ಸಿಬಿಐನಿಂದ ವರ್ಮಾ ಔಟ್

ನವದೆಹಲಿ: ದೇಶಾದ್ಯಂತ ಚರ್ಚೆಗೊಳಪಟ್ಟಿದ್ದ ದೇಶದ ಉನ್ನತ ತನಿಖಾ ಸಂಸ್ಥೆ ಸಿಬಿಐ ಆಂತರಿಕ ಸಂಘರ್ಷಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ನಡೆದ ಆಯ್ಕೆ ಸಮಿತಿ ಸಭೆಯು ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿ ಅಗ್ನಿಶಾಮಕ ವಿಭಾಗದ ಡಿಐಜಿ ಹುದ್ದೆಗೆ ವರ್ಗಾಯಿಸಿದೆ. ಸಿಬಿಐನ ಹಿರಿಯ ಅಧಿಕಾರಿ ನಾಗೇಶ್ವರ ರಾವ್ ಅವರನ್ನು ಮತ್ತೆ ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಈ ಪ್ರಕ್ರಿಯೆಯೊಂದಿಗೆ ಮೂರೂವರೆ ತಿಂಗಳಿಂದ ನಡೆಯುತ್ತಿದ್ದ ಸಿಬಿಐ ತಿಕ್ಕಾಟಕ್ಕೆ ತೆರೆ ಬಿದ್ದಂತಾಗಿದೆ.

48 ಗಂಟೆಯಲ್ಲಿ ಕೈ ತಪ್ಪಿದ ಅಧಿಕಾರ

ಸಿಬಿಐ ಆಂತರಿಕ ಸಂಘರ್ಷಕ್ಕೆ ಸಂಬಂಧಿಸಿದಂತೆ ಅ.23ರ ಮಧ್ಯರಾತ್ರಿ ನಡೆದ ಹೈಡ್ರಾಮಾದ ಬಳಿಕ ಸಿವಿಸಿ ಶಿಫಾರಸು ಮೇರೆಗೆ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು. ಆದರೆ ಈ ಪ್ರಕ್ರಿಯೆ ಕಾನೂನುಬಾಹಿರವಾಗಿದ್ದು ವರ್ಮಾ ಅವರನ್ನೇ ಸಿಬಿಐ ನಿರ್ದೇಶಕರನ್ನಾಗಿ ಮುಂದುವರಿಸಬೇಕೆಂದು ಸುಪ್ರೀಂಕೋರ್ಟ್ ಜ.8ರಂದು ತೀರ್ಪು ನೀಡಿತ್ತು. ಈ ಆದೇಶ ಹೊರಬಿದ್ದ 48 ಗಂಟೆ ಅವಧಿಯಲ್ಲೇ, ಉನ್ನತಾಧಿಕಾರ ಸಮಿತಿಯು ವರ್ಮಾ ಪದಚ್ಯುತಿ ತೀರ್ಮಾನ ಕೈಗೊಂಡಿದೆ.

ಗಂಭೀರ ಆರೋಪ ಕಾರಣ: ಸುಪ್ರೀಂಕೋರ್ಟ್ ಸೂಚನೆಯಂತೆ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಸಿಜೆಐ ಪ್ರತಿನಿಧಿ ಎ.ಕೆ. ಸಿಕ್ರಿ ಹಾಗೂ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ಅಲೋಕ್ ವರ್ವ ವಿರುದ್ಧ ಸಿವಿಸಿಗೆ ಸಲ್ಲಿಕೆಯಾಗಿರುವ ದೂರು ಆಧರಿಸಿ ಈ ಸಮಿತಿ ಸತತ ಎರಡು ದಿನ ಸಭೆ ನಡೆಸಿ ಅವರನ್ನು ಹುದ್ದೆಯಿಂದ ವಜಾ ಮಾಡಲು ನಿರ್ಧರಿಸಿದೆ. ಪ್ರಧಾನಿ ಮೋದಿ ಹಾಗೂ ನ್ಯಾ.ಸಿಕ್ರಿ ಅವರು ವರ್ಮಾ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ ಎಂದು ಅಭಿಪ್ರಾಯಪಟ್ಟು, ಅವರು ಹುದ್ದೆಯಲ್ಲಿ ಮುಂದುವರಿಯುವುದನ್ನು ಆಕ್ಷೇಪಿಸಿದರು.

