಳಿ. ಅದು ಯಾವುದೇ ಕೆಲಸಕ್ಕೂ ಪ್ರಶಸ್ತವಾದ ಸಮಯ. ಎಲ್ಲದಕ್ಕೂ ಮಿಗಿಲಾಗಿ ನಿಮಗೆ ಯಾವ ಸಮಯ ಅನುಕೂಲವೋ ಹಾಗೆಯೇ ಮಾಡಿ. 

     

    12.40 PM: ಸಿಕ್ಕಾಪಟ್ಟೆ ಸ್ಪರ್ಧೆ ಇರುವ ಈಗಿನ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಖಿನ್ನತೆ ಜಾರುವುದು ಸಾಮಾನ್ಯ. ಇದರಿಂದ ಹೊರಬರುವುದು ಹೇಗೆ? ಎಂಬ ಪ್ರಶ್ನೆಗೆ ಪ್ರಧಾನಿ ಉತ್ತರಿಸಿದ್ದು ಹೀಗೆ-  ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವುದನ್ನು ಮಕ್ಕಳಿಗೆ ಕಲಿಸಿ, ಅವರಿಗೆ ಈ ವಿಚಾರವಾಗಿ ಉತ್ತೇಜನ ಕೊಡಿ. ಹಾಗಂತ ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಯಾಕೆಂದರೆ ಸ್ಪ್ರಿಂಗ್ ನೋಡಿದ್ದೀರಲ್ಲ. ಅದಕ್ಕೊಂದು ಸಾಮರ್ಥ್ಯ ಇರುತ್ತದೆ. ಹೆಚ್ಚು ಒತ್ತಡ ಹಾಕಿದರೆ ಅದು ತನ್ನ ಸಾಮರ್ಥ್ಯವನ್ನೇ ಕಳೆದುಕೊಳ್ಳಬಹುದು. ಈ ಬಗ್ಗೆ ಪಾಲಕರು ಎಚ್ಚರವಹಿಸಬೇಕು.

    12.35 PM:  ವಿದ್ಯಾರ್ಥಿಗಳ ಹಕ್ಕು ಮತ್ತು ಕರ್ತವ್ಯಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ನಾವು ನಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಮಾಡಿದರೆ ನಮ್ಮ ಹಕ್ಕುಗಳನ್ನು ಕೇಳಬೇಕಾದ ಸಂದರ್ಭ ಎದುರಾಗುವುದಿಲ್ಲ. ನಾವು ನಮ್ಮ ಕರ್ತವ್ಯಗಳನ್ನು ಸರಿಯಾಗಿ ಮಾಡುತ್ತಿದ್ದೇವೆಯೇ ಎಂಬ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು. ದೇಶಕ್ಕಾಗಿ ನಾವೇನು ಮಾಡಬಹುದು ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು. ಅದರಿಂದ ಅವರಿಗಷ್ಟೇ ಅಲ್ಲ ದೇಶದ ಭವಿಷ್ಯಕ್ಕೂ ಉಪಯೋಗವಾದೀತು.   ಅರುಣಾಚಲ ಪ್ರದೇಶ ಎಂಬ ರಾಜ್ಯದಲ್ಲಿ ಮಾತ್ರವೇ ಜನರು ಪರಸ್ಪರ ಎದುರಾದಾಗ ಜೈ ಹಿಂದ್ ಎಂದು ಹಾರೈಸಿಕೊಳ್ಳುತ್ತಾರೆ. ಇದು ಬಹಳ ವಿರಳವಾದ ಹಾರೈಕೆಯ ರೂಢಿ. ಇಂತಹ ಈಶಾನ್ಯ ಭಾರತಕ್ಕೊಮ್ಮೆ ನೀವೆಲ್ಲರೂ ಭೇಟಿ ನೀಡಬೇಕು. 

     

    12.26 PM: ಭಾರತ ಯಾವಾಗ 100ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತದೋ ಆಗ ಇಂದಿನ ವಿದ್ಯಾರ್ಥಿಗಳು ನಾಯಕರು, ನೇತರಾರಾಗಿ ಬೆಳೆದಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ. 

