ಬಂದರ್ ಸೆರಿ ಬೇಗವಾನ್: ಭಾರತವು ಅಭಿವೃದ್ಧಿಯ ನೀತಿಯನ್ನು ಬೆಂಬಲಿಸುತ್ತದೆಯೇ ಹೊರತು ವಿಸ್ತರಣಾ ನೀತಿಯನ್ನು ಅಲ್ಲ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚೀನಾವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಬ್ರೂನೈ ಭೇಟಿಯನ್ನು ಪೂರ್ಣಗೊಳಿಸಿದ ನಂತರ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ಮೋದಿ ಬ್ರೂನೈ ಮುಖ್ಯಸ್ಥ ಸುಲ್ತಾನ್ ಹಸ್ಸಾನಲ್ ಬೊಲ್ಕಿಯಾ ಜತೆ ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಿದರು. ಭಾರತ ಮತ್ತು ಬ್ರೂನೈ ನಡುವಿನ ಸಂಬಂಧವನ್ನು ಇನ್ನಷ್ಟು ಉತ್ತಮಗೊಳಿಸಲುವ ಬಗ್ಗೆ ಚರ್ಚೆ ನಡೆಸಿದರು. ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಚೀನಾ ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದೆ. ಹಲವು ದೇಶಗಳ ಜತೆ ವಿವಾದವನ್ನೂ ಹೊಂದಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸಲು ಯತ್ನಿಸುತ್ತಿದೆ. ಆದರೆ ಫಿಲಿಪ್ಪೀನ್ಸ್, ಮಲೇಷ್ಯಾ, ವಿಯೆಟ್ನಾಂ, ಬ್ರೂನೈ ಮತ್ತು ತೈವಾನ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ನೀತಿ ಸಂಹಿತೆಯನ್ನು ಅಂತಿಮಗೊಳಿಸಬೇಕು. ಭಾರತವು ಯಾವಾಗಲೂ ಆಸಿಯಾನ್ ಕೇಂದ್ರೀಕರಣಕ್ಕೆ ಆದ್ಯತೆ ನೀಡಿದೆ. ಅದನ್ನು ಮುಂದುವರಿಸಲಾಗುತ್ತದೆ. ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ನ್ಯಾವಿಗೇಷನ್ ಮತ್ತು ಓವರ್ಫ್ಲೈಟ್ ಸ್ವಾತಂತ್ರ್ಯಕ್ಕೆ ಭಾರತ ಬೆಂಬಲ ನೀಡುತ್ತದೆ. ಶಾಂತಿ, ಸ್ಥಿರತೆ, ಕಡಲ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತ ಬದ್ಧವಾಗಿದೆ. ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕಿದೆ. ಭಾರತದ ‘ಆಕ್ಟ್ ಈಸ್ಟ್’ ನೀತಿಯಲ್ಲಿ ಬ್ರೂನೈ ಪ್ರಮುಖ ಪಾಲುದಾರ ದೇಶವಾಗಿದೆ. ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವೆ ವ್ಯಾಪಾರ ಸಂಬಂಧಗಳು, ವಾಣಿಜ್ಯ ಚಟುವಟಿಕೆ ಮತ್ತಷ್ಟು ವಿಸ್ತರಿಸಲಿವೆ. ಭಾರತ ಮತ್ತು ಬ್ರೂನೈ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿವೆ ಎಂದು ಪ್ರಧಾನಿ ಹೇಳಿದರು.
