ಪಾಕಿಸ್ತಾನ ರಾಷ್ಟ್ರೀಯ ದಿನಕ್ಕೆ ಶುಭಕೋರಿದ ಮೋದಿ?

ಇಸ್ಲಾಮಾಬಾದ್​: ಪ್ರತಿ ವರ್ಷದ ಮಾರ್ಚ್​ 23ರಂದು ಪಾಕಿಸ್ತಾನ ಆಚರಿಸುವ ರಾಷ್ಟ್ರೀಯ ದಿನಾಚರಣೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ ಎನ್ನಲಾಗಿದೆ. ಸ್ವತಃ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರೇ ಟ್ವಿಟರ್​ನಲ್ಲಿ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಶುಭಾಶಯ ಬಂದಿದೆ ಎಂದು ಟ್ವೀಟ್​ ಮಾಡಿರುವ ಇಮ್ರಾನ್​ ಖಾನ್​, ಆ ಟ್ವೀಟ್​ನಲ್ಲಿ ಮೋದಿ ಸಂದೇಶವನ್ನು ಉಲ್ಲೇಖಿಸಿದ್ದಾರೆ. “ಪಾಕಿಸ್ತಾನದ ನಾಗರಿಕರಿಗೆ ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆಯ ಶುಭಾಶಯಗಳು. ಭಯೋತ್ಪಾದನೆ ಮತ್ತು ಆಶಾಂತಿ ಇಲ್ಲದ ವಾತಾವರಣದಲ್ಲಿ ಪ್ರಜಾತಂತ್ರ, ಶಾಂತ, ಅಭಿವೃದ್ಧಿ ಮತ್ತು ಸಮೃದ್ಧ ಪ್ರಾಂತ್ಯ ನಿರ್ಮಾಣ ಮಾಡಲು ಉಪಖಂಡಕ್ಕೆ ಇದು ಸಕಾಲ,” ಎಂದು ಮೋದಿ ಶುಭಕೋರಿರುವುದಾಗಿ ಇಮ್ರಾನ್​ ಖಾನ್​ ತಮ್ಮ ಟ್ವೀಟ್​ ನಲ್ಲಿ ಬರೆದುಕೊಂಡಿದ್ದಾರೆ.

ಲಾಹೋರ್​ ನಿರ್ಣಯ ಅಂಗೀಕಾರವಾದ ಮಾರ್ಚ್​ 23ರ ಈ ದಿನವನ್ನು ಪಾಕಿಸ್ತಾನ ತನ್ನ ರಾಷ್ಟ್ರೀಯ ದಿನವನ್ನಾಗಿ ಆಚರಿಸುತ್ತದೆ. ರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನರ್​ ಕಚೇರಿಯಲ್ಲಿ ಶುಕ್ರವಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ, ಈ ಕಾರ್ಯಕ್ರಮಕ್ಕೆ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿಗಳಾದ ಹುರಿಯತ್​ ನಾಯಕರನ್ನು ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ತನ್ನ ಪ್ರತಿನಿಧಿಯನ್ನು ಕಳುಹಿಸದೆ ಇರಲು ನಿರ್ಧಾರ ಕೈಗೊಂಡಿತ್ತು.

ಹೀಗಿರುವಾಗಲೇ ಮೋದಿ ಅವರು ನೇರವಾಗಿ ಇಮ್ರಾನ್​ ಖಾನ್​ ಅವರಿಗೆ ತಮ್ಮ ಶುಭ ಸಂದೇಶ ರವಾನೆ ಮಾಡಿದ್ದಾರೆ ಎನ್ನಲಾಗಿದೆ.

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಫೆ.14ರಂದು ಭಯೋತ್ಪಾದನಾ ದಾಳಿ ನಡೆದಿತ್ತು. ಇದಕ್ಕೆ ಪ್ರತಿಕಾರವಾಗಿ ಭಾರತವೂ ಪಾಕಿಸ್ತಾನದೊಳಗಿನ ಜೈಷ್​ ಎ ಮೊಹಮದ್​ ಸಂಘಟನೆಯ ಅಡಗುದಾಣಗಳ ಮೇಲೆ ದಾಳಿ ಮಾಡಿತ್ತು. ಈ ದಾಳಿಯ ಮರುದಿನವೇ ಪಾಕಿಸ್ತಾನ ಕೂಡ ಭಾರತದ ವಾಯು ಪ್ರದೇಶದೊಳಗೆ ತನ್ನ ವಿಮಾನಗಳನ್ನು ರವಾನಿಸಿತ್ತು. ಇದನ್ನು ಬೆನ್ನುಹತ್ತಿ ಹೋಗಿದ್ದ ಭಾರತೀಯ ವಾಯು ಸೇನೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ಪಾಕಿಸ್ತಾನ ಸೇನೆಗೆ ಸೆರೆಯಾಗಿದ್ದರು. ನಂತರ ಪಾಕಿಸ್ತಾನವು ಶಾಂತಿಯ ನೆಲೆಗಟ್ಟಿನಲ್ಲಿ ಅಭಿನಂದನ್​ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿತ್ತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಕಾರ್ಮೋಡ ಆವರಿಸಿತ್ತು. ಅದರ ನಂತರದ ಮೊದಲ ಸೌಹಾರ್ದಯುತವಾದ ಹೆಜ್ಜೆ ಇದಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.