ಹಿಂದು ದೇಗುಲಕ್ಕೆ ಮೋದಿ ಶಿಲಾನ್ಯಾಸ

ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರವಾಸದಲ್ಲಿದ್ದು, ಜೋರ್ಡಾನ್, ಪ್ಯಾಲೆಸೆôನ್, ಅಬುಧಾಬಿ, ದುಬೈ, ಓಮಾನ್​ಗೆ ಭೇಟಿ ನೀಡಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಅಬುಧಾಬಿಯಲ್ಲಿ ದೇವಾಲಯ ನಿರ್ವಣಕ್ಕೆ ಶಂಕುಸ್ಥಾಪನೆ, ಅಬುಧಾಬಿ ಜತೆಗೆ ಐದು ಒಪ್ಪಂದ, ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿ ಗಮನಸೆಳೆದಿದ್ದಾರೆ.

ಅಬುಧಾಬಿಯಲ್ಲಿ ನಿರ್ವಣವಾಗಲಿರುವ ಹಿಂದು ದೇವಾಲಯದ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ವಿಡಿಯೋ ಕಾನ್ಪರನ್ಸ್ ಮೂಲಕ ನೆರವೇರಿಸಿದರು. ಬಳಿಕ ಮಾತಾನಾಡಿದ ಅವರು, ಮಾನವೀಯ ಸಹಕಾರ ಹಾಗೂ ಸೌಹಾರ್ದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಬಣ್ಣಿಸಿದರು. ಮಂದಿರ ನಿರ್ವಣವಾಗುತ್ತಿರುವುದು ಭಾರತದ ಪರಂಪರೆಗೆ ಸಿಕ್ಕ ಗೌರವವಾಗಿದೆ. ಇದಕ್ಕೆ ಚ್ಯುತಿ ಬಾರದಂತೆ ಇಲ್ಲಿನವರು ವರ್ತಿಸಬೇಕು. ನಮ್ಮ ಆಚರಣೆಯಿಂದ ಇತರರಿಗೆ ತೊಂದರೆ ಆಗಬಾರದು ಎಂದು ಭಾರತೀಯರಿಗೆ ಪ್ರಧಾನಿ ಕಿವಿಮಾತು ಹೇಳಿದರು. ಮಂದಿರ ನಿರ್ವಣಕ್ಕೆ ಅವಕಾಶ ನೀಡಿದ ಅಬುಧಾಬಿ ರಾಜ ಮೊಹಮದ್ ಬಿನ್ ಝಾಯೇದ್ ಅಲ್ ನಹ್ಯಾನ್​ಗೆ ಮೋದಿ 125 ಕೋಟಿ ಭಾರತೀಯರ ಪರವಾಗಿ ಧನ್ಯವಾದ ಸಲ್ಲಿಸಿದರು.

ಮಂದಿರದ ವಿಶೇಷವೇನು?

