ಮಗನ ಮದುವೆಗೆ ಪ್ರಧಾನಿ ಮೋದಿಯವರಿಗೆ ಆಹ್ವಾನ ನೀಡದ ರಾಜ್​ ಠಾಕ್ರೆ

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್​ ಠಾಕ್ರೆ ತಮ್ಮ ಮಗನ ಮದುವೆಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ಬಿಜೆಪಿ ಹಿರಿಯ ಮುಖಂಡ ಎಲ್​.ಕೆ.ಆಡ್ವಾಣಿ ಸೇರಿ ಹಲವು ಗಣ್ಯರನ್ನು ಈಗಾಗಲೇ ಆಹ್ವಾನಿಸಿದ್ದು, ಇದುವರೆಗೆ ಪ್ರಧಾನಿ ಮೋದಿಯವರಿಗೆ ಆಮಂತ್ರಣ ನೀಡಿಲ್ಲ.

ರಾಜ್​ ಠಾಕ್ರೆ ಅವರ ಮಗನ ಮದುವೆ ಜ.27ಕ್ಕೆ ಸೇಂಟ್​ ರೇಜಿಸ್​ ಹೋಟೆಲ್​ನಲ್ಲಿ ನೆರವೇರಲಿದೆ. ವಿವಾಹ ಸಮಾರಂಭಕ್ಕೆ ಈಗಾಗಲೇ ಹಲವು ಗಣ್ಯರನ್ನು ಸ್ವತಃ ರಾಜ್​ ಠಾಕ್ರೆಯವರೇ ಆಹ್ವಾನಿಸಿದ್ದಾರೆ. ಹಾಗೇ ಕಳೆದ ವಾರ ದೆಹಲಿಗೆ ಭೇಟಿ ನೀಡಿದ್ದರು. ತಮ್ಮ ಇಬ್ಬರು ಸಹಾಯಕರಿಗೆ ಆಮಂತ್ರಣ ನೀಡಲು ಕಳಿಸಿದ್ದರು. ಅದರಂತೆ ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಗೃಹ ಸಚಿವ ರಾಜನಾಥ್​ ಸಿಂಗ್​, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್​, ನಿತಿನ್​ ಗಡ್ಕರಿ, ಪ್ರಕಾಶ್​ ಜಾವಡೇಕರ್​, ಧರ್ಮೇಂದ್ರ ಪ್ರಧಾನ್​ ಮತ್ತು ಮನೇಕಾ ಗಾಂಧಿ ಅವರಿಗೆ ಮದುವೆಗೆ ಆಹ್ವಾನ ನೀಡಲಾಗಿದೆ. ರಾಹುಲ್​ ಗಾಂಧಿಯವರು ನಿವಾಸದಲ್ಲಿ ಸಿಗದಿದ್ದರೂ ಅವರಿಗೆ ಆಮಂತ್ರಣ ತಲುಪಿದೆ ಎನ್ನಲಾಗಿದೆ.

ಮೋದಿಗೆ ನಂಬಿಕೆ ಇದೆಯಾ?
ಮೋದಿಯವರನ್ನು ಮದುವೆಗೆ ಆಮಂತ್ರಿಸದೆ ಇರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಮದುವೆಯಲ್ಲಿ ನಂಬಿಕೆ ಇದೆಯಾ ಎಂದಿದ್ದಾರೆ.
ಠಾಕ್ರೆಯವರು ಒಂದು ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬಲವಾಗಿ ಬೆಂಬಲಿಸುತ್ತಿದ್ದರು. ಆದರೆ, ಈಗ ಮೋದಿ ಮುಕ್ತ ಭಾರತ ನಿರ್ಮಾಣದ ನಿಲುವು ತಳೆದಿದ್ದು, ಅವರ ಬಗ್ಗೆ ಕಟುವಾಗಿ ಟೀಕೆ, ವಿಮರ್ಶೆಗಳನ್ನು ಮಾಡುತ್ತಿದ್ದಾರೆ.

ರಾಜ್​ ಠಾಕ್ರೆಯವರ ಮಗ ಅಮಿತ್​ ಅವರು ಪ್ರಸಿದ್ಧ ವೈದ್ಯ ಡಾ. ಸಂಜಯ್​ ಬೋರುಡೆ ಅವರ ಮಗಳು ಮಿತಾಲಿ ಬೋರುಡೆಯವರೊಂದಿಗೆ ಜ.27ರಂದು ವಿವಾಹವಾಗುತ್ತಿದ್ದಾರೆ. ಮಿತಾಲಿ ಅವರು ಫ್ಯಾಷನ್​ ಡಿಸೈನರ್​.