More

    ಭಾವನೆಗಳ ಪ್ರತಿಬಿಂಬ: ಜನ ಸಂಪರ್ಕಕ್ಕೆ ನೆರವಾದ ಆಧ್ಯಾತ್ಮಿಕ ಪಯಣ; ಪ್ರಧಾನಿ ಮೋದಿ ಬಣ್ಣನೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋಕಾರ್ಯಕ್ರಮ ‘ಮನ್ ಕೀ ಬಾತ್’ನ 100ನೇ ಐತಿಹಾಸಿಕ ಸಂಚಿಕೆಯ ಭಾಷಣವನ್ನು ಭಾನುವಾರ ಕೋಟ್ಯಂತರ ಜನರು ಆಲಿಸಿದ್ದು, ವಿಶ್ವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನೇರ ಪ್ರಸಾರ ಸೇರಿದಂತೆ ಹಲವು ವಿಶಿಷ್ಟ ದಾಖಲೆಗಳಿಗೆ ಭಾಜನವಾಯಿತು. ಮನ್ ಕೀ ಬಾತ್ ತಮಗೆ ಒಂದು ಆಧ್ಯಾತ್ಮಿಕ ಪಯಣವಾಗಿದ್ದು ದೇಶದ ಜನರೊಂದಿಗೆ ಸಂಪರ್ಕ ಸಾಧಿಸಲು ನೆರವಾಗಿದೆ ಎಂದು ಶತಕ ಸಂಚಿಕೆಯ ಭಾಷಣದಲ್ಲಿ ಮೋದಿ ಹೇಳಿದರು. ಸ್ವಚ್ಛ ಭಾರತವೇ ಇರಲಿ, ಖಾದಿಯೇ ಇರಲಿ ಅಥವಾ ಸ್ವಾತಂತ್ರ್ಯದ ಅಮೃತ ಮಹೋತ್ಸವವೇ ಇರಲಿ; ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಗೊಂಡ ವಿಷಯ ಜನರ ಆಂದೋಲನಗಳಾಗಿ ಹೊರಹೊಮ್ಮಿದವು ಎಂದು ಪ್ರಧಾನಿ ವರ್ಣಿಸಿದರು.

    ಜನರ ಭಾವನೆಗಳ ಪ್ರತಿಬಿಂಬ: ಮಾಸಿಕ ಆಕಾಶವಾಣಿ ಭಾಷಣವು ಕೋಟ್ಯಂತರ ಭಾರತೀಯರ ಭಾವನೆಗಳ ಪ್ರತಿಬಿಂಬವಾಗಿದೆ. ಜನರೊಂದಿಗೆ ಸದಾ ಸಂಪರ್ಕದಲ್ಲಿರಲು ಅದು ತಮಗೆ ಒಂದು ಮಾರ್ಗವನ್ನು ತೋರಿಸಿದೆ. ‘ಇದೊಂದು ಕೇವಲ ಕಾರ್ಯಕ್ರಮವಲ್ಲ, ನನ್ನ ಆಧ್ಯಾತ್ಮಿಕ ಪಯಣ ಇದಾಗಿದೆ’ ಎಂದು ಮೋದಿ ಅಭಿಪ್ರಾಯಪಟ್ಟರು.

    ಧನಾತ್ಮಕತೆಯ ಹಬ್ಬ: ಮನ್ ಕೀ ಬಾತ್ ಧನಾತ್ಮಕತೆ ಮತ್ತು ಜನರನ್ನು ಸಂಭ್ರಮಿಸುವ ಹಬ್ಬವಾಗಿ ಪರಿಣಮಿಸಿದೆ. ಇತರರಿಂದ ಕಲಿಯುವ ಒಂದು ಮಹತ್ವದ ಮಾಧ್ಯಮವೂ ಆಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಭಾಷಣದಲ್ಲಿ ಬಣ್ಣಿಸಿದರು.