55 ಸಾವಿರ ಚದರ ಅಡಿ ಪ್ರದೇಶದಲ್ಲಿ ಸ್ವಾಮಿನಾರಾಯಣ ಭವ್ಯ ದೇವಾಲಯ ನಿರ್ವಣಗೊಳ್ಳಲಿದೆ. ಮಧ್ಯಪ್ರಾಚ್ಯದಲ್ಲಿ ಕಲ್ಲಿನಿಂದ ನಿರ್ವಣಗೊಂಡ ಮೊದಲ ಹಿಂದು ಸಾಂಪ್ರದಾಯಿಕ ದೇವಾಲಯ ಇದಾಗಿರಲಿದೆ. ದೇಗುಲಕ್ಕೆ ಅಗತ್ಯವಿರುವ ಕಲ್ಲು, ಕೆತ್ತನೆ ಕಾರ್ಯಗಳನ್ನು ಭಾರತದಲ್ಲೇ ನಡೆಸಿ ಅಬುಧಾಬಿಯಲ್ಲಿ ಇವುಗಳ ಜೋಡಣೆ ಕಾರ್ಯ ನಡೆಯಲಿದೆ. 2020ರ ವೇಳೆಗೆ ದೇಗುಲ ನಿರ್ಮಾಣ ಪೂರ್ಣಗೊಳ್ಳಲಿದೆ. ಎಲ್ಲ ಧರ್ಮದ ಜನರಿಗೂ ಇಲ್ಲಿ ಪ್ರವೇಶ ನೀಡಲಾಗುವುದು ಎಂದು ದೇವಾಲಯ ಮಂಡಳಿ ತಿಳಿಸಿದೆ. ಅಬುದಾಭಿಯ ಮೊದಲ ಹಿಂದು ದೇವಾಲಯ ಇದಾಗಲಿದೆ. ಈಗಾಗಲೇ ದುಬೈನಲ್ಲಿ ಒಂದು ಹಿಂದು ದೇಗುಲವಿದೆ. 2015ರಲ್ಲಿ ಪ್ರಧಾನಿ ಮೋದಿ ಮೊದಲ ಬಾರಿಗೆ ಅಬುಧಾಬಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಂದಿರ ನಿರ್ವಣಕ್ಕೆ ಜಾಗ ನೀಡುವುದಾಗಿ ದೊರೆ ಮೊಹಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಭರವಸೆ ನೀಡಿದ್ದರು.

ಮಿನಿ ಹಿಂದುಸ್ಥಾನ

ಮಸ್ಕತ್​ನಲ್ಲಿ ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಓಮಾನ್ ಮಿನಿ ಹಿಂದುಸ್ಥಾನವಾಗಿದೆ ಎಂದರು. ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಎಂಬ ನೀತಿ ಅನುಸರಿಸುತ್ತಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಜನರ ಜೀವನ ಸರಳಗೊಂಡಿದೆ. ಅಪ್ರಸ್ತುತ ಹಳೇ ಕಾನೂನುಗಳನ್ನು ರದ್ದುಗೊಳಿಸಿ ಆನ್​ಲೈನ್ ವೇದಿಕೆಗೆ ಮಹತ್ವ ಕೊಡಲಾಗಿದೆ. ಇಂದು 90 ಪೈಸೆಗೆ ಒಂದು ಕಪ್ ಚಹಾ ಕೂಡ ಬರುವುದಿಲ್ಲ. ಆದರೆ ಕೇಂದ್ರ ಸರ್ಕಾರ ದಿನಕ್ಕೆ 90 ಪೈಸೆಗೆ ಬಡವರಿಗೆ ಆರೋಗ್ಯ ವಿಮೆ ನೀಡುತ್ತಿದೆ ಎಂದರು.

ಅಬುಧಾಬಿ ಜತೆ 5 ಒಪ್ಪಂದ

ಪ್ಯಾಲೆಸೆôನ್​ನಿಂದ ಅಬುಧಾಬಿಗೆ ತೆರಳಿದ ಪ್ರಧಾನಿ ಮೋದಿಯನ್ನು ಅಲ್ಲಿನ ದೊರೆ ಮೊಹಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಹಾಗೂ ಕುಟುಂಬಸ್ಥರು ಆತ್ಮೀಯವಾಗಿ ಸ್ವಾಗತಿಸಿದರು. ರಾಯಲ್ ಪ್ಯಾಲೇಸ್​ನಲ್ಲಿ ಉಭಯ ನಾಯಕರು ಹಲವು ವಿಚಾರಗಳ ಕುರಿತು ರ್ಚಚಿಸಿ, ಐದು ಒಪ್ಪಂದಗಳಿಗೆ ಸಹಿ ಹಾಕಿದರು. ಮೋದಿ ಭೇಟಿಯಿಂದ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆ ವೃದ್ಧಿಯಾಗಲಿದೆ ಎಂದು ಸೌದಿ ಅರೇಬಿಯಾದ ವಿದೇಶಾಂಗ ವಕ್ತಾರರು ತಿಳಿಸಿದ್ದಾರೆ.\

ಏನೇನು ಒಪ್ಪಂದ? 