ಖರ್ಗೆ ಪರ, ವಿರೋಧ!: 2017ರಲ್ಲಿ ಅಲೋಕ್ ವರ್ಮಾ ನೇಮಕಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದರು. ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಅನುಭವ ಇಲ್ಲದ ಅಧಿಕಾರಿಯನ್ನು ಸಿಬಿಐಗೆ ನೇಮಿಸಲಾಗುತ್ತಿದೆ. ರಾಜಕೀಯ ಕಾರಣಗಳಿಗೆ ಈ ನೇಮಕ ನಡೆದಿದೆ ಎಂಬುದು ಅವರ ಆಕ್ಷೇಪವಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಖರ್ಗೆ ವರ್ವ ಪರ ನಿಂತಿದ್ದಾರೆ.

ರಾಜಕೀಯ ಕಿತ್ತಾಟದ ವೇದಿಕೆ: ಕಳೆದ 4 ತಿಂಗಳಿಂದ ಸಿಬಿಐ ಆಂತರಿಕ ಕಿತ್ತಾಟ ರಾಜಕೀಯ ಕೆಸರೆರಚಾಟಕ್ಕೂ ವೇದಿಕೆಯಾಗಿತ್ತು. ವರ್ವ ವಿರುದ್ಧದ ಕ್ರಮಕ್ಕೆ ರಫೇಲ್ ಯುದ್ಧ ವಿಮಾನ ಖರೀದಿಯ ನಂಟಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ಕುರಿತು ಗುರುವಾರ ಕೂಡ ಟ್ವೀಟ್ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಫೇಲ್ ಪ್ರಕರಣದಲ್ಲಿ ರಕ್ಷಿಸಿಕೊಳ್ಳಲು ತರಾತುರಿಯಲ್ಲಿ ಹುದ್ದೆಯಿಂದ ತೆಗೆದುಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ವರ್ಗಾವಣೆ ಗೊಂದಲದ ಗೂಡು: ಅಲೋಕ್ ವರ್ಮಾರನ್ನು ರಜೆ ಮೇಲೆ ಕಳುಹಿಸಿದ ಬಳಿಕ ಸಿಬಿಐನಲ್ಲಿ ಸರಣಿ ವರ್ಗಾವಣೆ ನಡೆದಿತ್ತು. ಆದರೆ ಜ.9ರಂದು ಮರು ನಿಯೋಜನೆಯಾದ ಬಳಿಕ ಅ.23ರಿಂದ ಜ.8ರವರೆಗಿನ ಎಲ್ಲ ವರ್ಗಾವಣೆಗಳನ್ನು ರದ್ದುಗೊಳಿಸಿ ವರ್ವ ಆದೇಶ ಹೊರಡಿಸಿದ್ದರು. ಆದರೆ ಅವರು ಹುದ್ದೆಯಿಂದ ವಜಾಗೊಂಡ ಹಿನ್ನೆಲೆಯಲ್ಲಿ ಈ ಆದೇಶ ರದ್ದಾಗುವ ಸಾಧ್ಯತೆಯಿದೆ.

ವರ್ಮಾ ವಿರುದ್ಧದ ಆರೋಪ

 1. ಮೊಯಿನ್ ಖುರೇಷಿ ಪ್ರಕರಣದಲ್ಲಿ 2 ಕೋಟಿ ರೂ. ಕಿಕ್​ಬ್ಯಾಕ್
 2. ಲಾಲು ಪ್ರಸಾದ್ ಯಾದವ್ ವಿರುದ್ಧದ ಐಆರ್​ಸಿಟಿಸಿ ಹಗರಣದ ತನಿಖೆಗೆ ಅಡ್ಡಿ
 3. ಕಲ್ಲಿದ್ದಲು ಹಗರಣದ ಆರೋಪಿಗಳಿಗೆ ಕ್ಲೀನ್​ಚಿಟ್ ಕೊಡಿಸಲು ಯತ್ನ
 4. ಅಧೀನ ಅಧಿಕಾರಿಗಳಿಗೆ ಕಿರುಕುಳ

ಮುಂದಿನ ಹಾದಿಯೇನು?