    ನೇರ ಪ್ರಸಾರ: ಮನ್ ಕೀ ಬಾತ್​ನ 100ನೇ ಸಂಚಿಕೆ ನ್ಯೂಯಾರ್ಕ್​ನಲ್ಲಿರುವ ವಿಶ್ವ ಸಂಸ್ಥೆಯ ಕೇಂದ್ರ ಕಾರ್ಯಾಲಯದಲ್ಲಿ ನೇರ ಪ್ರಸಾರ ಆಗುವುದರೊಂದಿಗೆ ಐತಿಹಾಸಿಕ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಯಿತು. 2014ರ ಅಕ್ಟೋಬರ್ 3ರಂದು ಮನ್ ಕೀ ಬಾತ್​ನ ಮೊದಲ ಸಂಚಿಕೆ ಪ್ರಸಾರವಾಗಿದ್ದು ವಿಶ್ವ ಸಂಸ್ಥೆಯಲ್ಲೂ ಅದರ 100ನೇ ಸಂಚಿಕೆ ಅನುರಣಿಸಿತು.

    ದೂರವಾಣಿ ಮಾತುಕತೆ: ಮನ್ ಕೀ ಬಾತ್​ನ 100ನೇ ಸಂಚಿಕೆಯ ವೇಳೆ ಪ್ರಧಾನಿ ಮೋದಿ, ಹಿಂದಿನ ಕೆಲವು ಕಾರ್ಯಕ್ರಮಗಳಲ್ಲಿ ಪ್ರಸ್ತಾಪಗೊಂಡಿರುವ ವ್ಯಕ್ತಿಗಳೊಂದಿಗೆ ದೂರವಾಣಿ ಸಂವಾದವನ್ನೂ ನಡೆಸಿದರು.

    ಜನರು ದೇವಾಲಯಗಳಿಗೆ ಹೋಗುವಾಗ ಪ್ರಸಾದದ ತಟ್ಟೆ ತೆಗೆದುಕೊಂಡು ಹೋಗುತ್ತಾರೆ. ನನಗೆ ಮನ್ ಕೀ ಬಾತ್ ಕಾರ್ಯಕ್ರಮವು ಜನತಾ ಜನಾರ್ದನರ ರೂಪದಲ್ಲಿ ದೇವರಿಗೆ ಅರ್ಪಿಸುವ ಪ್ರಸಾದದ ತಟ್ಟೆಯಾಗಿದೆ.

    | ನರೇಂದ್ರ ಮೋದಿ ಪ್ರಧಾನಿ

    ಸಂಸದರು ಭಾಗಿ: ಸಂಸತ್ ಸದಸ್ಯರು ಸಹಿತ ಬಿಜೆಪಿಯ ಹಿರಿಯ ನಾಯಕರು ದೇಶದ ನಾನಾ ಭಾಗ ಗಳಲ್ಲಿ ಮೋದಿ ಭಾಷಣವನ್ನು ಆಲಿಸಿದರು. ವಿಶಿಷ್ಟ ಉಪಕ್ರಮವನ್ನು ದೇಶದಾದ್ಯಂತ ಜನಸಮೂಹಕ್ಕೆ ತಲುಪಿಸಲು ಬಿಜೆಪಿ ವ್ಯವಸ್ಥೆ ಮಾಡಿತ್ತು. 4 ಲಕ್ಷ ಸ್ಥಳಗಳಲ್ಲಿ ಶತಕ ಸಂಚಿಕೆ ಆಲಿಸಲು ವ್ಯವಸ್ಥೆ ಮಾಡುವುದಾಗಿ ಬಿಜೆಪಿ ಶನಿವಾರ ಪ್ರಕಟಿಸಿತ್ತು.