    12.16 PM: ವಿದ್ಯಾರ್ಥಿಗಳು ತಮ್ಮ ದಿನಚರಿಯಲ್ಲಿ ಒಂದೆರಡು ಗಂಟೆ ಹೊತ್ತು ‘technology – free hours’ (ಮೊಬೈಲ್, ಟಿವಿ ಬಿಟ್ಟು ಕುಳಿತುಕೊಳ್ಳುವುದು) ಅಳವಡಿಸಿಕೊಂಡು ಕುಟುಂಬದ ಸದಸ್ಯರ ಜತೆಗೆ ಮಾತನಾಡುವುದು, ಅವರ ಜತೆ ವಿವಿಧ ಚಟುವಟಿಕೆಗಳಲ್ಲಿ ತೊಡಗುವುದನ್ನು ಮಾಡಬೇಕು ಎಂದ ಪ್ರಧಾನಿ. 

     

    12.09 PM: ನಮ್ಮ ಬದುಕು ಈಗ ಟೆಕ್ ಡ್ರಿವನ್ ಆಗಿದೆ. ಹೀಗಾಗಿ ಟೆಕ್ನಾಲಜಿಯ ಭೀತಿಯಿಂದ ಹೊರಬರುವುದು ಹೇಗೆ ಎಂದು ನೀವು ಕೇಳಿದರೆ, ಟೆಕ್ನಾಲಜಿ ಬಗ್ಗೆ ಭಯ ಬೇಡ. ಅವುಗಳನ್ನು ಬಳಸುವುದನ್ನು ಅಭ್ಯಾಸ ಮಾಡಿ. ಅದು ನಿಮ್ಮನ್ನು ಆಳುವಂತೆ ಅಡಿಕ್ಟ್ ಆಗಬೇಡಿ. ಟೆಕ್ನಾಲಜಿ ಮೂಲಕ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. 

     

    12.03 PM: ಪಠ್ಯೇತರ ಚಟುವಟಿಕೆ ಮತ್ತು ಪಠ್ಯ ಇವುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹೇಗೆ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ- ಪ್ರಧಾನಿ ನರೇಂದ್ರ ಮೋದಿಯವರ ಉತ್ತರ ಹೀಗಿತ್ತು:  ನಮ್ಮ ಅನುಭವಗಳ ಮೂಲಕ ನಾವು ಕಲಿಯಬೇಕು ಮತ್ತು ಕಲಿಯುವುದನ್ನು ಪ್ರಯತ್ನಿಸಬೇಕು. ಯಾರೊಬ್ಬರೂ ರೋಬಾಟ್ ತರ ಬದುಕುವುದು ಸಾಧ್ಯವಿಲ್ಲ. ನಾವು ಹಿಂದಿನ ಕಾಲದಲ್ಲಿ ಬದುಕುತ್ತಾ ಇಲ್ಲ. ಇಂದು ಅವಕಾಶಗಳ ಮಹಾಪೂರವೇ ನಮ್ಮ ಎದುರಿಗಿದೆ. ಹೀಗಾಗಿ ನಾವು ಯಾವಾಗಲೂ ಪ್ರಯತ್ನಿಸುತ್ತಿರಬೇಕು. ಅಂಕ ಗಳಿಕೆ ವಿಚಾರದಲ್ಲೊಂದು ಸಾಮಾಜಿಕ ದೋಷ ಇದೆ. ಮಕ್ಕಳ ಮೇಲೆ ಈ ವಿಚಾರವಾಗಿ ಪಾಲಕರು ಒತ್ತಡ ಹೇರುತ್ತಲೇ ಇರುತ್ತಾರೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಅವರು ಮಾತನಾಡಲಾರಂಭಿಸಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕೂಡಾ ಪ್ರಾಮುಖ್ಯ ಎಂಬುದನ್ನು ಮರೆಯಬೇಡಿ. 

     

    11.51 AM: ಪಾಲಕರಿಗೊಂದು ಕಿವಿಮಾತು: ಪರೀಕ್ಷೆಗಳು, ಪ್ರವೇಶ ಪರೀಕ್ಷೆಗಳಲ್ಲಿ ಅಂಕ ಗಳಿಕೆಯೊಂದೇ ಮುಖ್ಯವಾಗಬಾರದು. ಹೀಗಾಗಿ ಅಂಕಗಳಿಕೆಗಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬೇಡಿ. ಈ ಜಗತ್ತು ಅವಕಾಶಗಳೊಂದಿಗೆ ತುಂಬಿ ತುಳುಕುತ್ತಿದೆ. ಪಾಲಕರು ಇದನ್ನು ಅರಿತುಕೊಳ್ಳಬೇಕು. ಶಾಲಾ ಪರೀಕ್ಷೆಗಳಿಗಷ್ಟೇ ಮಕ್ಕಳನ್ನು ಸೀಮಿತಗೊಳಿಸಬೇಡಿ. ಪರೀಕ್ಷೆಯೊಂದೇ ಬದುಕಲ್ಲ ಎಂಬ ಮಾತು ನೆನಪಿಡಿ

    11.47 AM: ಕೋಲ್ಕತದಲ್ಲಿ 2001ರಲ್ಲಿ ನಡೆದ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್​ ಒಮ್ಮೆ ನೆನಪಿಸಿಕೊಳ್ಳಿ. ಅನಿಲ್ ಕುಂಬ್ಳೆ ಆ ಪಂದ್ಯದ ವೇಳೆ ಗಾಯಗೊಂಡಿದ್ದರು. ಆದಾಗ್ಯೂ, ಅವರು ಆಟ ಆಡಿದರು. ಆ ಪಂದ್ಯದಲ್ಲಿ ಭಾರತ ಗೆಲುವನ್ನು ದಾಖಲಿಸಿತು. ಆ ಬಳಿಕ ಅವರು ಹೇಳಿದ್ದೇನು ಗೊತ್ತೆ- ಸಮಸ್ಯೆ, ತೊಂದರೆಗಳನ್ನು ನಾವು ಹೇಗೆ ಪರಿಗಣಿಸುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಭಾವನೆಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು ಎಂಬ ಸಂದೇಶದ ಈ ಮಾತನ್ನು ನೆನಪಿಟ್ಟುಕೊಳ್ಳಬೇಕು. 

     
    11.40 AM:  ಚಂದ್ರಯಾನ 2ರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಚಂದ್ರಯಾನ2ರ ಸೋಲಿನಿಂದ ನಾನೂ ಕಂಗೆಟ್ಟಿದ್ದೆ. ಆದರೆ, ನಾನು ಸೈಂಟಿಸ್ಟ್​ಗಳ ಬಳಿ ಹೋದಾಗ ಅವರನ್ನು ಹುರಿದುಂಬಿಸಿದೆ. ನಮ್ಮ ವೈಫಲ್ಯ, ಸೋಲುಗಳಿಂದ ಪಾಠವನ್ನು ಕಲಿತುಕೊಂಡು ಯಶಸ್ಸಿನೆಡೆಗೆ ಸಾಗಬೇಕು. ಸೋಲುಗಳು ನಮ್ಮ ಬದುಕಿನ ಒಂದು ಭಾಗ ಎಂಬುದನ್ನು ನಾವು ಮರೆಯಬಾರದು. 

    11.37 AM: ಬೋರ್ಡ್ ಪರೀಕ್ಷೆ ಸಂದರ್ಭದಲ್ಲಿ ಯಾವುದೇ ರೀತಿಯಲ್ಲೂ ನರ್ವಸ್ ಅಥವಾ ಅಪ್​ಸೆಟ್ ಆಗಬಾರದು ಎಂದ ಪ್ರಧಾನಿ ನರೇಂದ್ರ ಮೋದಿ, ವೈಫಲ್ಯ ಮತ್ತು ನಿರಾಶೆ ಕುರಿತು ಮಾತನಾಡಿದರು. 

    11.32 AM: ಇತ್ತೀಚಿನ ದಿನಮಾನದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್​ನಲ್ಲಿ ಇರುವಂಥದ್ದು #Without Filter ಸಂಭಾಷಣೆಗಳು. ಹೀಗಾಗಿ ನಾವು without filter ಸಂಭಾಷಣೆಯಲ್ಲಿ ತೊಡಗಿಕೊಳ್ಳೋಣ ಎಂದರು ಪ್ರಧಾನಿ ನರೇಂದ್ರ ಮೋದಿ. 

