ರಫೇಲ್‌ ಡೀಲ್‌ನಲ್ಲಿ ಪ್ರಧಾನಿ ಮೋದಿ ನೇರವಾಗಿ ಭಾಗಿಯಾಗಿರುವುದು ಸ್ಪಷ್ಟ: ರಾಹುಲ್‌ ಗಾಂಧಿ

ನವದೆಹಲಿ: ರಫೇಲ್‌ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಿಂಬಾಗಿಲ ಮಾತುಕತೆ ಕುರಿತ ಮಾಧ್ಯಮ ವರದಿಯನ್ನು ಮುಂದಿಟ್ಟುಕೊಂಡು ಏಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮತ್ತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ನೇರವಾಗಿ ರಫೇಲ್‌ ಒಪ್ಪಂದದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಪ್ರಧಾನ ಮಂತ್ರಿ ಕಾರ್ಯಾಲಯದ ಆದೇಶದ ಮೇರೆಗೆ ರಫೇಲ್‌ ರಕ್ಷಣಾ ಒಪ್ಪಂದದಲ್ಲಿ ಭಾರತ ಮತ್ತು ಫ್ರಾನ್ಸ್‌ ಹಿಂಬಾಗಿಲ ಮಾತುಕತೆಯನ್ನು ನಡೆಸಿವೆ ಎಂದು ಶುಕ್ರವಾರ ಮಾದ್ಯಮದಲ್ಲಿ ಸುದ್ದಿಯೊಂದು ಪ್ರಕಟಗೊಂಡಿದ್ದು, ಇದಕ್ಕೆ ರಕ್ಷಣಾ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನು ರಾಹುಲ್‌ ಗಾಂಧಿ ಪ್ರಸ್ತಾಪಿಸಿ ಮೋದಿ ವಿರುದ್ಧ ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಸ್ವತಃ ವಾಯುಪಡೆಯ 30 ಸಾವಿರ ಕೋಟಿ ರೂ.ಗಳನ್ನು ಲೂಟಿ ಮಾಡಿದ್ದಾರೆ ಮತ್ತು ಅದನ್ನು ಅನಿಲ್‌ ಅಂಬಾನಿಗೆ ನೀಡಿದ್ದಾರೆ. ಈ ಕುರಿತು ವರ್ಷದ ಹಿಂದೆಯೇ ನಾವು ಧ್ವನಿ ಎತ್ತಿದ್ದೆವು. ಈ ಕುರಿತು ರಕ್ಷಣಾ ಸಚಿವಾಲಯದ ಅಧಿಕಾರಿಗಳೇ ಹೇಳಿರುವಂತೆ ಪ್ರಧಾನ ಮಂತ್ರಿಯವರೇ ಫ್ರೆಂಚ್‌ ಸರ್ಕಾರದೊಂದಿಗೆ ಹಿಂಬಾಗಿಲ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ರಫೇಲ್‌ ಒಪ್ಪಂದದ ತನಿಖೆಯನ್ನು ಜಂಟಿ ಸಂಸದೀಯ ಕಮಿಟಿ(ಜೆಪಿಸಿ)ಗೆ ಒಪ್ಪಿಸಬೇಕು ಎಂದು ಪುನಃ ಒತ್ತಾಯಿಸಿರುವ ಅವರು, ರಫೇಲ್‌ ಒಪ್ಪಂದ ಕುರಿತಾಗಿ ಜೆಪಿಸಿ ತನಿಗೆಯಾಗಬೇಕೆಂದು ನಾವು ಈ ಮೊದಲೇ ಹೇಳಿದ್ದೆವು. ಆದರೆ ಈಗ ಸಚಿವಾಲಯವೇ ಹೇಳಿದಂತೆ, ಪ್ರಧಾನಿಯವರೇ ಫ್ರೆಂಚ್‌ ಕಂಪನಿಯೊಂದಿಗೆ ಹಿಂಬಾಗಿಲ ಮಾತುಕತೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರನ್ನು ಭೇಟಿ ಮಾಡಿದಾಗ ರಫೇಲ್‌ ಸಮಸ್ಯೆ ಕುರಿತಂತೆ ಮಾಜಿ ರಕ್ಷಣಾ ಸಚಿವರೊಂದಿಗೆ ಯಾವುದೇ ವಿಚಾರವನ್ನು ಚರ್ಚಿಸಿಲ್ಲ. ಅವರಿಗೆ ಮೊದಲೇ ಹೇಳಿದ್ದೆ ನಾನು ಅವರನ್ನು ಭೇಟಿ ಮಾಡುತ್ತಿರುವುದು ರಫೇಲ್‌ ಕುರಿತು ಮಾತನಾಡಲು ಅಲ್ಲ. ಆರೋಗ್ಯ ವಿಚಾರಣೆಗಾಗಿ ಬಂದಿರುವೆ ಎಂದು ತಿಳಿಸಿದ್ದೆ ಎಂದು ರಾಹುಲ್ ತಿಳಿಸಿದ್ದಾರೆ. (ಏಜೆನ್ಸೀಸ್)