# ಭಾರತದ ತೈಲ ಒಕ್ಕೂಟ ಹಾಗೂ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ ನಡುವೆ ಐತಿಹಾಸಿಕ ಒಪ್ಪಂದ ಏರ್ಪಟ್ಟಿದೆ. ವಿದೇಶಿ ತೈಲ ಉದ್ಯಮ ಹಾಗೂ ರಫ್ತಿನಲ್ಲಿ ಭಾರತದ ಕಂಪನಿಗಳು ಶೇ. 10 ಬಂಡವಾಳ ಹೂಡಿಕೆ ಮಾಡಲಿವೆ. 2057 ಅಂದರೆ 40 ವರ್ಷಗಳವರೆಗೆ ಈ ಒಪ್ಪಂದ ಅಸ್ತಿತ್ವದಲ್ಲಿ ಇರಲಿದೆ.

# ಗುತ್ತಿಗೆ ಆಧಾರಿತ ಕೆಲಸದ ಮೇಲೆ ಅಬುಧಾಬಿಗೆ ಸಾಕಷ್ಟು ಸಂಖ್ಯೆಯಲ್ಲಿ ಕಾರ್ವಿುಕರು ಬರುತ್ತಿದ್ದು, ಇವರಾಗಿ ಪ್ರತ್ಯೇಕ ವ್ಯವಸ್ಥೆ ಹಾಗೂ ಸಂಸ್ಥೆಯನ್ನು ಸ್ಥಾಪಿಸುವುದು. ಇದರಿಂದ ಮಾನವ ಕಳ್ಳಸಾಗಾಣಿಕೆ, ವಂಚನೆಯಂಥ ಪ್ರಕರಣಗಳನ್ನು ತಡೆಯಬಹುದಾಗಿದೆ.

