ಚಿನ್ನದ ಹುಡುಗಿ ಹಿಮಾ ದೇಶಭಕ್ತಿಗೆ ಪ್ರಧಾನಿ ನಮೋ ಶರಣು

ನವದೆಹಲಿ: ಐಎಎಎಫ್ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನ ಮಹಿಳೆಯರ 400 ಮೀ. ಓಟದಲ್ಲಿ ಸ್ವರ್ಣ ಪದಕ ತನ್ನದಾಗಿಸಿಕೊಂಡ ಹಿಮಾದಾಸ್​ರ ದೇಶಭಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್​ನಲ್ಲಿ ಶ್ಲಾಘಿಸಿದ್ದಾರೆ.

ಹಿಮಾದಾಸ್​ನ ಗೆಲುವು ಮರೆಯಲಾಗದಂಥ ಕ್ಷಣ. ಗೆದ್ದ ತಕ್ಷಣ ಅವರು ತ್ರಿವರ್ಣ ಧ್ವಜಕ್ಕಾಗಿ ಹುಡುಕಾಟ ನಡೆಸಿದ್ದು ಮತ್ತು ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದು ನನ್ನ ಮನ ಮುಟ್ಟಿತು. ಈ ಕ್ಷಣಗಳನ್ನು ನೋಡಿದ ಯಾವ ಭಾರತೀಯರ ಕಣ್ಣಲ್ಲಿ ನೀರು ಬರುವುದಿಲ್ಲ?! ಎಂದು ಹಿಮಾ ಅವರ ವಿಡಿಯೋ ಜತೆ ಟ್ವೀಟ್​ ಮಾಡಿದ್ದಾರೆ.

ಇದೇ ವೇಳೆ ಹೊಸದಾಗಿ ಟ್ವಿಟರ್​ ಖಾತೆ ತೆರೆದಿರುವ ಹಿಮಾ, ಸೆಲ್ಫೀ ವಿಡಿಯೋ ಮೂಲಕ ತನಗೆ ಶುಭಾಶಯ ಕೋರಿದ ಹಾಗೂ ಬೆಂಬಲ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ಆಶೀರ್ವಾದ ಸದಾ ಇರಲಿ
ರಾಷ್ಟ್ರಪತಿ, ಪ್ರಧಾನಿ, ಕ್ರೀಡಾ ಸಚಿವ, ಚಿತ್ರರಂಗ ಹಾಗೂ ನನಗೆ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ. ನೀವೆಲ್ಲ ನನಗೆ ಬಹಳಷ್ಟು ಪ್ರೀತಿ ಆಶೀರ್ವಾದ ನೀಡಿದ್ದೀರ. ಎಲ್ಲರ ಆಶೀರ್ವಾದದಿಂದ ನಾನು ಈ ಮಟ್ಟಕ್ಕೆ ತಲುಪಿದ್ದೇನೆ. ಇದೇ ರೀತಿ ನನ್ನನ್ನು ಆಶೀರ್ವದಿಸಿ. ನಾನು ದೇಶವನ್ನು ಮತ್ತೊಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗುತ್ತೇನೆ ಎಂದು ಹಿಮಾ ತನ್ನ ವಿಡಿಯೋದಲ್ಲಿ ಹೇಳಿದ್ದಾರೆ.

ಗುರುವಾರ ರಾತ್ರಿ ವಿಶ್ವ ಜೂನಿಯರ್ ಚಾಂಪಿಯನ್​ಷಿಪ್​ನ ಮಹಿಳೆಯರ 400 ಮೀಟರ್ ಓಟದಲ್ಲಿ 18 ವರ್ಷದ ಅಸ್ಸಾಂನ ಹಿಮಾ ಸ್ವರ್ಣ ಜಯಿಸಿ ಇತಿಹಾಸ ಬರೆದಿದ್ದರು. ಇವರಿಗೆ ನಿನ್ನೆಯಿಂದ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದು, ಕ್ರಿಕೆಟಿಗರಾದ ರೋಹಿತ್​ ಶರ್ಮಾ ಮತ್ತು ವೀರೇಂದ್ರ ಸೆಹ್ವಾಗ್​, ಭಾರತ ಫುಟ್​ಬಾಲ್​ ತಂಡದ ನಾಯಕ ಸುನಿಲ್​ ಛೇಟ್ರಿ ಹಾಗೂ ಚಿತ್ರರಂಗದ ಅನೇಕ ಮಂದಿ ಶುಭಾಶಯ ಕೋರಿದ್ದಾರೆ. (ಏಜೆನ್ಸೀಸ್​)