    11.29 AM:  ಸಾಮಾನ್ಯವಾಗಿ ನಾನು ಬಹಳಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಆದರೆ, ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ನನ್ನ ಹೃದಯಕ್ಕೆ ಹತ್ತಿರವಾದದು. ನಾನು ಇದರಲ್ಲಿ ಬಹಳ ಖುಷಿಯಿಂದ ಪಾಲ್ಗೊಳ್ಳುತ್ತೇನೆ. ಪ್ರತಿಭಾವಂತ, ಸೃಜನಶೀಲ ವಿದ್ಯಾರ್ಥಿಗಳ ಜತೆಗೆ ಸಂವಹನ ನಡೆಸುವುದು ನನಗೆ ಖುಷಿ ಕೊಡುತ್ತದೆ ಎಂದರು ಪ್ರಧಾನಿ. 

    11.25 AM: ಬಹು ನಿರೀಕ್ಷಿತ ಪರೀಕ್ಷಾ ಪೆ ಚರ್ಚಾ 2020 ಕಾರ್ಯಕ್ರಮ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ. ಹೊಸ ದಶಕದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಮಾತು ಆರಂಭಿಸಿದ ಪ್ರಧಾನಿ. 

    11.20 AM: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಬೆಳವಣಿಗೆ ಸಾಕಷ್ಟು ಉನ್ನತಿಗೇರಿದೆ. ಶಾಲಾ ಸಿಲೆಬೆಸ್​ನಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಿದ ಮೊಟ್ಟ ಮೊದಲ ದೇಶ ಭಾರತ ಎಂದೂ ಸಚಿವ ರಮೇಶ್ ಪೋಖ್ರಿಯಾಲ್ ನಿಶಂಕ್ ಹೇಳಿದರು. 

    11.16 AM:  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಂಕ್ ವೇದಿಕೆಗೆ ಆಗಮಿಸಿದರು. ಕಳೆದ ವರ್ಷದ ಪರೀಕ್ಷಾ ಪೆ ಚರ್ಚೆಗೆ ಹೋಲಿಸಿದರೆ ಈ ಬಾರಿ 2.5 ಪಟ್ಟು ಹೆಚ್ಚು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು ಎಂದು ಖುಷಿಯಿಂದ ಹೇಳಿದರು. 

    11.05 AM: ತಲಕಟೋರಾ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳು ರಚಿಸಿರುವ ಪೇಂಟಿಂಗ್ಸ್, ಆರ್ಟ್​ ವರ್ಕ್ಸ್​ ವೀಕ್ಷಿಸುತ್ತಿರುವ ಪ್ರಧಾನಿ. ಪ್ಲಾಸ್ಟಿಕ್ ನಿಷೇಧ, ಫಿಟ್ ಇಂಡಿಯಾ ಅಭಿಯಾನ, ಜಲ ಸಂರಕ್ಷಣೆ ಸೇರಿ ಹಲವು ವಿಷಯಗಳ ಚಿತ್ರ ಪ್ರದರ್ಶನ. ವಿದ್ಯಾರ್ಥಿಗಳಿಂದ ಪ್ರಧಾನಿಗೆ ವಿವರಣೆ. 

    11.00 AM: ತಲಕಟೋರಾ ಸ್ಟೇಡಿಯಂಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ. ಪರೀಕ್ಷಾ ಪೆ ಚರ್ಚಾ 2020 ಕಾರ್ಯಕ್ರಮದ ವಿದ್ಯಾರ್ಥಿಗಳ ಜತೆಗೆ ಸಂವಾದಕ್ಕೆ ಅಣಿಯಾಗಿದೆ ವೇದಿಕೆ. 

    10.43 AM: ತಲಕಟೋರಾ ಸ್ಟೇಡಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಗಮನಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿ, ಶಿಕ್ಷಕ, ಪಾಲಕರ ಸಮೂಹ.  

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts