ಚಿತ್ರ ವೀಕ್ಷಿಸಿದ ನಂತರ ಮೋದಿ ಬಯೋಪಿಕ್​ ಬಿಡುಗಡೆ ಕುರಿತು ನಿರ್ಧಾರ ತೆಗೆದುಕೊಳ್ಳಿ: ಸುಪ್ರೀಂ ಕೋರ್ಟ್​

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನವನ್ನಾಧರಿಸಿದ ‘ಪಿಎಂ ನರೇಂದ್ರ ಮೋದಿ’ ಚಿತ್ರವನ್ನು ವೀಕ್ಷಿಸಿ ಆ ನಂತರ ಚಿತ್ರ ಬಿಡುಗಡೆಗೆ ತಡೆ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಿ ಎಂದು ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದೆ.

ಕೇಂದ್ರ ಚುನಾವಣಾ ಆಯೋಗ ಚಿತ್ರ ಬಿಡುಗಡೆಗೆ ನೀಡಿದ್ದ ತಡೆಯನ್ನು ಪ್ರಶ್ನಿಸಿ ಚಿತ್ರತಂಡ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೋಯ್​, ಜಸ್ಟೀಸ್​ ದೀಪಕ್​ ಗುಪ್ತಾ ಮತ್ತು ಜಸ್ಟೀಸ್ ಸಂಜೀವ್​ ಖನ್ನಾ ಅವರಿದ್ದ ಪೀಠ ಕೇಂದ್ರ ಚುನಾವಣಾ ಆಯೋಗ ಚಿತ್ರ ಬಿಡುಗಡೆ ಕುರಿತು ತೀರ್ಮಾನ ತೆಗೆದುಕೊಂಡು ಆ ಕುರಿತು ವರದಿಯನ್ನು ಏಪ್ರಿಲ್​ 19ರೊಳಿಗೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಬೇಕು. ಚುನಾವಣಾ ಆಯೋಗ ನೀಡಿದ ವರದಿಯನ್ನು ಆಧರಿಸಿ ಏಪ್ರಿಲ್​ 22 ರಂದು ವಿಚಾರಣೆ ನಡೆಸಲಾಗುವುದು ಎಂದು ಆದೇಶಿಸಿದೆ.

ವಿಚಾರಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಚಿತ್ರವನ್ನು ವೀಕ್ಷಿಸಿದೆಯೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಪೂರ್ಣ ಚಿತ್ರ ಲಭ್ಯವಿಲ್ಲದ ಕಾರಣ ಟ್ರೇಲರ್​ ನೋಡಿ ಚಿತ್ರ ಬಿಡುಗಡೆಗೆ ತಡೆ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಪರ ವಕೀಲರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್​ ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಿದ ನಂತರ ಚಿತ್ರ ಬಿಡುಗಡೆಗೆ ತಡೆ ನೀಡಬೇಕೇ ಎಂಬ ಕುರಿತು ತೀರ್ಮಾನ ತೆಗೆದುಕೊಳ್ಳಿ ಎಂದು ಸೂಚಿಸಿದೆ. (ಏಜೆನ್ಸೀಸ್​)