ಜೀವನದ ಪ್ರತಿ ಕ್ಷಣ ದೇಶಕ್ಕೆ ಸಮರ್ಪಿತ ಎಂದ ಪ್ರಧಾನಿ ನರೇಂದ್ರ ಮೋದಿ: ಬಿಜೆಪಿ ಕಚೇರಿಯಲ್ಲಿ ವಿಜಯ ಭಾಷಣ

ನವದೆಹಲಿ: ತಮ್ಮ ಜೀವನದ ಪ್ರತಿಯೊಂದು ಕ್ಷಣ ಮತ್ತು ಪ್ರತಿಯೊಂದು ಕಾರ್ಯ ದೇಶದ ಜನತೆಗೆ, ದೇಶದ ಏಳಿಗೆಗೆ ಸಮರ್ಪಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿನ ಅಭೂತಪೂರ್ವ ಸಾಧನೆ ಬಳಿಕ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ವಿಜಯ ಭಾಷಣ ಮಾಡಿದರು. ಇನ್ನು ಮುಂದೆ ದೇಶದಲ್ಲಿ ಇರುವುದು ಎರಡೇ ಜಾತಿ. ಒಂದು ಬಡತನದ್ದು ಹಾಗೂ ಇನ್ನೊಂದು ಬಡತನ ನಿರ್ಮೂಲನೆ ಮಾಡಲು ಬಯಸುವವರದ್ದು ಎಂದರು.

ಅಂದಾಜು 45 ನಿಮಿಷ ನಿರರ್ಗಳವಾಗಿ ಮಾತನಾಡಿದ ಪ್ರಧಾನಿ ಮೋದಿ ಅವರು ಮಾತಿಗಾರಂಭಿಸುವ ಮುನ್ನ ಬಿಜೆಪಿ ಕಚೇರಿಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮೋದಿ, ಮೋದಿ… ಎಂದು ಘೋಷಣೆ ಕೂಗಿದರು. ಆದರೆ, ನೀವೆಲ್ಲರೂ ನನ್ನಂಥ ಫಕೀರನ ಜೋಳಿಗೆಗೆ ಮತಭಿಕ್ಷೆ ಹಾಕಿದ್ದೀರಿ ಎಂದು ಭಾವುಕರಾಗಿ ಹೇಳುತ್ತಿರುವಂತೆ ಮೋದಿ, ಮೋದಿ ಎಂಬ ಕೂಗು ಮತ್ತಷ್ಟು ಹೆಚ್ಚಾಯಿತು. ಕೊನೆಗೆ ಮೋದಿ ಅವರೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮಾತು ಮುಂದುವರಿಸಿದ್ದು ವಿಶೇಷವಾಗಿತ್ತು.

ಇದೀಗ ಪಕ್ಕಾ ಮನೆಯಲ್ಲಿ ವಾಸವಾಗಿರುವವರು, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಮಧ್ಯಮ ವರ್ಗದವರು, ರೈತರಿಗೆ ತಮ್ಮ ಗೆಲುವಿನ ಶ್ರೇಯ ಸಲ್ಲುವುದಾಗಿ ಹೇಳಿದರು. ಅಲ್ಲದೆ, ನವಭಾರತ ನಿರ್ಮಾಣಕ್ಕೆ ಸಮಯ ಈಗ ಒದಗಿ ಬಂದಿರುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ವಿಜಯ ಭಾಷಣ ಮಾಡಲೆಂದು ಬಿಜೆಪಿಯ ಕೇಂದ್ರ ಕಚೇರಿಗೆ ಪ್ರಧಾನಿ ಆಗಮಿಸುತ್ತಿದ್ದಂತೆ ಹೂವಿನ ಮಳೆ ಸುರಿಸಿ ಬರಮಾಡಿಕೊಳ್ಳಲಾಯಿತು. ಅದೇ ಸಂದರ್ಭದಲ್ಲಿ ಮಳೆ ಆಗುತ್ತಿತ್ತು. ಇದರಿಂದಾಗಿ ಅಂಗರಕ್ಷಕ ಪಡೆ ಸಿಬ್ಬಂದಿ ಕೊಡೆ ಹಿಡಿಯಲು ಮುಂದಾದಾಗ ಗದರಿದ ಪ್ರಧಾನಿ ಅವರನ್ನು ಪಕ್ಕಕ್ಕೆ ಸರಿಸಿದರು. (ಏಜೆನ್ಸೀಸ್​)