‘ಭಾರತದ ವಿಭಜನೆಯ ಮುಖ್ಯಸ್ಥ’ ಎಂಬ ಟೈಮ್​ ಮ್ಯಾಗಜಿನ್​ ಲೇಖನಕ್ಕೆ ಪ್ರಧಾನಿ ಮೋದಿ ಕೊಟ್ಟ ತಿರುಗೇಟು ಏನು?

ನವದೆಹಲಿ: ಪ್ರತಿಷ್ಠಿತ ಟೈಮ್​ ಮ್ಯಾಗಜಿನ್​ ಕವರ್​ ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಬಳಸಿ, ‘ಭಾರತದ ವಿಭಜನೆಯ ಮುಖ್ಯಸ್ಥ’ ಮತ್ತು ‘ಭಾರತ ಮತ್ತೆ ಐದು ವರ್ಷಗಳ ಅವರ ಆಡಳಿತವನ್ನು ಸಹಿಸಿಕೊಳ್ಳಬಲ್ಲದೇ’ ಎಂಬುದನ್ನು ಪಶ್ನಿಸಿ ಪ್ರಕಟವಾಗಿದ್ದ ಲೇಖನಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.

ಟೈಮ್​ ಮ್ಯಾಗಜಿನ್​ ಒಂದು ವಿದೇಶಿ ಪತ್ರಿಕೆಯಾಗಿದ್ದು, ಪಾಕಿಸ್ತಾನದ ರಾಜಕೀಯ ಕುಟುಂಬದಿಂದ ಬಂದಿರುವುದಾಗಿ ಅಲ್ಲಿನ ಬರಹಗಾರ ತಾನೇ ಒಪ್ಪಿಕೊಂಡಿದ್ದಾನೆ. ಇದೇ ಸಾಕು ಆತನ ಬರಹದ ವಿಶ್ವಾಸಾರ್ಹತೆಯನ್ನು ತಿಳಿದುಕೊಳ್ಳುವುದಕ್ಕೆ ಎಂದು ಪ್ರಧಾನಿ ಇಂದು(ಶುಕ್ರವಾರ) ತಿರುಗೇಟು ನೀಡಿದ್ದಾರೆ.

ಪ್ರಧಾನಿ ಕುರಿತಾದ ಲೇಖನವನ್ನು ಆತಿಶ್​​​ ತಸೀರ್​ ಎಂಬ ಬರಹಗಾರ ಬರೆದಿದ್ದ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದಿಗಿಂತಲೂ ಇಂದು ವಿಭಜನೆಯಾಗಿದೆ ಎಂದು ಹೇಳಿ, ಗುಂಪು ಹಲ್ಲೆ, ಯೋಗಿ ಆದಿತ್ಯನಾಥ್​ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಹಾಗೂ ಮಾಲೇಗಾಂವ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಪರ ಬಿಜೆಪಿ ತೆಗೆದುಕೊಂಡ ನಿಲುವುಗಳನ್ನು ಉದಾಹರಣೆ ಕೊಟ್ಟಿದ್ದರು.

ಇದೇ ಲೇಖನದಲ್ಲಿ ಪ್ರತಿಪಕ್ಷ ಕಾಂಗ್ರೆಸ್​ ಅನ್ನು ಟೀಕಿಸಿರುವ ಬರಹಗಾರ ಆತಿಶ್​​​, ಕಾಂಗ್ರೆಸ್​ ರಾಜವಂಶದ ತತ್ವಗಳ ಮೇಲೆ ನಿಂತಿದೆ. ರಾಹುಲ್​ ಒಬ್ಬ ಸ್ವೀಕಾರಾರ್ಹವಲ್ಲದ ಸಾಧಾರಣ ವ್ಯಕ್ತಿ ಎಂದು ಬರೆದಿದ್ದರು.

ಇದೇ ವೇಳೆಯಲ್ಲಿ ಮತ್ತೊಂದು ಲೇಖನವನ್ನು ಕವರ್​ ಮಾಡಿದ್ದ ಟೈಮ್​​ ಮ್ಯಾಗಜಿನ್​ ಅದಕ್ಕೆ ‘ಭಾರತದ ಆರ್ಥಿಕ ಸುಧಾರಣೆಗಾಗಿ ಮೋದಿ ಅತ್ಯುತ್ತಮ ಭರವಸೆ’ ಎಂಬ ಶೀರ್ಷಿಕೆಯನ್ನು ನೀಡಿತ್ತು.

ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಪ್ರಚಾರದ ನಡುವೆ ಟೈಮ್​ ಮ್ಯಾಗಜಿನ್​ ಮೋದಿ ಕುರಿತಾಗಿ ಬರೆದಿದ್ದ ಲೇಖನವನ್ನು ದಾಳವಾಗಿ ಬಳಸಿಕೊಂಡ ಪ್ರತಿಪಕ್ಷಗಳು ಪ್ರಧಾನಿಯನ್ನು ಮತ್ತಷ್ಟು ಟೀಕೆಗೆ ಒಳಪಡಿಸಿದ್ದರು.

ಟೈಮ್​ ಮ್ಯಾಗಜಿನ್​ ಲೇಖನಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ಇದೊಂದು ಪ್ರಧಾನಿ ಹೆಸರಿಗೆ ಧಕ್ಕೆ ತರುವಂತಹ ಲೇಖನ ಎಂದು ಕಿಡಿಕಾರಿತ್ತು. ಬರಹಗಾರ ಆತಿಷ್​ ವಿರುದ್ಧ ಮಾತನಾಡಿ ಆತ ಪತ್ರಕರ್ತೆ ತಲ್ವೀನ್​ ಸಿಂಗ್​ ಹಾಗೂ ದಿವಂಗತ ಪಾಕಿಸ್ತಾನಿ ರಾಜಕಾರಣಿ ಮತ್ತು ಬಿಸಿನೆಸ್​ ಮ್ಯಾನ್​ ಸಲ್ಮಾನ್​ ತಸೀರ್​ ಅವರ ಮಗನಾಗಿದ್ದು, ಪಾಕಿಸ್ತಾನದ ಅಜೆಂಡಾ ಇದರಲ್ಲಿ ಕಾಣುತ್ತಿದೆ ಎಂದು ಆರೋಪಿಸಿದ್ದರು. (ಏಜೆನ್ಸೀಸ್​)