ಸಿಂಗಾಪುರದಲ್ಲಿ ಪ್ರಧಾನಿ ಮೋದಿ: ಭಾರತ ಜಾಗತಿಕ ಹೂಡಿಕೆಗೆ ಆದರ್ಶ ತಾಣ ಎಂದು ಬಣ್ಣನೆ
ಸಿಂಗಾಪುರ: ಬ್ರೂನೈ ಭೇಟಿಯ ನಂತರ ಪ್ರಧಾನಿ ನರೇಂದ್ರ ಮೋದಿ ಸಿಂಗಾಪುರಕ್ಕೆ ಆಗಮಿಸಿದ್ದಾರೆ. ಭಾರತ-ಸಿಂಗಾಪುರದ ಸ್ನೇಹವನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದೇನೆ. ಸುಧಾರಣೆಗಳು ಮತ್ತು ಯುವಶಕ್ತಿ, ಪ್ರತಿಭೆಗಳಿಂದ ಭಾರತವು ಹೂಡಿಕೆಗೆ ಉತ್ತಮ ತಾಣವಾಗಿದೆ. ಸಿಂಗಾಪುರದ ಜತೆ ನಿಕಟ ಸಾಂಸ್ಕೃತಿಕ ಸಂಬಂಧ ಗಳನ್ನು ಸಹ ಎದುರು ನೋಡುತ್ತಿದ್ದೇವೆ ಎಂದು ಪ್ರಧಾನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಸಿಂಗಾಪುರದ ಲಯನ್ ಸಿಟಿಗೆ ಬುಧವಾರ ಆಗಮಿಸಿದರು. ಸಿಂಗಾಪುರದ ಗೃಹ ಮತ್ತು ಕಾನೂನು ಸಚಿವ ಕೆ. ಷಣ್ಮುಗಂ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಗುರುವಾರ ಅಲ್ಲಿನ ಸಂಸತ್ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಅಲ್ಲಿನ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಅವರ ಜತೆ ಸಭೆ ನಡೆಸಲಿದ್ದಾರೆ. ಸಿಂಗಾಪುರ ನಮ್ಮ ಪಾಲುದಾರ ದೇಶವಾಗಿದೆ. ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳು, ಸುಧಾರಿತ ಉತ್ಪಾದನೆ, ಡಿಜಿಟಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮೊದಲು 2018ರಲ್ಲಿ ಸಿಂಗಾಪುರಕ್ಕೆ ಮೋದಿ ಭೇಟಿ ನೀಡಿದ್ದರು.
ಹೂಡಿಕೆ ದುಪ್ಪಟ್ಟು: 2028ರ ವೇಳೆಗೆ ಭಾರತದಲ್ಲಿ ಹೂಡಿಕೆಯ ಮೊತ್ತವನ್ನು ದುಪ್ಪಟ್ಟುಗೊಳಿಸುವುದಾಗಿ ಸಿಂಗಾಪುರದ ಕೆಪಿಟಾಲ್ಯಾಂಡ್ ಕಂಪನಿ ತಿಳಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕಂಪನಿ ಸುಮಾರು 47 ಸಾವಿರ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ. ಇದು ಸಿಂಗಾಪುರದ ಪ್ರಮುಖ ರಿಯನ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿದೆ.
ಡೋಲು ಬಾರಿಸಿದರು!: ಸಿಂಗಾಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಲಾಯಿತು. ಭಾರತೀಯ ಕಲಾ ತಂಡಗಳು ನೃತ್ಯ ಪ್ರದರ್ಶನ ಮಾಡಿದವು. ಡೋಲು ಇನ್ನಿತರ ವಾದ್ಯಗಳನ್ನು ನುಡಿಸಲಾಗುತ್ತಿತ್ತು. ಈ ವೇಳೆ ಪ್ರಧಾನಿ ಮೋದಿ ಕೂಡ ಡೋಲು ಬಾರಿಸಿ ಗಮನ ಸೆಳೆದರು. ಅಲ್ಲಿದ್ದವರು ಚಪ್ಪಾಳೆ ತಟ್ಟಿ, ಸಂತಸ ವ್ಯಕ್ತ ಪಡಿಸಿದರು.
ಸೆಮಿಕಂಡಕ್ಟರ್ ಘಟಕಕ್ಕೆ ಭೇಟಿ : ಪ್ರಧಾನಿ ಮೋದಿ ಸಿಂಗಾಪುರದ ಪ್ರಧಾನಿ ಜತೆಗೆ ಸೆಮಿಕಂಡಕ್ಟರ್ ತಯಾರಿಕಾ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಸೆಮಿಕಂಡಕ್ಟರ್ ವಲಯದಲ್ಲಿ ಮಾನವಶಕ್ತಿ ಕೌಶಲ್ಯದಲ್ಲಿ ಸಹಕಾರ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಸಿಂಗಾಪುರ ಸಂಸ್ಥೆಗಳಿಂದ ಭಾರತದ ಯುವಕರಿಗೆ ತರಬೇತಿ ನೀಡಲಾಗುತ್ತದೆ. ಉತ್ತಮ ಕೌಶಲ್ಯ ಮತ್ತು ಅವಕಾಶಕ್ಕೆ ಇದು ನೆರವಾಗಲಿದೆ. ಭಾರತದ ಸೆಮಿಕಂಡಕ್ಟರ್ ಉದ್ಯಮ ಬೆಳವಣಿಗೆಗೆ ಇದು ಸಹಾಯಕವಾಗಲಿದೆ.
ಆಂಧ್ರದಲ್ಲಿ ಭೀಕರ ಪ್ರವಾಹ: ಭಾದಿತರ ಸಂಖ್ಯೆ 6.44 ಲಕ್ಷಕ್ಕೆ ಏರಿಕೆ, ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ.ಪರಿಹಾರ!