ಫೊನಿ ಅನಾಹುತ ವಿಚಾರಿಸಲು ಪ್ರಧಾನಿ ಕಾರ್ಯಾಲಯ ಮಮತಾ ಬ್ಯಾನರ್ಜಿ ಸಂಪರ್ಕಕ್ಕೆ ಯತ್ನಿಸಿದಾಗ ಬಂದ ಉತ್ತರ ಹೀಗಿತ್ತು…

ನವದೆಹಲಿ: ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಫೊನಿ ಅಬ್ಬರದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ತಿಳಿಯಲು ಒಡಿಶಾದ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲರನ್ನು ಪ್ರಧಾನಿ ನರೇಂದ್ರ ಮೋದಿ ಸಂರ್ಕಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕಡೆಗಣಿಸಿದೆ ಎಂಬ ಮಾಧ್ಯಮ ವರದಿಯನ್ನು ಪ್ರಧಾನಿ ಕಾರ್ಯಾಲಯ ತಳ್ಳಿಹಾಕಿದೆ.

ಮಮತಾ ಅವರನ್ನು ಸಂಪರ್ಕಿಸಲು ಅವರು ಎರಡು ಬಾರಿ ಯತ್ನಿಸಲಾಯಿತು. ಆದರೆ ಎರಡು ಬಾರಿಯು ಅವರೊಂದಿಗೆ ಮಾತನಾಡಲು ಅವಕಾಶ ದೊರೆಯಲಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿದೆ.

ಫೊನಿ ಚಂಡಮಾರುತದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ತಿಳಿಯಲು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಕೇಸರಿ ನಾಥ್​ ತ್ರಿಪಾಠಿ ಅವರೊಂದಿಗೆ ಮಾತ್ರ ಚರ್ಚಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್​ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ವರದಿಯಾದ ಬೆನ್ನಲ್ಲೇ ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ ನೀಡಿದೆ.

ಶನಿವಾರ ಬೆಳಗ್ಗೆ ಪ್ರಧಾನಿ ಕಾರ್ಯಾಲಯದ ಸಿಬ್ಬಂದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ ಅವರನ್ನು ಸಂಪರ್ಕಿಸಲು ಯತ್ನಿಸಿತು. ಮೊದಲ ಬಾರಿ ಮಾಡಿದಾಗ ಮಮತಾ ಅವರು ಪ್ರವಾಸದಲ್ಲಿದ್ದಾರೆ. ಬಳಿಕ ಕರೆ ಮಾಡುತ್ತಾರೆ ಎಂದು ಹೇಳಿದರು. ಎರಡನೇ ಬಾರಿ ಕರೆ ಮಾಡಿದಾಗ ಮಮತಾ ಅವರು ಕಚೇರಿಯಲ್ಲಿ ಇಲ್ಲ. ಅವರು ಬಂದ ಬಳಿಕ ಕರೆ ಮಾಡುತ್ತಾರೆ ಎಂದು ಅವರು ಕಚೇರಿ ಸಿಬ್ಬಂದಿ ಹೇಳಿದರು ಎಂದು ಪ್ರಧಾನಿ ಕಾರ್ಯಾಲಯ ವಿವರಣೆ ನೀಡಿದೆ.

ದಶಕಗಳ ಬಳಿಕ ಭಾರತ ಉಪಖಂಡದಲ್ಲಿ ಕಂಡುಬಂದಂತಹ ಭೀಕರ ಚಂಡಮಾರುತಗಳಲ್ಲಿ ಫೊನಿ ಕೂಡ ಒಂದಾಗಿದೆ. ಶುಕ್ರವಾರ ಒಡಿಶಾಗೆ ಅಪ್ಪಳಿಸಿದ ಫೊನಿ ಒಡಿಶಾದ ಹಲವೆಡೆ ಅಬ್ಬರಿಸಿತ್ತು. ಬಳಿಕ ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟಿತ್ತು. ಗಂಟೆಗೆ 100 ಕ್ಕೂ ಹೆಚ್ಚು ಕಿ.ಮೀ. ವೇಗವಾಗಿ ಬೀಸುತ್ತಿದ್ದ ಚಂಡಮಾರುತದಿಂದ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ರಾಜ್ಯಗಳಲ್ಲಿ ಅಪಾರ ಆಸ್ತಿ ಹಾನಿಯಾಗಿದೆ. ಆದರೆ, ಪ್ರಾಣಹಾನಿ ಕಡಿಮೆ ಆಗಿರುವುದು ಖುಷಿಯ ವಿಚಾರವಾಗಿದೆ. (ಏಜೆನ್ಸೀಸ್​)