 • ಕಾಯಂ ನಿರ್ದೇಶಕ ಹುದ್ದೆಗೆ ಪ್ರಧಾನಿ ನೇತೃತ್ವದಲ್ಲಿ ಮತ್ತೆ ಆಯ್ಕೆ ಸಮಿತಿ ಸಭೆ
 • ಆಯ್ಕೆ ಸಮಿತಿಗೆ ಕೇಂದ್ರ ಗೃಹ ಇಲಾಖೆಯಿಂದ ಅಧಿಕಾರಿಗಳ ಹೆಸರು ಶಿಫಾರಸು
 • ಆಯ್ಕೆ ಸಮಿತಿ ಸಭೆಯ ಬಹುಮತದ ನಿರ್ಧಾರದಿಂದ ನೂತನ ನಿರ್ದೇಶಕರ ನೇಮಕ

ವರ್ವಗಿರುವ ಅವಕಾಶವೇನು?

 • ಸಭೆಯ ನಿರ್ಧಾರ ಪ್ರಶ್ನಿಸಿ ಮತ್ತೆ ಸುಪ್ರೀಂಕೋರ್ಟ್ ಮೊರೆ
 • ಆಯ್ಕೆ ಸಮಿತಿ ಆದೇಶಕ್ಕೆ ಒಪ್ಪಿ ಹೊಸ ಹುದ್ದೆ ಸ್ವೀಕಾರ
 • ಹುದ್ದೆಗೆ ರಾಜೀನಾಮೆ ನೀಡಿ ಜನರ ಮುಂದೆ ಹೋಗುವುದು

ಸಿಬಿಐ ಕಿತ್ತಾಟದ ಹಾದಿ

 • 2017ರ ಜ.27: ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ವ ನೇಮಕ ? 2018ರ ಸೆಪ್ಟೆಂಬರ್: ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ಸಿವಿಸಿಗೆ ಅಲೋಕ್ ವರ್ವ ಹಾಗೂ ರಾಕೇಶ್ ಅಸ್ಥಾನಾ ಪರಸ್ಪರ ದೂರು ಸಲ್ಲಿಕೆ ? 
 • 2018ರ ಅ.4: ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ಸಿಬಿಐಗೆ ದೂರು ಸಲ್ಲಿಸಿದ ಪ್ರಶಾಂತ್ ಭೂಷಣ್, ಯಶವಂತ್ ಸಿನ್ಹಾ ಹಾಗೂ ಅರುಣ್ ಶೌರಿ
 • 2018ರ ಅ.21: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾಕೇಶ್ ಅಸ್ಥಾನಾ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ
 • 2018ರ ಅ.23: ರಾಕೇಶ್ ಅಸ್ಥಾನಾ ಹಾಗೂ ವರ್ವ ನಡುವಿನ ಆಂತರಿಕ ಕಿತ್ತಾಟ ಬಹಿರಂಗ
 • 2018ರ ಅ.23ರ ಮಧ್ಯರಾತ್ರಿ: ಸಿವಿಸಿ ಶಿಫಾರಸು ಆಧರಿಸಿ ಅಲೋಕ್ ವರ್ವ ಹಾಗೂ ರಾಕೇಶ್ ಅಸ್ಥಾನಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧಾರ
 • 2018ರ ಅ.24: ಸರ್ಕಾರದ ಕ್ರಮ ವಿರೋಧಿಸಿ ಸುಪ್ರೀಂ ಕೋರ್ಟ್ ಮೊರೆಹೋದ ವರ್ವ
 • 2018ರ ಅ.26: ವರ್ವ ವಿರುದ್ಧದ ಸಿವಿಸಿ ತನಿಖೆಗೆ 2 ವಾರದ ಕಾಲಮಿತಿ ನಿಗದಿಗೊಳಿಸಿದ ಸುಪ್ರೀಂ ಕೋರ್ಟ್
 • 2018ರ ಡಿ.7: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
 • 2019ರ ಜ.8: ಅಲೋಕ್ ವರ್ವ ಮರುನೇಮಕಕ್ಕೆ ಆದೇಶಿಸಿದ ಸುಪ್ರೀಂ ಕೋರ್ಟ್
 • 2019ರ ಜ.10: ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿ ಸಭೆ, ವರ್ವ ವಜಾ ನಿರ್ಧಾರ

Leave a Reply

Your email address will not be published. Required fields are marked *