ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.
ನರೇಂದ್ರ ಮೋದಿ
ಈ ವರ್ಷ ವಿದೇಶ ಸಂಚಾರ ಕಡಿಮೆ ಮಾಡಬೇಕು. ‘ನೀವು ಈ ರೀತಿ ಕಾಲಿಗೆ ಚಕ್ರ ಕಟ್ಟಿಕೊಂಡವರ ಹಾಗೆ ದೇಶ ಸುತ್ತುತ್ತಾ ಇದ್ದರೆ ತ್ರಿಲೋಕ ಸಂಚಾರಿ ಎಂಬ ನನ್ನ ಖ್ಯಾತಿಗೆ ಭಂಗ ಬರುತ್ತದೆ’ ಅಂತ ನಾರದ ಮಹರ್ಷಿಗಳು ಟ್ವೀಟ್ ಮಾಡಿದ್ದಾರೆ. ಅದೇ ರೀತಿ ನನ್ನ ದುಬಾರಿ ವೇಷಭೂಷಣಗಳ ಬಗ್ಗೆ ವಿರೋಧ ಪಕ್ಷದವರು ಸದಾ ಟೀಕೆ ಮಾಡುತ್ತಿರುವುದರಿಂದ ಇನ್ನು ಮುಂದೆ ವನವಾಸಕ್ಕೆ ಹೊರಟ ಶ್ರೀರಾಮಚಂದ್ರನಂತೆ ನಾರುಡುಗೆಯನ್ನು ಧರಿಸಲು ನಿರ್ಧರಿಸಿದ್ದೇನೆ. ಹತ್ತೊಂಬತ್ತರ ಕೊನೆಯಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ಕಮಲ ಮುದುಡಿತ್ತು. ಇಪ್ಪತ್ತರಲ್ಲಿ ಡೆಲ್ಲಿ ಮತ್ತು ಬಿಹಾರದಲ್ಲಿ ‘ಹಾರ್’ ಆಗಬಾರದು. ಪಕ್ಷದ ಕಾರ್ಯಕರ್ತರು ‘ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ’ ಅನ್ನುವ ಕನ್ನಡ ಚಿತ್ರಗೀತೆಯನ್ನು ಆಗಾಗ ಕೇಳಿ ಸ್ಪೂರ್ತಿ ಪಡೆದುಕೊಳ್ಳಬೇಕು.