ಜಿ-20 ಶೃಂಗಕ್ಕೆ ಅರ್ಜೆಂಟೀನಾಗೆ ಮೋದಿ

ನವದೆಹಲಿ: ಶುಕ್ರವಾರದಿಂದ ಎರಡು ದಿನ ನಡೆಯುವ ಜಿ-20 ಶೃಂಗದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಜೆ ಅರ್ಜೆಂಟೀನಾಗೆ ತೆರಳಲಿದ್ದಾರೆ. ವಾಣಿಜ್ಯ ಸಮರ ಹಾಗೂ ಇರಾನ್ ಮೇಲಿನ ಅಮೆರಿಕ ನಿರ್ಬಂಧದ ಹಿನ್ನೆಲೆಯಲ್ಲಿ ಈ ಬಾರಿಯ 13ನೇ ಶೃಂಗ ಆವೃತ್ತಿ ಭಾರಿ ಮಹತ್ವ ಪಡೆದುಕೊಂಡಿದೆ.

ಶೃಂಗದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಸೇರಿ ಬ್ರಿಕ್ಸ್ ದೇಶಗಳ ಮುಖ್ಯಸ್ಥರ ಜತೆಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ಮಾತುಕತೆ ಕುರಿತು ಇನ್ನೂ ಖಾತ್ರಿಯಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಜಿ-20 ಶೃಂಗದಲ್ಲಿ ಪ್ರಧಾನಿ ಮೋದಿ ಅವರು ಡಿಜಿಟಲ್ ಇಂಡಿಯಾ, ಆಯುಷ್ಮಾನ್ ಭಾರತ್, ಮಣ್ಣಿನ ಆರೋಗ್ಯದ ಕಾರ್ಡ್ ಸೇರಿ ಇತರ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ. ಇದಲ್ಲದೇ ಜಿ-20 ಶೃಂಗಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 10 ವರ್ಷಗಳ ಹಿನ್ನೋಟ ಹಾಗೂ ಮುನ್ನೋಟದ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.

ಪ್ರಧಾನಿಗೆ ಪಾಕ್ ಆಹ್ವಾನ: ಪಾಕಿಸ್ತಾನದಲ್ಲಿ ನಡೆಯಲಿರುವ 20ನೇ ಸಾರ್ಕ್ ಶೃಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಡಾ.ಮೊಹಮದ್ ಫೈಸಲ್ ಖಾತ್ರಿಪಡಿಸಿದ್ದಾರೆ. 2016ರಲ್ಲಿ ಆಯೋಜಿಸಲಾಗಿದ್ದ ಸಾರ್ಕ್ ಸಮ್ಮೇಳನವು ಭಾರತದ ಪ್ರತಿರೋಧದ ಹಿನ್ನೆಲೆ ರದ್ದಾಗಿತ್ತು. ಭಾರತವು ಭಾಗವಹಿಸುವುದಿಲ್ಲ ಎನ್ನುತ್ತಿದ್ದಂತೆ ಉಳಿದ ಸಾರ್ಕ್ ರಾಷ್ಟ್ರಗಳು ಕೂಡ ಸಮ್ಮೇಳನವನ್ನು ಬಹಿಷ್ಕರಿಸಿದ್ದವು.