# ಭಾರತೀಯ ರೈಲ್ವೆಯ ಮೂಲಸೌಕರ್ಯ, ತಂತ್ರಜ್ಞಾನ ಮೇಲ್ದರ್ಜೆಗೇರಿಸಲು ಒಡಂಬಡಿಕೆ

# ತಂತ್ರಜ್ಞಾನ ಕ್ಷೇತ್ರ ಹಾಗೂ ವಿವಿಧ ಯೋಜನೆಗಳ ಬಗ್ಗೆ ಜಂಟಿ ಅಧ್ಯಯನ

# ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಹಾಗೂ ಅಬುಧಾಬಿ ಸೆಕ್ಯುರಿಟೀಸ್ ಎಕ್ಸ್​ಚೇಂಜ್ ನಡುವೆ ಹಣಕಾಸು ವಿನಿಮಯ ಒಪ್ಪಂದ

# ಜಮ್ಮು-ಕಾಶ್ಮೀರದಲ್ಲಿ ಲಾಜಿಸ್ಟಿಕ್ ಪಾರ್ಕ್ ನಿರ್ವಿುಸಲು ಅಂಕಿತ

ಭಾರತೀಯರನ್ನು ಉದ್ದೇಶಿಸಿ ದುಬೈನಲ್ಲಿ ಭಾಷಣ

ದುಬೈನ ಒಪೆರಾ ಹೌಸ್​ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಭಾರತ ಹಾಗೂ ಕೊಲ್ಲಿ ರಾಷ್ಟ್ರಗಳ ಸಂಬಂಧ ಕೇವಲ ವ್ಯಾಪಾರಕ್ಕೆ ಸೀಮಿತವಾಗದೇ ಸಹಭಾಗಿತ್ವವಾಗಿದೆ. ಯುಎಇನಲ್ಲಿ 30 ಲಕ್ಷ ಭಾರತೀಯರು ನೆಲೆಸಿದ್ದಾರೆ. ಇಲ್ಲಿನ ಅಭಿವೃದ್ಧಿಗೆ ಅವರೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಗಲ್ಪ್ ದೇಶಗಳ ಜತೆಗಿನ ಸಂಬಂಧ ಆಳ ಹಾಗೂ ವಿಸ್ತಾರವಾಗಿದೆ ಎಂದು ಮೋದಿ ಬಣ್ಣಿಸಿದರು. ಜಾಗತಿಕ ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ 2014ರಲ್ಲಿ ಭಾರತ 142ನೇ ಸ್ಥಾನದಲ್ಲಿತ್ತು. ಈಗ 100ನೇ ಸ್ಥಾನಕ್ಕೆ ಬಂದಿದೆ. ಯೋಜನೆಗಳ ಅನುಷ್ಟಾನ, ತಂತ್ರಜ್ಞಾನ, ಸಂಶೋಧನೆಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡುವಂತಾಗಬೇಕು ಎಂದರು.

80 ತಾಸಿನಲ್ಲಿ 5 ದೇಶಕ್ಕೆ ಭೇಟಿ

ಜೋರ್ಡಾನ್, ಪ್ಯಾಲೆಸೆôನ್, ಅಬುಧಾಬಿ, ದುಬೈಗೆ ಈಗಾಗಲೇ ಭೇಟಿ ನೀಡಿದ್ದೇನೆ. ಬಳಿಕ ಓಮಾನ್​ಗೆ ತೆರಳಲಿದ್ದೇನೆ. 70-80 ಗಂಟೆಗಳಲ್ಲಿ 5 ದೇಶಗಳಿಗೆ ಭೇಟಿ ನೀಡಿದ್ದೇನೆ. ಭೇಟಿ ವೇಳೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇದರಿಂದ ಮೈತ್ರಿಯ ಹೊಸ ಯುಗ ಆರಂಭವಾಗಲಿದೆ ಎಂದು ಮೋದಿ ತಿಳಿಸಿದರು. ಭಾಷಣ ಕೇಳಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಭಾಷಣ ವೇಳೆ ಮೋದಿ-ಮೋದಿ ಎಂಬ ಘೊಷಣೆ ಕೇಳಿಬರುತ್ತಿತ್ತು.

ಜಿಎಸ್​ಟಿ, ನೋಟು ನಿಷೇಧ ಸಮರ್ಥನೆ

ಸುಮಾರು 20 ನಿಮಿಷದ ಭಾಷಣದಲ್ಲಿ ಪ್ರಧಾನಿ ಜಿಎಸ್​ಟಿ ಹಾಗೂ ನೋಟು ನಿಷೇಧ ಕ್ರಮ ಸಮರ್ಥಿಸಿಕೊಂಡಿದ್ದಾರೆ. ನೋಟು ನಿಷೇಧಕ್ಕೆ ಒಂದು ವರ್ಗ ಬೆಂಬಲ ನೀಡಿದೆ. ಆದರೆ ಕಪ್ಪುಹಣ, ಅಕ್ರಮ ರೀತಿಯಲ್ಲಿ ಗಳಿಸಿದ ಸಂಪತ್ತನ್ನು ಕಳೆದುಕೊಂಡವರು ಇನ್ನೂ ಅಳುತ್ತಿದ್ದಾರೆ. ಏಳು ವರ್ಷಗಳ ಹಿಂದೆಯೇ ಜಿಎಸ್​ಟಿ ಜಾರಿಯಾಗಬೇಕಿತ್ತು. ಆದರೆ ಎನ್​ಡಿಎ ಸರ್ಕಾರ ಇದನ್ನು ಜಾರಿಗೆ ತಂದಿದೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಟೀಕೆ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ತಂತ್ರಜ್ಞಾನ ಬಳಸಿ ವಿನಾಶಕ್ಕಲ್ಲ

ಕ್ಷಿಪಣಿ, ಅಣ್ವಸ್ತ್ರ ಹಾಗೂ ಭದ್ರತಾ ಸಲಕರಣೆ ಉತ್ಪಾದನೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ತಂತ್ರಜ್ಞಾನ ಅಭಿವೃದ್ಧಿಗೆ ಬಳಕೆಯಾಗಬೇಕೇ ಹೊರತು ವಿನಾಶಕ್ಕಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಸರ್ಕಾರಗಳ ಶೃಂಗದಲ್ಲಿ ಮಾತನಾಡಿದ ಅವರು, ವಿಶ್ವ ಸಾಕಷ್ಟು ಅಭಿವೃದ್ಧಿ ಸಾಧಿಸಿದ ಹೊರತಾಗಿಯೂ ಬಡತನ ಹಾಗೂ ಅಪೌಷ್ಟಿಕತೆ ಸಂಪೂರ್ಣವಾಗಿ ನಿಮೂಲನೆಯಾಗಿಲ್ಲ. ಅಪಾರ ಶ್ರಮ ಹಾಗೂ ಹಣವನ್ನು ವಿದ್ವಂಸಕ ಅಸ್ತ್ರಗಳಿಗಾಗಿ ಇಂದು ವಿನಿಯೋಗಿಸುತ್ತಿದ್ದೇವೆ ಎಂದು ಮೋದಿ ಹೇಳಿದರು. ಶೃಂಗದಲ್ಲಿ 140 ದೇಶಗ 4 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗಿಯಾಗಿದ್ದರು.

ಆರು ಆರ್ ಸೂತ್ರ: ಸರ್ಕಾರಿ ಶೃಂಗದಲ್ಲಿ ಮೋದಿ ಆರು ಆರ್ ಸೂತ್ರಗಳನ್ನು ಮುಂದಿಟ್ಟಿದ್ದಾರೆ. ರೆಡ್ಯೂಸ್ (ಇಳಿಕೆ), ರಿಯೂಸ್ (ಮರುಬಳಕೆೆ), ರಿಸೈಕಲ್ (ಪುರುಪರಿವರ್ತನೆ), ರಿಕವರ್ (ಪುನಶ್ಚೇತನ), ರಿಡಿಸೈನ್ (ಮರುವಿನ್ಯಾಸ), ರಿಮೆನ್ಯುಫೆಕ್ಚರ್(ಮರುಉತ್ಪಾದನೆ) ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.

ಓಮಾನ್​ಗೆ ಪ್ರಯಾಣ

ದುಬೈನಿಂದ ಪ್ರಧಾನಿ ಮೋದಿ ಓಮಾನ್​ನ ಮಸ್ಕತ್​ಗೆ ಪ್ರಯಾಣ ಬೆಳೆಸಿದರು. ಓಮಾನ್ ಉಪಪ್ರಧಾನಿ ಸಯ್ಯದ್ ಫದ್ ಮಹಮೌದ್ ಅಲ್ ಸೈದ್ ಪ್ರಧಾನಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲಿ ನೆರೆದಿದ್ದ ಭಾರತೀಯ ಮೂಲದವರಿಗೆ ಶುಭಾಶಯ ಕೋರಿದ ಮೋದಿ, ಕೆಲವರಿಗೆ ಹಸ್ತಾಕ್ಷರವನ್ನೂ ನೀಡಿದರು. ಓಮಾನ್​ಗೆ ಎರಡು ದಿನದ ಪ್ರವಾಸದಲ್ಲಿರುವ ಅವರು ಅಲ್ಲಿನ ಪ್ರಧಾನಿ, ಸುಲ್ತಾನರನ್ನು ಭೇಟಿ ಮಾಡಲಿದ್ದಾರೆ.

Leave a Reply

Your email address will not be published. Required fields are marked *