    ಅಸಂಖ್ಯಾತ ಪತ್ರಗಳು: ತಮ್ಮ ಮನದಾಳದ ಮಾತಿನ ಕಾರ್ಯಕ್ರಮದ ನೂರನೇ ಸಂಚಿಕೆಗೆ ಅಭಿನಂದನೆ ಸೂಚಿಸಿ ದೇಶದಾದ್ಯಂತದಿಂದ ಜನರು ಸಾವಿರಾರು ಪತ್ರಗಳು ಮತ್ತು ಸಂದೇಶಗಳನ್ನು ರವಾನಿಸಿರುವುದಕ್ಕೆ ಪ್ರಧಾನಿ ಭಾವುಕರಾಗಿ ಸಂತಸ ವ್ಯಕ್ತಪಡಿಸಿದರು. ಮನ್ ಕೀ ಬಾತ್, ಭಾರತದ ಕೋಟ್ಯಂತರ ಜನರ ಮನ್ ಕೀ ಬಾತ್ ಆಗಿದೆ ಎಂದು ವರ್ಣಿಸಿದರು. ಸಾಧ್ಯವಾದಷ್ಟೂ ಹೆಚ್ಚು ಮಟ್ಟಿಗೆ ಅವುಗಳನ್ನು ಓದಲು ಪ್ರಯತ್ನಿಸಿದ್ದೇನೆ. ಅವುಗಳನ್ನೆಲ್ಲ ಓದುವಾಗ ನನಗೆ ಹೃದಯ ತುಂಬಿ ಬಂದಿದೆ. 100ನೇ ಸಂಚಿಕೆಯ ಸಂಭ್ರಮಕ್ಕೆ ನೀವು ನನ್ನನ್ನು ಅಭಿನಂದಿಸಿದ್ದೀರಿ. ಆದರೆ, ಕೇಳುಗರಾದ ನೀವು ನಿಜವಾಗಿಯೂ ಅಭಿನಂದನೆಗೆ ಅರ್ಹರು ಎಂದು ಹೇಳಿದರು. ಮನ್ ಕೀ ಬಾತ್ ಭಾರತೀಯರ ಮನದ ಮಾತಾಗಿದೆ ಮತ್ತು ಅವರ ಭಾವನೆಗಳ ಅಭಿವ್ಯಕ್ತಿಯಾಗಿದೆ ಎಂದರು. ಮನ್ ಕೀ ಬಾತ್ ಕಾರ್ಯಕ್ರಮ ನಮ್ಮ ಜನರ ಮೂರ್ತೀಕರಣ (ಪರ್ಸಾನಿಫಿಕೇಶನ್) ಆಗಿದೆ. ಇಲ್ಲಿ ನಾವು ಜನತೆಯ ಧನಾತ್ಮಕತೆ ಮತ್ತು ಪಾಲ್ಗೊಳ್ಳುವಿಕೆಯನ್ನು ಸಂಭ್ರಮಿಸುತ್ತೇವೆ ಎಂದರು. ಇದು ಬೇರೆಯವರ ಸಾಧನೆಗಳನ್ನು ಸಂಭ್ರಮಿಸುವ ಹಾಗೂ ಇತರರಿಂದ ಕಲಿಯುವ ಒಂದು ಕಾರ್ಯಕ್ರಮವಾಗಿದೆ ಎಂದು ಪ್ರಧಾನಿ ಬಣ್ಣಿಸಿದರು. ‘2014 ಅಕ್ಟೋಬರ್ 3ರ ವಿಜಯ ದಶಮಿ ದಿನದಂದು ನಾವೆಲ್ಲರೂ ಒಟ್ಟು ಸೇರಿ ಮನ್ ಕೀ ಬಾತ್​ನ ಪ್ರಯಾಣವನ್ನು ಆರಂಭಿಸಿದ್ದೆವು. ವಿಜಯ ದಶಮಿಯು ದುಷ್ಟ ಶಕ್ತಿ ಮೇಲೆ ಶಿಷ್ಟ ಶಕ್ತಿಯ ವಿಜಯದ ವಿಶಿಷ್ಟ ಹಬ್ಬವಾಗಿದೆ. ಪ್ರತಿ ತಿಂಗಳೂ ಈ ಹಬ್ಬ ಬರುತ್ತಿದ್ದು ನಾವೆಲ್ಲರೂ ಅದನ್ನು ಕುತೂಹಲದಿಂದ ಎದುರು ನೋಡುತ್ತಿರುತ್ತೇವೆ. ನಾವು ಧನಾತ್ಮಕತೆಯನ್ನು ಸಂಭ್ರಮಿಸುತ್ತೇವೆ’ ಎಂದು ಮೋದಿ ಹೇಳಿದರು.

    ಭಾರಿ ಮಳೆ: ಹಳ್ಳ ದಾಟುತ್ತಿದ್ದ ತಾಯಿ ಜತೆ ಇಬ್ಬರು ಮಕ್ಕಳೂ ನೀರುಪಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts