ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ 69ನೇ ಹುಟ್ಟುಹಬ್ಬವನ್ನು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸುವ ಮೂಲಕ ಆಚರಿಸಿದರು.

ದೇಶಾದ್ಯಂತ ಕೇಂದ್ರ ಸರ್ಕಾರದ ವಿವಿಧ ಸಚಿವರು, ರಾಜ್ಯ ಬಿಜೆಪಿ ಘಟಕಗಳು ಸೇವಾ ದಿನದ ಮೂಲಕ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿದರೆ ಮೋದಿ ಮಾತ್ರ ಸರಳವಾಗಿ ಶಾಲಾ ವಿದ್ಯಾರ್ಥಿಗಳೊಂದಿಗೆ ದಿನ ಕಳೆದರು. ವಾರಾಣಸಿಯ ನರೂರ್ ಹಾಗೂ ಕಾಶಿ ವಿದ್ಯಾಪೀಠ ಶಾಲೆಯ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ಪ್ರಧಾನಿ ಮೋದಿ ಜತೆ ಧೈರ್ಯವಾಗಿ ಮಾತನಾಡಿದ ಮಕ್ಕಳು ಹುಟ್ಟುಹಬ್ಬ ಶುಭಾಶಯದ ಪತ್ರ ನೀಡಿದರು. ಆದರೆ ಮೋದಿ ಮಾತ್ರ ಹುಟ್ಟುಹಬ್ಬದ ಪ್ರಸ್ತಾಪವನ್ನೇ ಮಾಡದೆ ವಿಶ್ವಕರ್ಮ ಜಯಂತಿ ಶುಭಾಶಯ ಕೋರಿ, ಕೌಶಲ್ಯ ಅಭಿವೃದ್ಧಿಯ ಮಹತ್ವವನ್ನು ಸಾರಿದರು.

ಇದಕ್ಕೂ ಮುನ್ನ ಇತ್ತೀಚೆಗಷ್ಟೆ ಗೌರವ ಭತ್ಯೆ ಹೆಚ್ಚಳದ ಘೋಷಣೆಯ ಲಾಭ ಪಡೆದಿದ್ದ ಸಾವಿರಾರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರಧಾನಿಯನ್ನು ಸ್ವಾಗತಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಕೆಲ ನಿಮಿಷಗಳ ಕಾಲ ಅವರೊಂದಿಗೂ ಮೋದಿ ಮಾತನಾಡಿದ್ದು ವಿಶೇಷ. ಹುಟ್ಟುಹಬ್ಬವನ್ನು ನೆಪವನ್ನಾಗಿಸಿಕೊಂಡು ವಾರಾಣಸಿಗೆ ಎರಡು ದಿನಗಳ ಪ್ರವಾಸವನ್ನು ಮೋದಿ ಕೈಗೊಂಡಿದ್ದಾರೆ. ಎರಡನೇ ದಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ದೇವೇಗೌಡರಿಂದ ಶುಭಾಶಯ ಪತ್ರ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶುಭಾಶಯ ಕೋರಿದ್ದಾರೆ. ಪ್ರಧಾನಿಗೆ ಪತ್ರ ಬರೆದಿರುವ ದೇವೇಗೌಡರು, ದೇಶಸೇವೆ ಗೈಯುವ ನಿಮ್ಮ ಸಮರ್ಪಣೆ ಹಾಗೂ ಉತ್ಸಾಹವನ್ನು ಭಗವಂತ ಇಮ್ಮಡಿಗೊಳಿಸಲೆಂದು ನಿಮ್ಮ 69ನೇ ಜನ್ಮದಿನದ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಸಂವಾದದಲ್ಲಿ ಹೇಳಿದ್ದು..

# ವಿದ್ಯಾರ್ಥಿಗಳು ಎಂದೂ ಹೆದರಬಾರದು, ಹೆದರಿಕೆ ಎನ್ನುವ ವಿಚಾರವನ್ನು ಮನಸಿನಿಂದ ತೆಗೆದು ಎಸೆದು ಬಿಡಬೇಕು. ಗಾಂಧೀಜಿ ಸಣ್ಣವರಿದ್ದಾಗ ಹೆದರುತ್ತಿದ್ದರು. ಆದರೆ ನಂತರ ಭಯಗೊಂಡಾಗಲೆಲ್ಲ ತಾಯಿ ಸಲಹೆ ಮೇರೆಗೆ ರಾಮ ನಾಮ ಸ್ಮರಣೆ ಮಾಡುತ್ತಿದ್ದರು.

# ಕತ್ತಲಿಗೆ ಹೋದಾಗಲೆಲ್ಲ ರಾಮನಾಮ ಸ್ಮರಣೆ ಮಾಡಿ. ಪಾಠದ ಜತೆಗೆ ಆಟಕ್ಕೂ ಆದ್ಯತೆ ನೀಡಿ. ಮನೆ, ಶಾಲೆಯ ಕೊಠಡಿಯಿಂದ ಹೊರ ಹೋಗಿ ಆಟವಾಡಿ. ಇದು ನಿಮ್ಮ ಭವಿಷ್ಯ ರೂಪಿಸಲಿದೆ.ಪ್ರಶ್ನಿಸಲು ಎಂದೂ ಭಯಪಡಬೇಡಿ. ಕಲಿಕೆಗೆ ಪ್ರಶ್ನೆಯೇ ಮೊದಲ ಮೆಟ್ಟಿಲು.

# ನವ ಭಾರತ ನಿರ್ಮಾಣ ಹಾಗೂ ಭವಿಷ್ಯದ ಭಾರತದಲ್ಲಿ ಈ ಮಕ್ಕಳೇ ದೊಡ್ಡ ಆಸ್ತಿ.

ಆಟವಾಡಿದರೆ ಮಾತ್ರ ಜೀವನ ಅರಳು ತ್ತದೆ ಎಂದು ಮೋದಿ ಕಾಕಾ ಹೇಳಿದ್ದಾರೆ.

| ನರೂರ್ ಶಾಲಾ ವಿದ್ಯಾರ್ಥಿ

ಗಣ್ಯರ ಶುಭಾಶಯ

ಸಾಮಾಜಿಕ ಜಾಲತಾಣ ಹಾಗೂ ವೈಯಕ್ತಿಕವಾಗಿ ಕೋಟ್ಯಂತರ ಜನರು ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಇವರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಎಲ್ಲ ಕೇಂದ್ರ ಸಚಿವರು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದ್ದಾರೆ. ಟ್ವಿಟರ್ ಮೂಲಕ ಎಲ್ಲ ಗಣ್ಯರ ಶುಭಾಶಯಕ್ಕೆ ಪ್ರಧಾನಿ ಪ್ರತ್ಯೇಕವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ವಿವಿಧೆಡೆ ಜನ್ಮದಿನ ವಿಶೇಷ

# ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ, ದೇವರ ದರ್ಶನ

# ತಮ್ಮ ಜೀವನ ಆಧರಿಸಿ ನಿರ್ವಿುಸಿರುವ ‘ಚಲೋ ಜೀತೆ ಹೈ’ ಚಿತ್ರ ವೀಕ್ಷಿಸಿದ ಪ್ರಧಾನಿ

# 568 ಕೆ.ಜಿ ಲಾಡು ತಯಾರಿಸಿ ಹುಟ್ಟುಹಬ್ಬ ಆಚರಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಮುಖ್ತಾರ್ ಅಬ್ಬಾಸ್ ನಖ್ವಿ

# ತಮಿಳುನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ರಾಜ್ಯ ಬಿಜೆಪಿ ಘಟಕದಿಂದ ಚಿನ್ನದ ಉಂಗುರ ಉಡುಗೊರೆ

# ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ‘ನರೇಂದ್ರ ಮೋದಿ: ಎ ಚರಿಶ್ಮಾಟಿಕ್ ಆಂಡ್ ವಿಷನರಿ ಸ್ಟೇಟ್ಸ್​ಮ್ಯಾನ್’ ಹಾಗೂ ‘ದಿ ಮೇಕಿಂಗ್ ಆಫ್ ಲೆಜೆಂಡರಿ’ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವರು

# 999 ರೂಪಾಯಿಯಿಂದ 3500 ರೂಪಾಯಿವರೆಗಿನ ಮೋದಿ ಜ್ಯಾಕೆಟ್ ಹಾಗೂ ಕುರ್ತಾ ಬಿಡುಗಡೆ ಮಾಡಿದ ಖಾದಿ ಇಂಡಿಯಾ