ಲಾಲಿಪಾಪ್ ಕಂಪನಿ ಕಾಂಗ್ರೆಸ್ ಭರವಸೆ ನೀವು ನಂಬುತ್ತೀರಾ?

ಲಖನೌ: ಸಾಲಮನ್ನಾ ಮಾಡುವುದಾಗಿ ರೈತರಿಗೆ ಭರವಸೆ ನೀಡಿ ಕಾಂಗ್ರೆಸ್, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಅಧಿಕಾರಕ್ಕೆ ಬಂದಿತು. ಆದರೆ, ಉಭಯ ರಾಜ್ಯಗಳ ರೈತರು ಯೂರಿಯಾಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಲಾಲಿಪಾಪ್ ಕಂಪನಿಯನ್ನು ನೀವು ನಂಬುತ್ತೀರಾ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ಉತ್ತರಪ್ರದೇಶದ ಘಾಜಿಪುರ್​ನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್​ಭರ್ ಸಮುದಾಯದ ದಿಗ್ಗಜ ರಾಜಾ ಸುಹೇಲ್​ದೇವ್ ಸ್ಮರಣಾರ್ಥ ಅಂಚೆ ಚೀಟಿಯನ್ನು ಪ್ರಧಾನಿ ಬಿಡುಗಡೆ ಮಾಡಿದರು. ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ, ‘ ಕರ್ನಾಟಕ ದಲ್ಲಿ ಜೆಡಿಎಸ್​ನೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿರುವ ಕಾಂಗ್ರೆಸ್ ಕೂಡ ರೈತರಿಗೆ ಸಾಲ ಮನ್ನಾ ಸೇರಿ ಹಲವು ಭರವಸೆಗಳ ಲಾಲಿಪಾಪ್​ನ್ನು ಹಂಚಿತ್ತು. ಆದರೆ, 800 ರೈತರಿಗೆ ಮಾತ್ರವೇ ಇದರ ಲಾಭ ತಲುಪಿತು’ ಎಂದರು.

ರೈತರ ಹಿಂದೆ ಪೊಲೀಸರನ್ನು ಛೂ ಬಿಟ್ಟರು. 6 ಸಾವಿರ ಕೋಟಿ ರೂ. ಸಾಲದ ಬದಲು 60 ಕೋಟಿ ರೂ. ಸಾಲವನ್ನು ಮಾತ್ರ ಮನ್ನಾ ಮಾಡಿದರು. ಸಿಎಜಿ ವರದಿಯಲ್ಲಿ 35 ಲಕ್ಷ ರೂ. ರೈತರಲ್ಲದವರಿಗೆ ತಲುಪಿದೆ ಎನ್ನಲಾಗಿದೆ. ಹಾಗಿದ್ದರೆ ಈ ಹಣ ಎಲ್ಲಿ ಹೋಯಿತು ಎಂದು ಪ್ರಧಾನಿ ಪ್ರಶ್ನಿಸಿದರು. ಬಳಿಕ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿ ಯಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ದಕ್ಷಿಣ ಏಷ್ಯಾದ ಪ್ರಾದೇಶಿಕ ಕೇಂದ್ರಕ್ಕೆ ಚಾಲನೆ ನೀಡಿದರು. ಪಿಂಚಣಿ ವಿತರಣೆಯ ಸಮಗ್ರ ನಿರ್ವಹಣೆಯ ಸಾಫ್ಟ್ ವೇರ್ ‘ಸಂಪನ್ನ’ ಉದ್ಘಾಟಿಸಿ, ಒಟ್ಟು 180 ಕೋಟಿ ಮೊತ್ತದ 15 ಯೋಜನೆಗಳಿಗೆ ಚಾಲನೆ ನೀಡಿದರು.

ನನ್ನ ಕಾಶಿ ಸದಾ ಮುಂದೆ: ವಾರಾಣಸಿಯ ದೀನ್​ದಯಾಳ್ ಹಸ್ತಕಲಾ ಸಂಕುಲ್​ನಲ್ಲಿ ಆಯೋಜನೆಗೊಂಡಿದ್ದ ಸಮ್ಮೇಳನದಲ್ಲಿ ಪ್ರಧಾನಿ ಪಾಲ್ಗೊಂಡರು. ಶತಮಾನಗಳಿಂದ ಕಾಶಿ ಜಾಗತಿಕ ಮಾರುಕಟ್ಟೆಯಾಗಿ ರೂಪುಗೊಂಡಿದೆ. ರೇಷ್ಮೆಸೀರೆಯಾಗಲಿ ಅಥವಾ ಗೊಂಬೆಯಾಗಿರಲಿ, ನನ್ನ ಕಾಶಿ ಎಲ್ಲದರಲ್ಲೂ ಸದಾ ಮುಂದೆ ಇರುತ್ತಿತ್ತು. ಈಗಲೂ ಇದೆ ಎಂದರು.

ಹಗಲಿರುಳು ಶ್ರಮಿಸುತ್ತಿದ್ದೇನೆ ದೇಶದ ಚೌಕಿದಾರ ಕಳ್ಳ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ನಿಮ್ಮ ಚೌಕಿದಾರ ದೇಶ, ದೇಶವಾಸಿಗಳು ಹಾಗೂ ಅವರ ಮಕ್ಕಳ ಶ್ರೇಯಸ್ಸಿಗಾಗಿ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾನೆ. ಈ ಚೌಕಿದಾರನಿಂದಾಗಿ ಕೆಲವು ಕಳ್ಳರಿಗೆ ರಾತ್ರಿಯ ನಿದ್ದೆಯೇ ಹಾರಿ ಹೋಗಿದೆ. ನನ್ನ ಮೇಲೆ ನೀವಿಟ್ಟಿರುವ ವಿಶ್ವಾಸ ಮತ್ತು ನಿಮ್ಮ ಆಶೀರ್ವಾದದಿಂದಾಗಿ ಇಂದಲ್ಲ ನಾಳೆ ಕಳ್ಳರನ್ನು ಸೂಕ್ತ ಸ್ಥಳಕ್ಕೆ ಕಳಿಸಿಯೇ ತೀರುವೆ ಎಂದು ಹೇಳಿದರು.

ಅಲ್ಪಾವಧಿ ಲಾಭದ ಆಮಿಷಗಳನ್ನು ಒಡ್ಡಿ, ಭರವಸೆಗಳನ್ನು ನೀಡಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಇವೆಲ್ಲಾ ಸಾರ್ಥಕವಾಗುವುದಿಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಮಂತ್ರ. ಹಾಗಾಗಿ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪನ್ನ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ನಿಗದಿಪಡಿಸಲಾಗಿದೆ. ಇದು ನಮ್ಮ ಅಭಿವೃದ್ಧಿ ಮಾದರಿ.

| ನರೇಂದ್ರ ಮೋದಿ ಪ್ರಧಾನಿ